

ಚೆನ್ನೈ: ಐಪಿಎಲ್ ಟೂರ್ನಿಯಿಂದ ವಿದಾಯ ಘೋಷಿಸಿರುವ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಭಾವುಕ ಸಂದೇಶದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿಗೆ ಶಾಕ್ ಕೊಟ್ಟಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.
45 ವರ್ಷದ ಧೋನಿ ಇತ್ತೀಚಿನ ವರ್ಷಗಳಲ್ಲಿ ಗಾಯದ ಸಮಸ್ಯೆಗಳಿಂದಾಗಿ ಹೆಚ್ಚು ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. 2026ರ ಐಪಿಎಲ್‌ನಲ್ಲೂ ಅವರು ಒಂದೇ ಒಂದು ಪಂದ್ಯ ಆಡಿರಲಿಲ್ಲ. ಹೀಗಾಗಿ ಅವರು ಆಟಗಾರನಾಗಿ ಮುಂದುವರಿಯುವುದು ಅನುಮಾನವಾಗಿತ್ತು. ಇದೀಗ ದೋನಿ ಕೊನೆಗೂ ಐಪಿಎಲ್`ಗೂ ವಿದಾಯ ಘೋಷಿಸಿದ್ದಾರೆ.
ಈ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿರುವ ಸಿಎಸ್ ಕೆ ಆಡಳಿತ ಮಂಡಳಿ ಧೋನಿ ನಿರ್ಧಾರ ತಮಗೂ ಆಘಾತವನ್ನುಂಟು ಮಾಡಿತ್ತು ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಸಿಎಸ್‌ಕೆ ಮಾಲಕಿ ರೂಪಾ ಗುರುನಾಥ್, 'ಧೋನಿಯೇ ಸ್ವತಃ ತಂಡದಿಂದ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
'ನನ್ನ ಹೆಸರನ್ನೂ ಸೇರಿಸಿಬಿಡಿ
ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ 'ಬಿಡುಗಡೆ ಮಾಡುವ ಆಟಗಾರರ ಪಟ್ಟಿಗೆ ನನ್ನ ಹೆಸರನ್ನೂ ಸೇರಿಸಿಬಿಡಿ...' ಎಂದು ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದೊಂದಿಗೆ ಆಟಗಾರನಾಗಿ ತಮ್ಮ ಪಯಣ ಅಂತ್ಯಗೊಳಿಸುವ ಮುನ್ನ ಹೇಳಿದ್ದರು.
ಎಂ.ಎಸ್. ಧೋನಿ ಆಡಿದ ಈ ಒಂದು ಮಾತು ಇಡೀ ತಂಡದ ಆಡಳಿತ ಮಂಡಳಿಯನ್ನು ಕ್ಷಣಕಾಲ ಮೌನವಾಗಿಸಿತ್ತು. ಐಪಿಎಲ್‌ನಲ್ಲಿ ಆಟಗಾರನಾಗಿ ಧೋನಿಯ ಸುದೀರ್ಘ ಪಯಣಕ್ಕೆ ತೆರೆ ಬಿದ್ದಿದ್ದು, ಇದೀಗ ಅವರು ಸಿಎಸ್‌ಕೆ ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ರೂಪಾ ಗುರುನಾಥ್ ಹೇಳಿದ್ದೇನು?
ಕೆಲವು ತಿಂಗಳ ಹಿಂದೆಯೇ ತಮ್ಮನ್ನು ಭೇಟಿಯಾದಾಗ, ಮುಂದಿನ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಧೋನಿ ಖಚಿತವಾಗಿಲ್ಲ ಎಂದು ಹೇಳಿದ್ದರು. ಶನಿವಾರ ತಂಡದ ಆಟಗಾರರ ಬಿಡುಗಡೆ ಮತ್ತು ಮುಂದಿನ ಆವೃತ್ತಿಯ ಯೋಜನೆ ಕುರಿತು ವಿಡಿಯೋ ಕಾಲ್‌ನಲ್ಲಿ ಚರ್ಚೆ ನಡೆದಿತ್ತು.
ತಂಡಕ್ಕೆ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಖರೀದಿಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು. ಕೊನೆಯಲ್ಲಿ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿಯನ್ನು ಓದುತ್ತಿದ್ದಾಗ ಧೋನಿ ಮೆಲ್ಲನೆ, 'ಬಹುಶಃ ನನ್ನ ಹೆಸರನ್ನೂ ಈ ಪಟ್ಟಿಗೆ ಸೇರಿಸಬೇಕು' ಎಂದು ಹೇಳಿದರು.
ಈ ಮಾತು ಕೇಳುತ್ತಿದ್ದಂತೆ ವಿಡಿಯೋ ಕಾಲ್ ಸ್ಥಗಿತಗೊಂಡಿತ್ತು. ಬಳಿಕ ಮತ್ತೆ ಕರೆ ಮಾಡಿ ಮಾತನಾಡಿದ ರೂಪಾ, 'ಮುಂದಿನ ಆವೃತ್ತಿಯಲ್ಲಿ ನೀವು ಆಡದಿರುವುದನ್ನು ಇಂಟರ್‌ನೆಟ್‌ಗೂ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನಿಸುತ್ತದೆ' ಎಂದು ತಮಾಷೆಯಾಗಿ ಹೇಳಿದ್ದರಂತೆ.
2008ರಲ್ಲೇ ಧೋನಿ ನಾಯಕತ್ವಕ್ಕೆ ಒತ್ತು
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಧೋನಿ ಮತ್ತು ಸಿಎಸ್‌ಕೆ ನಡುವಿನ ಸಂಬಂಧ ವಿಶೇಷವಾಗಿತ್ತು. ತಂಡವನ್ನು ಖರೀದಿಸುವಾಗಲೇ ಧೋನಿಯನ್ನೇ ನಾಯಕನನ್ನಾಗಿ ಮಾಡಬೇಕು ಎಂಬುದು ತಮ್ಮ ತಂದೆಯ ಸ್ಪಷ್ಟ ನಿರ್ಧಾರವಾಗಿತ್ತು ಎಂದು ರೂಪಾ ನೆನಪಿಸಿಕೊಂಡಿದ್ದಾರೆ.
ಕಳೆದ ಸುಮಾರು 20 ವರ್ಷಗಳಿಂದ ಸಿಎಸ್‌ಕೆ ಮತ್ತು ಧೋನಿ ಒಟ್ಟಿಗೆ ಸಾಗಿವೆ. ಏಳುಬೀಳುಗಳ ನಡುವೆಯೂ ಪರಸ್ಪರ ಸಾಕಷ್ಟು ಕಲಿತಿದ್ದೇವೆ. ಧೋನಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದು ತಂಡ ತೆಗೆದುಕೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು ಎಂದು ಅವರು ಹೇಳಿದ್ದಾರೆ.
'ತಂಡಕ್ಕೆ ಶೇ.200ರಷ್ಟು ಕೊಡುವ ಸಾಮರ್ಥ್ಯ ಇಲ್ಲದಿದ್ದರೆ ಆಡುವುದಿಲ್ಲ' ಎಂದಿದ್ದ ಧೋನಿ
ಅಂತೆಯೇ ಧೋನಿಯ ನಿರ್ಧಾರದ ಹಿಂದಿನ ಕಾರಣವನ್ನೂ ರೂಪಾ ವಿವರಿಸಿದ್ದಾರೆ. 'ಧೋನಿ ಯಾವಾಗಲೂ ತಂಡಕ್ಕೆ ಶೇ.200ರಷ್ಟು ಕೊಡುಗೆ ನೀಡಲು ಬಯಸುತ್ತಾರೆ. ಅಷ್ಟು ಸಾಮರ್ಥ್ಯ ಇಲ್ಲ ಎಂದು ಅನಿಸಿದರೆ ಅವರು ಆಡಲು ಇಷ್ಟಪಡುವುದಿಲ್ಲ. ತಂಡದ ಪ್ರಗತಿಗೆ ಅಡ್ಡಿಯಾಗಲು ಅವರು ಬಯಸುವುದಿಲ್ಲ. ತಮ್ಮಿಂದ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದಾಗ ಹಿಂದೆ ಸರಿಯುತ್ತಾರೆ' ಎಂದು ರೂಪಾ ಹೇಳಿದ್ದಾರೆ.
