ಭಾರತಕ್ಕೆ ಮತ್ತೆ ಶಾಕ್ ಕೊಟ್ಟ ಟ್ರಂಪ್; 14 ದೇಶಗಳ ಮೇಲೆ ಹೊಸ ಸುಂಕ ಪ್ರಸ್ತಾವನೆ, ಶೇ.25ರವರೆಗೆ ತೆರಿಗೆ, ಚೀನಾಗೂ ಭಾರಿ ಹೊರೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಮತ್ತೆ ಭಾರತಕ್ಕೆ ಆಘಾತ ನೀಡಿದ್ದು, ಭಾರತ, ಚೀನಾ, ಜಪಾನ್ ಮತ್ತು ಯುರೋಪಿಯನ್ ಒಕ್ಕೂಟ (ಇಯು) ಸೇರಿದಂತೆ 14 ಪ್ರಮುಖ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಹೊಸ ಆಮದು ಸುಂಕ ವಿಧಿಸಲು ಪ್ರಸ್ತಾವನೆ ಮುಂದಿಟ್ಟಿದೆ.
ಕೈಗಾರಿಕಾ ವಲಯದಲ್ಲಿ ಉತ್ಪಾದನಾ ಸಾಮರ್ಥ್ಯ ಮಿತಿಮೀರುತ್ತಿರುವುದು ಮತ್ತು ಇದರಿಂದ ಅಮೆರಿಕದ ವ್ಯಾಪಾರಕ್ಕೆ ಆಗುತ್ತಿರುವ ಹಾನಿಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಪ್ರಸ್ತಾವನೆಯ ಪ್ರಕಾರ, ಭಾರತದಿಂದ ಆಮದಾಗುವ ಕೆಲವು ಉತ್ಪನ್ನಗಳ ಮೇಲೆ ಶೇ.25ರವರೆಗೆ ಸುಂಕ ವಿಧಿಸುವ ಸಾಧ್ಯತೆಯಿದೆ.
ಆದರೆ, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಅಂತಿಮಗೊಂಡರೆ ಭಾರತದ ಮೇಲಿನ ಸುಂಕ ಪ್ರಮಾಣ ಶೇ.17ಕ್ಕೆ ಇಳಿಯಬಹುದು. ಮತ್ತೊಂದೆಡೆ, ಚೀನಾದ ಕೆಲವು ಉತ್ಪನ್ನಗಳ ಮೇಲಿನ ಒಟ್ಟು ಸುಂಕ ಪ್ರಮಾಣ ಶೇ.45ರವರೆಗೂ ತಲುಪುವ ಸಾಧ್ಯತೆಯಿದೆ. ಬ್ರೆಜಿಲ್, ಬಾಂಗ್ಲಾದೇಶ, ಕಾಂಬೋಡಿಯಾ, ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ, ದಕ್ಷಿಣ ಕೊರಿಯಾ, ಸ್ವಿಟ್ಜರ್ಲೆಂಡ್, ತೈವಾನ್, ಥಾಯ್ಲೆಂಡ್ ಮತ್ತು ವಿಯೆಟ್ನಾಂ ಕೂಡ ಹೊಸ ಸುಂಕದ ಪ್ರಸ್ತಾವನೆಯಲ್ಲಿ ಸೇರಿವೆ.
8 ತಿಂಗಳ ತನಿಖೆ ಬಳಿಕ ಅಮೆರಿಕ ನಿರ್ಧಾರ
ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (USTR) 16 ವ್ಯಾಪಾರ ಪಾಲುದಾರ ರಾಷ್ಟ್ರಗಳ ಕುರಿತು ಎಂಟು ತಿಂಗಳ ಕಾಲ ನಡೆಸಿದ ತನಿಖೆಯ ಬಳಿಕ ಬುಧವಾರ ಈ ಪ್ರಸ್ತಾವನೆ ಪ್ರಕಟಿಸಲಾಗಿದೆ. ಮೆಕ್ಸಿಕೊ ಮತ್ತು ನಾರ್ವೆ ದೇಶಗಳ ತನಿಖೆ ಇನ್ನೂ ಪೂರ್ಣಗೊಳ್ಳದ ಕಾರಣ ಸದ್ಯಕ್ಕೆ ಅವುಗಳನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.
ಈ ದೇಶಗಳು ತಮ್ಮ ನೀತಿ, ಸಬ್ಸಿಡಿ ಮತ್ತು ಇತರ ವ್ಯಾಪಾರ ನಿರ್ಬಂಧಗಳ ಮೂಲಕ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯವನ್ನು ಕೃತಕವಾಗಿ ಹೆಚ್ಚಿಸುತ್ತಿವೆ. ಇದರಿಂದ ಅಮೆರಿಕದ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ ಎಂಬುದು ವಾಷಿಂಗ್ಟನ್‌ನ ಆರೋಪವಾಗಿದೆ.
ಕಡಿಮೆ ಬೆಲೆಯ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕದ ಮಾರುಕಟ್ಟೆಗೆ ಹರಿದುಬರುತ್ತಿದ್ದು, ಇದರಿಂದ ಸ್ಥಳೀಯ ಉತ್ಪಾದನಾ ಕಂಪನಿಗಳಿಗೆ ತೊಂದರೆಯಾಗುತ್ತಿದೆ ಎಂದು ಟ್ರಂಪ್ ಆಡಳಿತ ವಾದಿಸಿದೆ. ಅಮೆರಿಕದ ಸರಕುಗಳ ವ್ಯಾಪಾರ ಕೊರತೆ ಇತ್ತೀಚೆಗೆ ವಾರ್ಷಿಕ ಒಂದು ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚಾಗಿದೆ.
ಭಾರತ ಮತ್ತು ವಿಯೆಟ್ನಾಂ ಇನ್ನೂ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿಲ್ಲ. ಪ್ರಸ್ತಾವಿತ ಸುಂಕಗಳು ಈ ಮಾತುಕತೆಗಳಿಗೆ ವೇಗ ನೀಡಬಹುದು. ಡಿಸೆಂಬರ್‌ನಲ್ಲಿ ಫ್ಲೋರಿಡಾದ ಮಿಯಾಮಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ವೇಳೆಗೆ ಕೆಲವು ಒಪ್ಪಂದಗಳು ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಾ, ಬ್ರೆಜಿಲ್‌ಗೆ ಭಾರಿ ಸುಂಕದ ಹೊರೆ
ಚೀನಾದ ಕೆಲವು ಉತ್ಪನ್ನಗಳ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಲು ಅಮೆರಿಕ ಪ್ರಸ್ತಾಪಿಸಿದೆ. ಇದು ಟ್ರಂಪ್ ಅವರ ಮೊದಲ ಅವಧಿಯಲ್ಲಿ ವಿಧಿಸಲಾಗಿದ್ದ ಸುಮಾರು ಶೇ.25ರಷ್ಟು ಸುಂಕದ ಜೊತೆಗೆ ಅನ್ವಯವಾಗಲಿದೆ. ವಿಯೆಟ್ನಾಂ ಮೇಲೂ ಶೇ.20ರಷ್ಟು ಸುಂಕ ವಿಧಿಸುವ ಪ್ರಸ್ತಾವನೆ ಇದೆ.
ಬ್ರೆಜಿಲ್‌ನಿಂದ ಆಮದಾಗುವ ಕಚ್ಚಾ ಮತ್ತು ಸಂಸ್ಕರಿಸಿದ ಸಕ್ಕರೆಯ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಅಮೆರಿಕ ಮುಂದಾಗಿದೆ. ಅಲ್ಲದೆ, ವಿಮಾನಗಳ ಆಮದಿನ ಮೇಲೆ ಶೇ.10ರಷ್ಟು ಹೊಸ ಸುಂಕ ವಿಧಿಸುವ ಪ್ರಸ್ತಾವನೆಯೂ ಇದೆ.
ಇದರಿಂದ ಬ್ರೆಜಿಲ್‌ನ ಪ್ರಮುಖ ವಿಮಾನ ತಯಾರಿಕಾ ಸಂಸ್ಥೆ ಎಂಬ್ರೇರ್‌ಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಬ್ರೆಜಿಲ್ ವಿರುದ್ಧ ಹೆಚ್ಚುವರಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಾ ಉಕ್ಕು, ಅಲ್ಯೂಮಿನಿಯಂ, ಎಲೆಕ್ಟ್ರಿಕ್ ವಾಹನಗಳು, ಸೌರ ಉತ್ಪನ್ನಗಳು ಸೇರಿದಂತೆ ಹಲವು ವಸ್ತುಗಳನ್ನು ಅತಿಯಾದ ಪ್ರಮಾಣದಲ್ಲಿ ಉತ್ಪಾದಿಸಿ ಜಾಗತಿಕ ಮಾರುಕಟ್ಟೆಗೆ ರವಾನಿಸುತ್ತಿದೆ ಎಂಬುದು ಅಮೆರಿಕದ ಪ್ರಮುಖ ಆರೋಪವಾಗಿದೆ. ಆದರೆ, ಈ ಆರೋಪಗಳನ್ನು ಚೀನಾ ತಳ್ಳಿಹಾಕಿದೆ. ತನ್ನ ರಫ್ತು ಪ್ರಮಾಣವು ಸ್ಪರ್ಧಾತ್ಮಕ ಸಾಮರ್ಥ್ಯದ ಫಲಿತಾಂಶವೇ ಹೊರತು, ಅತಿಯಾದ ಉತ್ಪಾದನೆಯ ಪರಿಣಾಮವಲ್ಲ ಎಂದು ಹೇಳಿದೆ.
