

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಗುರುವಾರ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ನಡೆಸಿದ ಮಾತುಕತೆ ವಿಚಾರ ಇದೀಗ ಸಾಕಷ್ಟು ಸುದ್ದಿ ಮಾಡಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಪರೋಕ್ಷವಾಗಿ ಕಿಡಿಕಾರಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಭಾಗವಾಗಿ ಪುನೀತ್ ಕ್ರಾಸ್ ಎಕ್ಸಾಮಿನೇಷನ್ ನಡೆಯುವಾಗ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾಗೌಡ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ ಎನ್ನಲಾಗಿದೆ.
'ಊಟ ಆಯ್ತಾ…? ಬೆನ್ನು ನೋವು ಹೇಗಿದೆ? ಫಿಸಿಯೋಥೆರಪಿ ಆಯ್ತಾ…? ಇನ್ನೂ ಎಷ್ಟು ದಿನ ಮಾಡಿಸಬೇಕು…?' ಎಂದು ಪವಿತ್ರಾಗೌಡ, ದರ್ಶನ್ ಯೋಗಕ್ಷೇಮ ವಿಚಾರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್, ʻಬೆನ್ನು ಪೂರ್ತಿ ಮುರಿದು ಹೋದಂತಾಗಿದೆ, ನೋವಾಗ್ತಿದೆ. ಫಿಸಿಯೋಥೆರಪಿ ಮಾಡ್ತಾ ಇದ್ದಾರೆ. ಒಂದು ಸೆಷನ್ ಆಗಿದೆ ಅಷ್ಟೇ, ಇನ್ನೂ ಮಾಡಿಸಬೇಕು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಸ್ವಲ್ಪ ಹೊತ್ತಿಗೆ ವಿಡಿಯೋ ಕಾನ್ಫರೆನ್ಸ್ನ ವಿಡಿಯೋ ಆಫ್ ಆಗಿದೆ. ಆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಮಾತನಾಡಿದ್ದರು. ಅವರ ಮಾತುಗಳು ಕಾಲ್ನಲ್ಲಿದ್ದ ಇತರರಿಗೆ ಗೊತ್ತಾಗಿದೆ.
ಈ ಎಲ್ಲ ಬೆಳವಣಿಗೆ ಮಧ್ಯೆ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. 'ನಿಮಗೆ ದ್ರೋಹ ಬಗೆಯುವುದು ನಿಮ್ಮ ಶತ್ರುಗಳಲ್ಲ, ಬದಲಾಗಿ ನಿಮ್ಮ ಜೊತೆಯಲ್ಲಿ ಒಂದೇ ತಟ್ಟೆಯಲ್ಲಿ ಉಂಡವರು' ಎಂದು ಬರೆದಿರುವ ರೀಲ್ಸ್ ಅನ್ನು ಹಂಚಿಕೊಂಡಿದ್ದಾರೆ.
ವಿಬೋಧ್ & ವಿನೀಶ್ ದರ್ಶನ್ ಎನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋವನ್ನು ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ.