

ಬೆಂಗಳೂರು: ಕರ್ನಾಟಕದಲ್ಲಿ ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಖಾಸಗಿ ಬ್ರ್ಯಾಂಡ್‌ಗಳ ಹಾಲು ಮತ್ತು ಮೊಸರಿನ ದರವೂ ಸಹ ಗಣನೀಯವಾಗಿ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಂದಿನಿ ಬ್ರ್ಯಾಂಡ್‌ನ ಬೆಲೆ ಏರಿಕೆಯಿಂದಾಗಿ ಜನರು ಖಾಸಗಿ ಬ್ರ್ಯಾಂಡ್‌ಗಳತ್ತ ಮುಖ ಮಾಡಬಹುದು ಎಂದು ಅಂದಾಜಿಸಲಾಗಿತ್ತಾದರೂ, ಇದೀಗ ಖಾಸಗಿ ಕಂಪನಿಗಳೂ ಕೂಡ ಹಾಲು ಮತ್ತು ಮೊಸರಿನ ದರವನ್ನು ದಿಢೀರ್ ಪರಿಷ್ಕರಿಸಿವೆ. ಹಾಗಾದರೆ ಯಾವೆಲ್ಲಾ ಖಾಸಗಿ ಬ್ರ್ಯಾಂಡ್‌ಗಳ ಬೆಲೆ ಎಷ್ಟು ಹೆಚ್ಚಾಗಿದೆ? ಆ ಕುರಿತ ವರದಿ ಇಲ್ಲಿದೆ:
ರಾಜ್ಯ ಸರ್ಕಾರ ಮತ್ತು ಕೆಎಂಎಫ್ ನವೆಂಬರ್ 1ರಿಂದ ಅನ್ವಯವಾಗುವಂತೆ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ರಿಂದ ₹12 ರವರೆಗೆ ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ₹14 ರಷ್ಟು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಖಾಸಗಿ ಡೈರಿ ಕಂಪನಿಗಳೂ ಸಹ ದರ ಪರಿಷ್ಕರಣೆ ಮಾಡಿರುವುದರಿಂದ ಮಧ್ಯಮ ವರ್ಗದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹಾಗಾದ್ರೆ, ಯಾವ ಕಂಪನಿಯ ಹಾಲು ಹಾಗೂ ಮೊಸರಿನ ದರ ಎಷ್ಟು ಏರಿಕೆ ಆಗಿದೆ ಗೊತ್ತಾ?
ಮದರ್ ಡೇರಿ: ಏಕರೂಪವಾಗಿ ₹2 ಹೆಚ್ಚಳ
ಹೆರಿಟೇಜ್ ಹಾಲು: ಪ್ರತಿ ಲೀಟರ್‌ಗೆ ₹5.90 ಹೆಚ್ಚಳವಾಗಿದ್ದು, ಕನಿಷ್ಠ ₹2.50 ರಿಂದ ಗರಿಷ್ಠ ₹4 ವರೆಗೆ ವಿವಿಧ ಪ್ಯಾಕೆಟ್‌ಗಳ ದರ ಏರಿಕೆಯಾಗಿದೆ
ಹೆರಿಟೇಜ್ ಮೊಸರು: ಪ್ರತಿ ಕೆಜಿಗೆ ₹14 ಹೆಚ್ಚಳವಾಗಿದೆ
ದೊಡ್ಲಾ ಹಾಲು: ಪ್ರತಿ ಲೀಟರ್‌ಗೆ ₹6 ಏರಿಕೆಯಾಗಿದೆ
ದೊಡ್ಲಾ ಮೊಸರು: ಪ್ರತಿ ಕೆಜಿಗೆ ₹12 ಹೆಚ್ಚಳವಾಗಿದೆ
ಇತರೆ ಬ್ರ್ಯಾಂಡ್‌ಗಳು: ತಿರುಮಲ ಮತ್ತು ಹಡ್ಸನ್ ಸೇರಿದಂತೆ ಇತರ ಖಾಸಗಿ ಡೈರಿ ಸಂಸ್ಥೆಗಳೂ ಹಾಲು, ಮೊಸರಿನ ದರ ಪರಿಷ್ಕರಣೆ ಮಾಡಿವೆ.
ಇದಕ್ಕೂ ಮುಂಚೆ, ನಂದಿನಿ ಟೋನ್ಡ್ ಹಾಲಿನ ದರ ಲೀಟರ್‌ಗೆ ₹46 ರಿಂದ ₹54 ಕ್ಕೆ ಏರಿಕೆಯಾಗಿದೆ. ಮೊಸರಿನ ಬೆಲೆ ಲೀಟರ್‌ಗೆ ₹54 ರಿಂದ ₹68 ಕ್ಕೆ ತಲುಪಿತ್ತು. ಆದರೆ, ಸಾರ್ವಜನಿಕರು ಮತ್ತು ಹೋಟೆಲ್ ಮಾಲೀಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಕೆಎಂಎಫ್ ನಂದಿನಿ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ₹2 ರಷ್ಟು ಕಡಿತಗೊಳಿಸಲು ಒಪ್ಪಿಕೊಂಡಿದೆ.