

ಬೆಂಗಳೂರು: ಹೆಬ್ಬಾಳ ಕೆರೆಯ ಎರಡನೇ ಹಂತದ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಕೆರೆಗಳ ವಿಭಾಗ ಟೆಂಡರ್‌ಗಳನ್ನು ಕರೆದಿದೆ.
ಆದರೆ, ಎಸ್ಟೀಮ್ ಮಾಲ್ ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಯವರೆಗೆ ಪ್ರಸ್ತಾಪಿಸಲಾದ 2.2 ಕಿ.ಮೀ ಉದ್ದದ ಸುರಂಗ ಮಾರ್ಗ ಕಾಮಗಾರಿಯಿಂದ ಕೆರೆ ಏರಿಯ (bund) ಕೆಲವು ಭಾಗಗಳು ಭಾದಿತವಾಗಲಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವವರೆಗೂ ಈ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುವುದಿಲ್ಲ.
ಎರಡನೇ ಹಂತದ ಅಭಿವೃದ್ಧಿ ಕಾರ್ಯಗಳಲ್ಲಿ ಹೂಳು ತೆಗೆಯುವುದು ಮತ್ತು ಅದನ್ನು ವಿಲೇವಾರಿ ಮಾಡುವುದು, ಎಸ್ಕೇಪ್ ಗೇಟ್ (ನೀರು ಹೊರಹೋಗುವ ದ್ವಾರ) ನಿರ್ಮಾಣ, ಏರಿ ನಿರ್ಮಾಣ, ಕಲ್ಲು ಹಾಸು (pitching) ಹಾಗೂ ಇತರ ಸಂಬಂಧಿತ ಕೆಲಸಗಳು ಸೇರಿವೆ. ಟೆಂಡರ್ ಅಂತಿಮಗೊಂಡ ನಂತರ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಮತ್ತು ಇವು ಪೂರ್ಣಗೊಳ್ಳಲು ಸುಮಾರು 11 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಈ ವಿಷಯದ ಬಗ್ಗೆ ಮಾಹಿತಿ ಇರುವ ಅಧಿಕಾರಿಯೊಬ್ಬರು, BDAಯ ಸುರಂಗ ಯೋಜನೆಯಿಂದ ಬಾಧಿತವಾಗುವ ಕೆರೆಯ ಏರಿಯ ಭಾಗವನ್ನು, ಆ ಪ್ರಾಧಿಕಾರವೇ ತನ್ನ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಅಭಿವೃದ್ಧಿಪಡಿಸಲಿದೆ. ಅಂದರೆ, ಸುರಂಗ ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆರೆ ಅಭಿವೃದ್ಧಿ ಕಾರ್ಯಗಳು ತಾತ್ಕಾಲಿಕವಾಗಿ ಅಪೂರ್ಣವಾಗಿಯೇ ಉಳಿಯಲಿವೆ.
ಈ ಸುರಂಗ ಯೋಜನೆಯು ಈಗಾಗಲೇ ಕಾನೂನು ತೊಡಕುಗಳನ್ನು ಎದುರಿಸುತ್ತಿದೆ. ಅಲ್ಲದೆ ಯೋಜನೆಯ ಅನುಷ್ಠಾನಕ್ಕಾಗಿ 1,128 ಮರಗಳನ್ನು ಕಡಿಯಲು ಪ್ರಸ್ತಾಪಿಸಿರುವುದರ ವಿರುದ್ಧವೂ ಆಕ್ಷೇಪಣೆಗಳು ವ್ಯಕ್ತವಾಗಿವೆ. ಇಂತಹ ಸವಾಲುಗಳ ನಡುವೆ, ಯೋಜನೆ ಯಾವ ವೇಗದಲ್ಲಿ ಮುಂದುವರಿಯುತ್ತದೆ ಎಂಬುದರ ಮೇಲೆ ಅದರ ಪೂರ್ಣಗೊಳ್ಳುವ ದಿನಾಂಕ ನಿರ್ಧಾರವಾಗಲಿದೆ ಎಂದು ತಿಳಿಸಿದರು.
'ಟಿಎನ್‌ಐಇ' (TNIE) ಪಡೆದುಕೊಂಡಿರುವ ವಿವರವಾದ ಯೋಜನಾ ವರದಿಯ ಪ್ರಕಾರ, ಅಭಿವೃದ್ಧಿ ಕಾಮಗಾರಿಗಳ ನಂತರ ಕೆರೆಯ ಮುಖ್ಯ ಏರಿಯ ಸರಾಸರಿ ಅಗಲವನ್ನು ಗಣನೀಯವಾಗಿ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಮುಖ್ಯ ಏರಿಯ ಸರಾಸರಿ ಅಗಲವು 3.5 ಮೀಟರ್‌ನಿಂದ 5.5 ಮೀಟರ್‌ಗಳಷ್ಟಿದೆ.
ಪ್ರಸ್ತಾಪಿತ ಕಾಮಗಾರಿಗಳ ಬಳಿಕ, ಇದು 20 ಮೀಟರ್‌ಗಿಂತಲೂ ಹೆಚ್ಚು ಅಗಲವಾಗುವ ನಿರೀಕ್ಷೆಯಿದೆ. ಈ ವಿಸ್ತರಣಾ ಕಾರ್ಯದಲ್ಲಿ 20,568 ಘನ ಮೀಟರ್ ಮಣ್ಣನ್ನು ಬಳಸಿ ಮುಖ್ಯ ಏರಿಯನ್ನು ನಿರ್ಮಿಸಲಾಗುತ್ತದೆ ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಯೋಜನೆಯು ಕೆರೆಯಲ್ಲಿ ಹೂಳು ತೆಗೆಯುವ ಮೂಲಕ ಅದರ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವುದು, ಜೌಗು ಪ್ರದೇಶ ಹಾಗೂ ಒಳಚರಂಡಿ ನೀರನ್ನು ಬೇರೆಡೆಗೆ ತಿರುಗಿಸುವ ಕಾಲುವೆ ನಿರ್ಮಿಸುವುದು, ಜಲಮೂಲವನ್ನು ಸಂರಕ್ಷಿಸುವುದು ಮತ್ತಿತರ ಸಂಬಂಧಿತ ಕಾಮಗಾರಿಗಳನ್ನು ಒಳಗೊಂಡಿದೆ.