'ಬೆಂಗಳೂರಿಗರಿಗೆ ಸಿಕ್ಕ ಜಯ', 'ಲಾಲ್ಬಾಗ್ ಸುರಕ್ಷಿತ, ಮುಂದಿನ ಗುರಿ ಹೆಬ್ಬಾಳ ಕೆರೆ': ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ವೈರಲ್!

ಬೆಂಗಳೂರು: ಲಾಲ್ಬಾಗ್ ಉಳಿಸುವ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದ್ದು, ಸುರಂಗ ರಸ್ತೆ ಯೋಜನೆಯ ಮಾರ್ಗ ಬದಲಾಯಿಸಿದ ಮಾತ್ರಕ್ಕೆ ಅದು ವೈಜ್ಞಾನಿಕ ಯೋಜನೆಯಾಗುವುದಿಲ್ಲ. ಈ ಯೋಜನೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ, ಲಾಲ್ಬಾಗ್ನ ಪರಂಪರೆ ಮತ್ತು ಪರಿಸರವನ್ನು ಉಳಿಸಲು ತಮ್ಮ ಕರೆಗೆ ಸ್ಪಂದಿಸಿದ ಸಾವಿರಾರು ಬೆಂಗಳೂರಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಗೆಲುವು ನಾಗರಿಕರ ಹೋರಾಟಕ್ಕೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಲಾಲ್ಬಾಗ್ ಮೂಲಕ ಹಾದುಹೋಗಬೇಕಿದ್ದ ಸುರಂಗ ರಸ್ತೆ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವುದಾಗಿ ಸಚಿವ ಕೃಷ್ಣ ಬೈರೇಗೌಡ ಘೋಷಿಸಿರುವುದನ್ನು ಸ್ವಾಗತಿಸಿರುವ ಅವರು, ಇದು ಬೆಂಗಳೂರಿನ ನಾಗರಿಕರ ಹೋರಾಟಕ್ಕೆ ಸಿಕ್ಕ ಆರಂಭಿಕ ಜಯ ಎಂದು ಬಣ್ಣಿಸಿದ್ದಾರೆ.
ಆದರೆ, ಸುರಂಗ ರಸ್ತೆ ಯೋಜನೆಯ ಮಾರ್ಗ ಬದಲಿಸಿದರೂ ಅದರ ಮೂಲ ಸಮಸ್ಯೆಗಳು ಬಗೆಹರಿಯುವುದಿಲ್ಲ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸೇರಿದಂತೆ ಹಲವು ಸಂಸ್ಥೆಗಳ ತಜ್ಞರು ಈ ಯೋಜನೆಯಿಂದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ಸಾರ್ವಜನಿಕವಾಗಿ ಚರ್ಚೆಗೆ ಬರಬೇಕು ಎಂದು ಸವಾಲು ಹಾಕಿದ್ದಾರೆ.
ಮೆಟ್ರೋ ವಿಸ್ತರಣೆಗೆ ಸುರಂಗ ರಸ್ತೆ ಅಡ್ಡಿ
ಸುರಂಗ ರಸ್ತೆ ಯೋಜನೆಯಿಂದಾಗಿ ರೆಡ್ಲೈನ್ ಮೆಟ್ರೋ ವಿಸ್ತರಣೆಗೆ ತೊಂದರೆಯಾಗುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದು, ಪಶುವೈದ್ಯಕೀಯ ಕಾಲೇಜು ಮೆಟ್ರೋ ನಿಲ್ದಾಣವನ್ನು ಕೈಬಿಡಲಾಗಿದೆ. ಸುರಂಗ ರಸ್ತೆಗಾಗಿ ಪದೇಪದೆ ಮಾರ್ಗ ಬದಲಾಯಿಸುತ್ತಾ, ಮೆಟ್ರೋ ಯೋಜನೆಗೆ ಕೇಂದ್ರದಿಂದ ಅನುಮತಿ ವಿಳಂಬವಾಗುತ್ತಿದೆ ಎಂದು ಆರೋಪಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಹೆಬ್ಬಾಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಿರು ಸುರಂಗ ರಸ್ತೆ ಯೋಜನೆಯಿಂದ ಹೆಬ್ಬಾಳ ಕೆರೆಯ 3.3 ಎಕರೆ ಪ್ರದೇಶಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಉದ್ಯಾನವನಗಳ ರಕ್ಷಣೆಗೆ ಒಂದು ನಿಯಮ, ಕೆರೆಗಳ ರಕ್ಷಣೆಗೆ ಮತ್ತೊಂದು ನಿಯಮ ಇರಬಾರದು. ಲಾಲ್ಬಾಗ್ನಂತೆ ಹೆಬ್ಬಾಳ ಕೆರೆಯನ್ನೂ ಉಳಿಸಬೇಕು. ಹೀಗಾಗಿ ಕಿರು ಸುರಂಗ ರಸ್ತೆ ಯೋಜನೆಯನ್ನೂ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಜಪಾನ್ನಿಂದ ಕಲಿಯಬೇಕಾದ ಪಾಠಗಳ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಪಾದಚಾರಿ ಸ್ನೇಹಿ ಮೂಲಸೌಕರ್ಯ ಅಭಿವೃದ್ಧಿಯೇ ಅಲ್ಲಿ ಕಲಿಯಬೇಕಾದ ಪ್ರಮುಖ ಅಂಶಗಳು. ಹಾಗಾದರೆ, ಇವುಗಳಿಗೆ ವಿರುದ್ಧವಾಗಿರುವ ಸುರಂಗ ರಸ್ತೆ ಯೋಜನೆಯನ್ನು ಕೈಬಿಡುತ್ತಾರೆಯೇ ಅಥವಾ ಅದೇ ಹಾದಿಯಲ್ಲಿ ಮುಂದುವರಿಯುತ್ತಾರೆಯೇ ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.
ಹೆಚ್ಚು ಜನರ ಸಂಚಾರಕ್ಕೆ ಆದ್ಯತೆ ನೀಡಿ
ಬೆಂಗಳೂರು ನಗರಕ್ಕೆ ಹೆಚ್ಚು ಕಾರುಗಳ ಅಗತ್ಯವಿಲ್ಲ; ಬದಲಿಗೆ ಹೆಚ್ಚು ಜನರು ಸುಲಭವಾಗಿ ಸಂಚರಿಸುವ ವ್ಯವಸ್ಥೆ ಬೇಕು ಎಂದು ಅಭಿಪ್ರಾಯಪಟ್ಟಿರುವ ಸೂರ್ಯ, ಮೆಟ್ರೋ, ಉಪನಗರ ರೈಲು, ಬಸ್ ಸೇವೆ, ಪಾದಚಾರಿ ಮಾರ್ಗಗಳು ಮತ್ತು ಕೊನೆಯ ಹಂತದ ಸಂಪರ್ಕ ವ್ಯವಸ್ಥೆಗಳ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಹೆಬ್ಬಾಳ ಕೆರೆ ರಕ್ಷಣೆ ಮುಂದಿನ ಗುರಿ
ಲಾಲ್ಬಾಗ್ ಉಳಿಸುವಲ್ಲಿ ಆರಂಭಿಕ ಯಶಸ್ಸು ಸಿಕ್ಕಿದೆ. ಮುಂದಿನ ಹೋರಾಟ ಹೆಬ್ಬಾಳ ಕೆರೆಯನ್ನು ಉಳಿಸುವುದಾಗಿದೆ. ಬೆಂಗಳೂರಿನ ವೈಜ್ಞಾನಿಕ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