'ಸುಂಕ ಸಮರ ಅಥವಾ ವ್ಯಾಪಾರ ಯುದ್ಧದಿಂದ ಯಾವುದೇ ದೇಶಕ್ಕೂ ಲಾಭವಾಗುವುದಿಲ್ಲ. ಅತಿಯಾದ ಉತ್ಪಾದನಾ ಸಾಮರ್ಥ್ಯ ಎಂಬುದು ಸುಳ್ಳು ನಿರೂಪಣೆಯಾಗಿದ್ದು, ರಾಜಕೀಯ ಉದ್ದೇಶಗಳಿಗೆ ಇದನ್ನು ಬಳಸುವುದನ್ನು ಚೀನಾ ವಿರೋಧಿಸುತ್ತದೆ' ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಹೇಳಿದ್ದಾರೆ.
ಅಮೆರಿಕ ಮತ್ತು ಚೀನಾ ನಡುವೆ ಕಳೆದ ವರ್ಷ ಏರ್ಪಟ್ಟಿದ್ದ ವ್ಯಾಪಾರ ಕದನ ವಿರಾಮ ಜನವರಿ 10ರಂದು ಮುಕ್ತಾಯಗೊಳ್ಳಲಿದೆ. ಹೊಸ ಸುಂಕ ಪ್ರಸ್ತಾವನೆಯಿಂದ ಈ ಒಪ್ಪಂದಕ್ಕೆ ಧಕ್ಕೆಯಾಗುವ ಸಾಧ್ಯತೆ ಕಡಿಮೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ ಚೀನಾದ ಶೆನ್‌ಜೆನ್‌ನಲ್ಲಿ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯಾಗಿದ್ದರು. ಮುಂದಿನ ತಿಂಗಳು ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಮತ್ತೆ ಭೇಟಿಯಾಗುವ ನಿರೀಕ್ಷೆಯಿದೆ. ಈ ವೇಳೆ ವ್ಯಾಪಾರ ಕದನ ವಿರಾಮ, ಅಪರೂಪದ ಖನಿಜಗಳ ಲಭ್ಯತೆ ಮತ್ತು ಅಮೆರಿಕದ ಕೃಷಿ ಉತ್ಪನ್ನಗಳ ಖರೀದಿ ಕುರಿತು ಚರ್ಚೆಯಾಗಬಹುದು.
ಯಾವ ಕಾನೂನಿನಡಿ ಸುಂಕ ವಿಧಿಸಲು ಪ್ರಸ್ತಾವನೆ?
1974ರ ಅಮೆರಿಕದ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿಯಲ್ಲಿ ಈ ಸುಂಕ ಪ್ರಸ್ತಾವನೆ ತರಲಾಗಿದೆ. ವಿದೇಶಿ ದೇಶಗಳ ವ್ಯಾಪಾರ ನೀತಿಗಳು ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ, ಅವುಗಳ ವಿರುದ್ಧ ತನಿಖೆ ನಡೆಸಿ ಪ್ರತೀಕಾರದ ಕ್ರಮವಾಗಿ ಸುಂಕ ವಿಧಿಸಲು ಈ ಕಾನೂನು ಅವಕಾಶ ನೀಡುತ್ತದೆ.
ಕಳೆದ ವರ್ಷ ಹಲವು ದೇಶಗಳೊಂದಿಗೆ ಟ್ರಂಪ್ ಆಡಳಿತ ಮಾಡಿಕೊಂಡಿದ್ದ ವ್ಯಾಪಾರ ಒಪ್ಪಂದಗಳಿಗೆ ಅನುಗುಣವಾಗಿಯೇ ಹೊಸ ಸುಂಕದ ಪ್ರಸ್ತಾವನೆ ರೂಪಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಯುರೋಪಿಯನ್ ಒಕ್ಕೂಟ, ಜಪಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್‌ಗೆ ಶೇ.15ರಷ್ಟು ಸುಂಕದ ಮಿತಿ ಹಾಗೂ ಮಲೇಷ್ಯಾಕ್ಕೆ ಶೇ.19ರಷ್ಟು ಮಿತಿ ನಿಗದಿಪಡಿಸಲಾಗಿದೆ.
