ಹಿಂಸಾಚಾರ, ಅರಾಜಕತೆ ಮೂಲಕ ಸರ್ಕಾರ ಬದಲಾವಣೆಗೆ ಕಾಂಗ್ರೆಸ್ ಯತ್ನ: ಕಲಬುರಗಿಯಲ್ಲಿ ರಾಜನಾಥ್ ಸಿಂಗ್ ಆರೋಪ

ಕಲಬುರಗಿ: ಸತತ ಚುನಾವಣಾ ಸೋಲುಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ಮತ್ತು ಅದರ ಹಿರಿಯ ನಾಯಕ ರಾಹುಲ್ ಗಾಂಧಿ, "ಬೀದಿ ಹಿಂಸಾಚಾರ ಮತ್ತು ಅರಾಜಕತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಇಂದು ನಡೆದ ಬಿಜೆಪಿಯ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ' ಸಮಾವೇಶದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಬೀದಿಗಳಲ್ಲಿ ಸೃಷ್ಟಿಸುವ ಅರಾಜಕತೆಯ ಮೂಲಕ ಅಧಿಕಾರ ಬದಲಾವಣೆಯನ್ನು ತರಲು ನಮ್ಮ ಪ್ರಜಾಪ್ರಭುತ್ವ ಅಷ್ಟೇನೂ ದುರ್ಬಲವಾಗಿಲ್ಲ ಎಂದು ಹೇಳಿದರು.
ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆ ಮಾಡಲು ತಾವು ಕಲಬುರಗಿಗೆ ಬಂದಿರುವುದಾಗಿ ತಿಳಿಸಿದ ಸಿಂಗ್, "ದೇಶದಲ್ಲಿ ಅರಾಜಕತೆಯನ್ನು ಹರಡುವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಕಾಂಗ್ರೆಸ್ನ ರಾಜಕೀಯದ ವಿರುದ್ಧ ಧ್ವನಿ ಎತ್ತಲು ನಾವಿಲ್ಲಿ ಸೇರಿದ್ದೇವೆ" ಎಂದರು.
ರಾಜಕೀಯವು ಅಧಿಕಾರ ಹಿಡಿಯುವ ಸಾಧನವಾಗಬಾರದು, ಬದಲಾಗಿ ರಾಷ್ಟ್ರ ನಿರ್ಮಾಣದ ಸಾಧನವಾಗಬೇಕು ಎಂದು ಪ್ರತಿಪಾದಿಸಿದ ಅವರು, "ಕಾಂಗ್ರೆಸ್ ಮತಗಳ ಮೂಲಕವಲ್ಲ, ಹಿಂಸಾಚಾರ ಮತ್ತು ಅರಾಜಕತೆಯ ಮೂಲಕ ಅಧಿಕಾರ ಬದಲಾವಣೆಗೆ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಅವರಿಗೆ ನಾನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಬೀದಿಗಳಲ್ಲಿ ಸೃಷ್ಟಿಸುವ ಅರಾಜಕತೆಯ ಮೂಲಕ ಅಧಿಕಾರ ಬದಲಾವಣೆ ಆಗುವಷ್ಟು ಭಾರತದ ಪ್ರಜಾಪ್ರಭುತ್ವ ದುರ್ಬಲವಾಗಿಲ್ಲ ಎಂದರು.
ಭಾರತೀಯ ಪ್ರಜಾಪ್ರಭುತ್ವವನ್ನು ಗುರಿಯಾಗಿಸಿಕೊಳ್ಳಲು ಕಾಂಗ್ರೆಸ್ ವಿದೇಶಿಯರನ್ನು ಆಹ್ವಾನಿಸುತ್ತಿದೆ ಎಂದೂ ರಾಜನಾಥ್ ಸಿಂಗ್ ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



