ರಾಜ್ಯ

ಸಿಎಂ ಆದೇಶಕ್ಕೂ ಕ್ಯಾರೇ ಎನ್ನದ KMF: 20 ದಿನ ಕಳೆದರೂ ಇಳಿದಿಲ್ಲ ನಂದಿನಿ ಮೊಸರಿನ ದರ..!

ದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಮೊಸರಿನ ಬೆಲೆಯನ್ನು ಕನಿಷ್ಠ ₹2 ಕಡಿತಗೊಳಿಸುವಂತೆ ಮುಖ್ಯಮಂತ್ರಿ ಶಿವಕುಮಾರ್ ಸೂಚಿಸಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಸಿಎಂ ಆದೇಶಕ್ಕೂ ಕ್ಯಾರೇ ಎನ್ನದ KMF: 20 ದಿನ ಕಳೆದರೂ ಇಳಿದಿಲ್ಲ ನಂದಿನಿ ಮೊಸರಿನ ದರ..!
ಕೆಎಂಎಫ್
Published On :

ಬೆಂಗಳೂರು: ನಂದಿನಿ ಮೊಸರಿನ ದರ ಇಳಿಕೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶ ನೀಡಿ 20 ದಿನಗಳು ಕಳೆದರೂ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (KMF) ಇನ್ನೂ ಬೆಲೆ ಕಡಿಮೆ ಮಾಡದಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹಾಲಿನಲ್ಲಿರುವ ಕೊಬ್ಬಿನ ಅಂಶಕ್ಕೆ ಅನುಗುಣವಾಗಿ ಪ್ರತಿ ಲೀಟರ್‌ಗೆ ₹8ರಿಂದ ₹14ರವರೆಗೆ ಹಾಲಿನ ದರ ಹೆಚ್ಚಿಸಲಾಗಿತ್ತು. ಇದರ ಜೊತೆಗೆ ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ ₹14 ಹಾಗೂ ಅರ್ಧ ಲೀಟರ್‌ಗೆ ₹6 ಹೆಚ್ಚಿಸಲಾಗಿತ್ತು.

ದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಮೊಸರಿನ ಬೆಲೆಯನ್ನು ಕನಿಷ್ಠ ₹2 ಕಡಿತಗೊಳಿಸುವಂತೆ ಮುಖ್ಯಮಂತ್ರಿ ಶಿವಕುಮಾರ್ ಸೂಚಿಸಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಸರ್ಕಾರದ ವಿಳಂಬದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳ ಮಾತಿಗೂ ಬೆಲೆ ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಉಪನ್ಯಾಸಕಿ ಶುಭದಾ ಎಲ್ ಎಂಬುವವರುಸ “ಮುಖ್ಯಮಂತ್ರಿಗಳು ಸೂಚನೆ ನೀಡಿದರೂ ಮೊಸರಿನ ಬೆಲೆ ಕಡಿತವಾಗಿಲ್ಲ. ಇದರಿಂದ ಸರ್ಕಾರದ ಇಲಾಖೆಗಳು ಮುಖ್ಯಮಂತ್ರಿಗಳ ಮಾತಿಗೆ ಯಾವುದೇ ಮಹತ್ವ ನೀಡುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ಬೆಲೆಯನ್ನು ಹಿಂದೆಂದೂ ಕಾಣದಷ್ಟು ಹೆಚ್ಚಿಸಲಾಗಿದೆ. ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡುವ ಅಗತ್ಯವಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಎಲ್ಲ ವಸ್ತುಗಳ ಬೆಲೆಯೂ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಗೃಹಿಣಿ ಕಮಲಾಕ್ಷಿ ಕೆ. ಮಾತನಾಡಿ, “ಹಾಲು ಮತ್ತು ಮೊಸರು ಅತ್ಯಗತ್ಯ ಆಹಾರ ಪದಾರ್ಥಗಳು. ಈ ಹಿಂದೆ ಬೆಲೆ ಏರಿಕೆ ಮಾಡಿದಂತೆ ಈ ಬಾರಿ ಏಕರೂಪವಾಗಿ ದರ ಹೆಚ್ಚಿಸಿಲ್ಲ. ಕುಟುಂಬದ ಆರೋಗ್ಯದ ದೃಷ್ಟಿಯಿಂದ ಹಾಲು ಮತ್ತು ಮೊಸರಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ಮತ್ತೊಬ್ಬ ಗೃಹಿಣಿ ಶೈಲಜಾ ಎಲ್. ಮಾತನಾಡಿ, ಬೆಲೆ ಇಳಿಸುವುದಾಗಿ ಭರವಸೆ ನೀಡಿದ ಬಳಿಕವೂ ಅದನ್ನು ಜಾರಿಗೆ ತರದಿರುವುದು, ಜನರು ಈ ಬೆಲೆ ಏರಿಕೆಗೆ ಹೊಂದಿಕೊಂಡು ಸುಮ್ಮನಾಗುತ್ತಾರೆ ಎಂದು ಸರ್ಕಾರ ಭಾವಿಸಿರುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಜನರಿಗೆ ಪ್ರತಿದಿನ ಹಾಲು ಮತ್ತು ಮೊಸರು ಬೇಕೇ ಬೇಕು. ಹೀಗಾಗಿ ದೈನಂದಿನ ಜೀವನ ಮುಂದುವರಿಯುತ್ತದೆ. ಆದರೆ, ಹೆಚ್ಚುವರಿ ಆರ್ಥಿಕ ಹೊರೆ ಮಾತ್ರ ತಪ್ಪಿಲ್ಲ. ಸರ್ಕಾರ ತನ್ನ ಆದೇಶವನ್ನು ಕೆಲವೇ ದಿನಗಳಲ್ಲಿ ಜಾರಿಗೆ ತಂದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೊಸರಿನ ಬೆಲೆ ಕಡಿತಗೊಳಿಸುವಲ್ಲಿ ಆಗುತ್ತಿರುವ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಕೆಎಂಎಫ್ ಆಡಳಿತಾಧಿಕಾರಿ ಎಂ.ವಿ. ವೆಂಕಟೇಶ್ ಅವರು ಪ್ರತಿಕ್ರಿಯೆ ನೀಡಿದ್ದು, ಜಿಲ್ಲಾ ಹಾಲು ಒಕ್ಕೂಟಗಳೊಂದಿಗೆ ಚರ್ಚೆಗಳು ನಡೆಯುತ್ತಿರುವುದರಿಂದ ವಿಳಂಬವಾಗಿದೆ ಎಂದು ತಿಳಿಸಿದರು. ಈವರೆಗೆ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.