ಈ ಹೊಸ ಸುಂಕಗಳು ನಿರ್ದಿಷ್ಟ ಉತ್ಪನ್ನಗಳಿಗೆ ಮಾತ್ರ ಅನ್ವಯವಾಗಲಿವೆ. ಕಾರು, ಉಕ್ಕು, ಅಲ್ಯೂಮಿನಿಯಂ ಸೇರಿದಂತೆ ಇತರ ಉತ್ಪನ್ನಗಳ ಮೇಲೆ ಈಗಾಗಲೇ ವಿಧಿಸಿರುವ ಪ್ರತ್ಯೇಕ ಸುಂಕಗಳ ಜೊತೆಗೆ ಇವು ಸೇರ್ಪಡೆಯಾಗುವುದಿಲ್ಲ. ಬಲವಂತದ ಕಾರ್ಮಿಕರಿಂದ ತಯಾರಾದ ಸರಕುಗಳ ಆಮದನ್ನು ತಡೆಯುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿ 60 ದೇಶಗಳ ಮೇಲೆ ಜುಲೈನಲ್ಲಿ ಘೋಷಿಸಿದ್ದ ಶೇ.10 ಅಥವಾ ಶೇ.12.5ರಷ್ಟು ಸುಂಕಗಳಿಗೂ ಈ ಹೊಸ ತೆರಿಗೆ ಸೇರ್ಪಡೆಯಾಗುವುದಿಲ್ಲ.
ಪ್ರತಿಯೊಂದು ದೇಶದ ಉತ್ಪನ್ನಗಳಿಗೆ ಅನ್ವಯವಾಗುವ ನಿಖರ ಸುಂಕದ ಪ್ರಮಾಣವನ್ನು ಬುಧವಾರ ಅಮೆರಿಕದ ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಆದರೆ, ಸುಂಕ ಜಾರಿಗೆ ಬರುವ ಮೊದಲು ಸಾರ್ವಜನಿಕ ಅಭಿಪ್ರಾಯ ಸಂಗ್ರಹ, ವಿಚಾರಣೆ ಸೇರಿದಂತೆ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ.
ಸದ್ಯಕ್ಕೆ ಇವು ಕೇವಲ ಪ್ರಸ್ತಾವನೆಗಳಾಗಿದ್ದು, ಜಾರಿಗೆ ನಿಖರ ದಿನಾಂಕವನ್ನು ಪ್ರಕಟಿಸಿಲ್ಲ. ಈ ಪ್ರಕ್ರಿಯೆ 2027ರ ಜನವರಿವರೆಗೂ ಮುಂದುವರಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಂಪ್ ನೀತಿಗೆ ಚುನಾವಣೆಯಲ್ಲಿ ಹಿನ್ನಡೆ
ಥ್ಯಾಂಕ್ಸ್‌ಗಿವಿಂಗ್ ಹಬ್ಬಕ್ಕೆ ಒಂದು ದಿನ ಮೊದಲು ಪ್ರಕಟವಾಗಿರುವ ಈ ಪ್ರಸ್ತಾವನೆ, ಟ್ರಂಪ್ ಅವರ ಆರ್ಥಿಕ ನೀತಿಯಲ್ಲಿ ಮತ್ತೊಂದು ವಿವಾದಾತ್ಮಕ ಬೆಳವಣಿಗೆಯಾಗಿದೆ. ಇತ್ತೀಚೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಪ್ರತಿನಿಧಿಗಳ ಸಭೆ ಮತ್ತು ಸೆನೆಟ್ ಎರಡರಲ್ಲೂ ಡೆಮಾಕ್ರಟಿಕ್ ಪಕ್ಷ ಬಹುಮತ ಪಡೆದಿದೆ. ಟ್ರಂಪ್ ಅವರ ನೀತಿಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಸುಮಾರು ಮೂರನೇ ಎರಡರಷ್ಟು ಮತದಾರರು ಅಭಿಪ್ರಾಯಪಟ್ಟಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ನಡೆಸಿದ ಸಮೀಕ್ಷೆ ತಿಳಿಸಿದೆ.
ಆಮದು ಸುಂಕಗಳಿಂದ ಅಮೆರಿಕದಲ್ಲಿ ಉತ್ಪಾದನಾ ಉದ್ಯೋಗಗಳು ಹೆಚ್ಚಲಿವೆ ಮತ್ತು ಸರ್ಕಾರದ ಹಣಕಾಸು ಕೊರತೆ ಕಡಿಮೆಯಾಗಲಿದೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ. ಆದರೆ, ಕಳೆದ ವರ್ಷ ವಿಧಿಸಿದ್ದ ಸುಂಕಗಳಿಂದ ಹಣದುಬ್ಬರ ಹೆಚ್ಚಾಗಿದ್ದು, ಇದು ಮತದಾರರ ಅಸಮಾಧಾನಕ್ಕೆ ಕಾರಣವಾಗಿತ್ತು. ಭವಿಷ್ಯದಲ್ಲಿ ಸುಂಕ ವಿಧಿಸುವ ಮೊದಲು ಸಂಸತ್ತಿನ ಅನುಮತಿ ಕಡ್ಡಾಯಗೊಳಿಸಬೇಕು ಎಂದು ಡೆಮಾಕ್ರಟಿಕ್ ನಾಯಕರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




