

ಬೆಂಗಳೂರು: ಭಾರತೀಯ ಕ್ರಿಕೆಟ್ ಲೋಕದ ದಿಗ್ಗಜ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಐಪಿಎಲ್ ಆಟಕ್ಕೆ ನಿವೃತ್ತಿ ಘೋಷಿಸಿರುವುದು ಕೋಟ್ಯಂತರ ಅಭಿಮಾನಿಗಳಿಗೆ ಭಾವುಕ ಕ್ಷಣವಾಗಿ ಪರಿಣಮಿಸಿದೆ.
ಮೈದಾನದಲ್ಲಿ ತಮ್ಮ ನೆಚ್ಚಿನ 'ತಲಾ' ಧೋನಿಯನ್ನು ಮತ್ತೆ ಬ್ಯಾಟಿಂಗ್ ಮಾಡುವುದನ್ನು ನೋಡಲು ಸಾಧ್ಯವಾಗುವುದಿಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿದೆ. ಈ ನಡುವೆ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಹಂಚಿಕೊಂಡಿರುವ ಭಾವುಕ ಸಂದೇಶ ಎಲ್ಲರ ಗಮನ ಸೆಳೆದಿದೆ. ಈ ಪೋಸ್ಟ್ ಅಭಿಮಾನಿಗಳ ಹೃದಯ ಗೆದ್ದಿದ್ದು, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 5.44 ಲಕ್ಷಕ್ಕೂ ಅಧಿಕ ಲೈಕ್ಗಳನ್ನು ಪಡೆದು ಭಾರಿ ವೈರಲ್ ಆಗಿದೆ.
ಐಪಿಎಲ್ 2027ರಿಂದ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಾರ್ಗದರ್ಶಕನಾಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ತಂಡ ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ ಸಾಕ್ಷಿ ಇನ್ಸ್ಟಾಗ್ರಾಂನಲ್ಲಿ ಪತಿಗಾಗಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
ಧೋನಿಯ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ಸುದೀರ್ಘ ಪತ್ರ ಬರೆಯುವ ಬದಲು, ಕೆಲವೇ ಸಾಲುಗಳಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಕೆಲವು ಅಧ್ಯಾಯಗಳು ಮುಕ್ತಾಯಗೊಳ್ಳುವುದು ಸುಂದರವಾದ ಹೊಸ ಅಧ್ಯಾಯಗಳು ಆರಂಭವಾಗುವುದಕ್ಕಾಗಿ" ಎಂದು ಹೃದಯದ ಚಿಹ್ನೆಯೊಂದಿಗೆ ಬರೆದುಕೊಂಡಿದ್ದಾರೆ.
ಈ ಪೋಸ್ಟ್ನಲ್ಲಿ ಧೋನಿ ಪರ್ವತಗಳ ಸುಂದರ ದೃಶ್ಯವನ್ನು ಶಾಂತವಾಗಿ ವೀಕ್ಷಿಸುತ್ತಿರುವ ವಿಡಿಯೋ ಇದೆ. ಹಿನ್ನೆಲೆಯಲ್ಲಿರುವ ಜೆಜೆ ಹೆಲ್ಲರ್ ಅವರ 'ಆಲ್ಡ್ ಲ್ಯಾಂಗ್ ಸೈನ್' ಹಾಡಿನ ಸುಮಧುರ ಸಂಗೀತ ವಿದಾಯದ ಕ್ಷಣಕ್ಕೆ ಮತ್ತಷ್ಟು ಭಾವುಕ ಸ್ಪರ್ಶ ನೀಡಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಹೊಸ ಆರಂಭದತ್ತ ಸಾಗುವ ಭಾವನೆಯನ್ನು ಈ ಹಾಡು ಮೂಡಿಸಿದೆ.