ಧೋನಿಯ ಹೆಲಿಕಾಪ್ಟರ್ ಶಾಟ್‌ಗಳು, ಮಿಂಚಿನ ವೇಗದ ಸ್ಟಂಪಿಂಗ್‌ಗಳು ಹಾಗೂ ವಿಕೆಟ್‌ಗಳ ಹಿಂದೆ ನಿಂತು ಬೆರಳಿನ ಸನ್ನೆಯಲ್ಲೇ ಫೀಲ್ಡಿಂಗ್ ಬದಲಿಸಿ ಪಂದ್ಯದ ಗತಿಯನ್ನೇ ಬದಲಿಸುತ್ತಿದ್ದ ಕ್ಷಣಗಳನ್ನು ಇನ್ನು ಮುಂದೆ ನೋಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ಅವರು ಭಾವುಕರಾಗಿದ್ದಾರೆ.
ಯುವ ಆಟಗಾರರಿಗೆ ಧೋನಿ ಮಾರ್ಗದರ್ಶನ
ಸಿಎಸ್‌ಕೆ ಈಗ ಹೊಸ ತಲೆಮಾರಿನ ಆಟಗಾರರನ್ನು ಒಳಗೊಂಡ ತಂಡವನ್ನು ಕಟ್ಟುತ್ತಿದೆ. ಇಂತಹ ಸಂದರ್ಭದಲ್ಲಿ ಧೋನಿಯ ಅನುಭವ ಯುವ ಆಟಗಾರರಿಗೆ ಬಹಳ ಉಪಯುಕ್ತವಾಗಲಿದೆ ಎಂಬ ವಿಶ್ವಾಸವನ್ನು ರೂಪಾ ವ್ಯಕ್ತಪಡಿಸಿದ್ದಾರೆ.
'ನಮ್ಮ ತಂಡದಲ್ಲಿ ಸಾಕಷ್ಟು ಯುವ ಆಟಗಾರರಿದ್ದಾರೆ. ಅವರು ಧೋನಿಯಿಂದ ಮೈದಾನದ ಒಳಗೆ ಮತ್ತು ಹೊರಗೆ ಸಾಕಷ್ಟು ಕಲಿಯಬಹುದು. ಅವರಿಂದ ನಾನೂ ಬಹಳಷ್ಟು ಕಲಿತಿದ್ದೇನೆ. ನಮ್ಮ ಮುಂದಿನ ಪಯಣದಲ್ಲೂ ಧೋನಿ ನಮ್ಮೊಂದಿಗೆ ಇರುವುದು ಅದೃಷ್ಟ' ಎಂದಿದ್ದಾರೆ.
ಆಟಗಾರನಾಗಿ ಮೈದಾನದಲ್ಲಿ ಕಾಣಿಸಿಕೊಳ್ಳದಿದ್ದರೂ ಧೋನಿ ಎಂದೆಂದಿಗೂ ಸೂಪರ್ ಕಿಂಗ್ ಆಗಿಯೇ ಉಳಿಯಲಿದ್ದಾರೆ. ತಂಡದ ಹೊಸ ಮೆಂಟರ್ ಆಗಿ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇನೆ ಎಂದು ರೂಪಾ ಗುರುನಾಥ್ ಹೇಳಿದ್ದಾರೆ.