ಮಾಹಿ ಬೆಂಬಲಿಸಿದ ಅಭಿಮಾನಿಗಳಿಗೆ ಸಾಕ್ಷಿ ಧನ್ಯವಾದ
ಇದೇ ವೇಳೆ ಸಾಕ್ಷಿ ಅವರು, ತಮ್ಮ ಪತಿಯ ಸಾಧನೆಗಳನ್ನು ಸ್ಮರಿಸುವುದರ ಜತೆಗೆ ಇಷ್ಟು ವರ್ಷಗಳಿಂದ ಧೋನಿಗೆ ಪ್ರೀತಿ, ಬೆಂಬಲ ನೀಡಿದ ಕೋಟ್ಯಂತರ ಅಭಿಮಾನಿಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ನಮಗೆ ವೈಯಕ್ತಿಕವಾಗಿ ಪರಿಚಯವಿರಲಿ ಅಥವಾ ಇಲ್ಲದಿರಲಿ, ಇಷ್ಟು ವರ್ಷಗಳಿಂದ ಮಾಹಿಯನ್ನು ಪ್ರೀತಿಸಿದ, ಬೆಂಬಲಿಸಿದ ಮತ್ತು ಅವರ ಮೇಲೆ ನಂಬಿಕೆ ಇಟ್ಟ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ನೀವು ನೀಡಿದ ಪ್ರೀತಿಗೆ ನಾವು ಸದಾ ಕೃತಜ್ಞರಾಗಿರುತ್ತೇವೆ. ಹೊಸ ಆರಂಭಗಳು, ಹೊಸ ಸಾಹಸಗಳು ಮತ್ತು ಇನ್ನಷ್ಟು ಸುಂದರ ನೆನಪುಗಳಿಗಾಗಿ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಆದರೆ, ಸಾಕ್ಷಿ ಪೋಸ್ಟ್ನ ಕೊನೆಯ ಸಾಲು ಅಭಿಮಾನಿಗಳ ಮನಸ್ಸು ಗೆದ್ದಿದೆ. "ನಿನ್ನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಮಾಹಿ. ಎಂದೆಂದಿಗೂ" ಎಂದು ಪತಿಗಾಗಿ ಪ್ರೀತಿಯ ಮಾತುಗಳನ್ನು ಬರೆದಿದ್ದಾರೆ.
ತಮ್ಮ ವೃತ್ತಿಜೀವನದ ಬಹುತೇಕ ಇಡೀ ಬದುಕನ್ನು ಕ್ರಿಕೆಟ್ ಮೈದಾನದ ಬೆಳಕಿನಲ್ಲಿ ಕಳೆದಿರುವ ಧೋನಿಗೆ ಈ ಸಂದೇಶ ಪತ್ನಿಯ ಪ್ರೀತಿ ಮತ್ತು ಬೆಂಬಲವನ್ನು ಮತ್ತೊಮ್ಮೆ ತೋರಿಸಿದೆ.
ಧೋನಿಯ ಪ್ರತಿಯೊಂದು ಗೆಲುವು, ಸೋಲು ಮತ್ತು ಕಠಿಣ ನಿರ್ಧಾರಗಳಲ್ಲೂ ಜೊತೆಯಾಗಿ ನಿಂತಿರುವ ಸಾಕ್ಷಿಯ ಈ ಮಾತುಗಳು ಅಭಿಮಾನಿಗಳ ಮನಸ್ಸು ಮುಟ್ಟಿವೆ. ಪೋಸ್ಟ್ ಪ್ರಕಟವಾದ ಕೆಲವೇ ಗಂಟೆಗಳಲ್ಲಿ 5.44 ಲಕ್ಷಕ್ಕೂ ಹೆಚ್ಚು ಮೆಚ್ಚುಗೆಗಳು ವ್ಯಕ್ತವಾಗಿವೆ.
ಹೋಟೆಲ್ನಲ್ಲಿ ಆರಂಭವಾದ ಪರಿಚಯ, ದಾಂಪತ್ಯದವರೆಗೆ ಪಯಣ
ಧೋನಿ ಮತ್ತು ಸಾಕ್ಷಿ ಅವರ ಪ್ರೇಮಕಥೆ ಐದು ಐಪಿಎಲ್ ಪ್ರಶಸ್ತಿಗಳು ಹಾಗೂ ಚೆನ್ನೈ ಅಭಿಮಾನಿಗಳ ಸಂಭ್ರಮಕ್ಕೂ ಮೊದಲೇ ಆರಂಭವಾಗಿತ್ತು.
ಕೋಲ್ಕತ್ತಾದ ತಾಜ್ ಬೆಂಗಾಲ್ ಹೋಟೆಲ್ನಲ್ಲಿ ಭಾರತೀಯ ಕ್ರಿಕೆಟ್ ತಂಡ ತಂಗಿದ್ದ ಸಂದರ್ಭದಲ್ಲಿ ಸಾಕ್ಷಿ ತರಬೇತಿ ನಿರತ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಇಬ್ಬರ ಮೊದಲ ಭೇಟಿಯಾಗಿತ್ತು.
ಆರಂಭದಲ್ಲಿ ಸ್ನೇಹಿತರಾಗಿದ್ದ ಇವರ ನಡುವೆ ಕ್ರಮೇಣ ಪ್ರೀತಿ ಅರಳಿತು. 2010ರ ಜುಲೈ 4ರಂದು ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಇಬ್ಬರೂ ವಿವಾಹವಾದರು. ಇವರ ಪ್ರೇಮಕಥೆ 2016ರಲ್ಲಿ ಬಿಡುಗಡೆಯಾದ 'ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ' ಚಿತ್ರದಲ್ಲೂ ಮೂಡಿಬಂದಿತ್ತು. ದಿವಂಗತ ಸುಶಾಂತ್ ಸಿಂಗ್ ರಜಪೂತ್ ಧೋನಿ ಪಾತ್ರದಲ್ಲಿ ಹಾಗೂ ಕಿಯಾರಾ ಅಡ್ವಾಣಿ ಸಾಕ್ಷಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2015ರಲ್ಲಿ ಈ ದಂಪತಿಗೆ ಮಗಳು ಜೀವಾ ಜನಿಸಿದರು.
ಐಪಿಎಲ್ ಪಂದ್ಯಗಳ ವೇಳೆ ಸಾಕ್ಷಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹುರಿದುಂಬಿಸುತ್ತಾ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ತಂಡದ ಪ್ರಶಸ್ತಿ ಸಂಭ್ರಮದಿಂದ ಹಿಡಿದು ಕುಟುಂಬದ ಖಾಸಗಿ ಕ್ಷಣಗಳವರೆಗೆ ಹಲವು ನೆನಪುಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಹೊಸ ಪೋಸ್ಟ್ ಧೋನಿಯ ಕ್ರಿಕೆಟ್ ಪಯಣದಲ್ಲಿ ಕುಟುಂಬದ ಪಾತ್ರವನ್ನು ಮತ್ತೊಮ್ಮೆ ನೆನಪಿಸಿದೆ.
ಹೊಸ ಅಧ್ಯಾಯ ಆರಂಭ
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಧೋನಿ ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿ ಐದು ಬಾರಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿರುವ ಅವರು, ಅಭಿಮಾನಿಗಳೊಂದಿಗೆ ವಿಶೇಷ ಬಾಂಧವ್ಯ ಬೆಳೆಸಿಕೊಂಡಿದ್ದಾರೆ.
ಇದೀಗ 45ನೇ ವಯಸ್ಸಿನಲ್ಲಿ ಐಪಿಎಲ್ನಲ್ಲಿ ಆಟಗಾರನಾಗಿ ತಮ್ಮ ಪಯಣಕ್ಕೆ ತೆರೆ ಎಳೆದಿದ್ದಾರೆ. ಆದರೆ, ಚೆನ್ನೈ ತಂಡದೊಂದಿಗಿನ ಸಂಬಂಧವನ್ನು ಮುಂದುವರಿಸಲಿದ್ದು, 2027ರ ಐಪಿಎಲ್ನಿಂದ ಮಾರ್ಗದರ್ಶಕನಾಗಿ ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಹಳದಿ ಜೆರ್ಸಿಯಲ್ಲಿ ಧೋನಿ ಬ್ಯಾಟಿಂಗ್ಗೆ ಇಳಿಯುವುದನ್ನು ನೋಡಲು ಅಭಿಮಾನಿಗಳಿಗೆ ಇನ್ನು ಅವಕಾಶ ಸಿಗುವುದಿಲ್ಲ ಎಂಬ ಬೇಸರವಿದ್ದರೂ, ತಂಡದೊಂದಿಗೆ ಅವರ ನಂಟು ಮುಂದುವರಿಯಲಿದೆ.
ಧೋನಿಯ ಈ ಹೊಸ ಪಯಣಕ್ಕೆ ಸಾಕ್ಷಿ ಹಂಚಿಕೊಂಡಿರುವ ಸಂದೇಶ ಅಭಿಮಾನಿಗಳ ಪಾಲಿಗೆ ಭಾವುಕ ನೆನಪಾಗಿ ಉಳಿದಿದೆ. ಒಂದು ಅಧ್ಯಾಯ ಮುಗಿದರೂ, ಅವರ ಜೀವನದಲ್ಲಿ ಇನ್ನೂ ಅನೇಕ ಸುಂದರ ಕ್ಷಣಗಳು ಬರಲಿವೆ ಎಂಬುದನ್ನು ಈ ಪೋಸ್ಟ್ ಸಾರುತ್ತಿದೆ.