ವಿದೇಶ

Hijab ಇಲ್ಲದೆ ಹಾಡಿದ್ದೇ ತಪ್ಪಾಯ್ತಾ? Iran ಗಾಯಕಿ ಪರಸ್ತೂ ಅಹ್ಮದಿಗೆ 74 ಛಡಿಯೇಟಿನ ಕಠಿಣ ಶಿಕ್ಷೆ..!

Hijab ಇಲ್ಲದೆ ಹಾಡಿದ್ದೇ ತಪ್ಪಾಯ್ತಾ? Iran ಗಾಯಕಿ ಪರಸ್ತೂ ಅಹ್ಮದಿಗೆ 74 ಛಡಿಯೇಟಿನ ಕಠಿಣ ಶಿಕ್ಷೆ..!
ಪರಸ್ತೂ ಅಹ್ಮದಿ
Published On :

ಟೆಹ್ರಾನ್: ಕಡ್ಡಾಯ ಹಿಜಾಬ್ ನಿಯಮವನ್ನು ಉಲ್ಲಂಘಿಸಿ ಯೂಟ್ಯೂಬ್‌ನಲ್ಲಿ ಸಂಗೀತ ಕಛೇರಿ ನಡೆಸಿದ ಆರೋಪದ ಮೇಲೆ, ಇರಾನ್‌ನ ಖ್ಯಾತ ಗಾಯಕಿ ಪರಸ್ತೂ ಅಹ್ಮದಿ (Parastoo Ahmadi) ಮತ್ತು ಅವರ ಸಂಗೀತ ತಂಡದ ನಾಲ್ವರು ಪುರುಷ ಸದಸ್ಯರಿಗೆ ತಲಾ 74 ಛಡಿಯೇಟಿನ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.

ಶಿಕ್ಷೆ ತಡೆಯಲು ಹಲವು ಪ್ರಯತ್ನಗಳು ಮತ್ತು ಕಾನೂನು ಮೇಲ್ಮನವಿಗಳನ್ನು ಸಲ್ಲಿಸಿದ್ದರೂ, ಕೋಮ್ ನಗರದ ಪ್ರಾಸಿಕ್ಯೂಟರ್ ಕಚೇರಿಯಲ್ಲಿ ಶಿಕ್ಷೆ ಜಾರಿಗೊಳಿಸಲಾಗಿದೆ.

ಖೋಮ್ (Qom) ನಗರದ ಪ್ರಾಸಿಕ್ಯೂಟರ್ ಕಚೇರಿಯ ಶಿಕ್ಷೆ ಜಾರಿ ಘಟಕದಲ್ಲಿ ಈ ಶಿಕ್ಷೆಯನ್ನು ನೀಡಲಾಗಿದೆ ಎಂದು ಅವರ ರಕ್ಷಣಾ ವಕೀಲರು ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

74 ಛಡಿಯೇಟು ಶಿಕ್ಷೆಯ ಜೊತೆಗೆ ಪರಸ್ತೂ ಮತ್ತು ಅವರೊಂದಿಗೆ ಕಾರ್ಯಕ್ರಮ ನೀಡಿದ್ದ ಸಂಗೀತಗಾರರಿಗೆ ಎರಡು ವರ್ಷಗಳ ಕಾಲ ಸಂಗೀತ ಚಟುವಟಿಕೆಗಳಲ್ಲಿ ತೊಡಗದಂತೆ ಹಾಗೂ ಇರಾನ್ ತೊರೆಯದಂತೆ ನಿರ್ಬಂಧ ವಿಧಿಸಲಾಗಿದೆ.

ಮಾನವ ಹಕ್ಕುಗಳ ಸಂಘಟನೆಗಳು ವ್ಯಾಪಕವಾಗಿ ಖಂಡಿಸಿದ್ದರೂ, ಸೆಪ್ಟೆಂಬರ್‌ನಲ್ಲಿ ಅವರ ಮೇಲ್ಮನವಿಯನ್ನು ತಿರಸ್ಕರಿಸಲಾಗಿತ್ತು.

ತೀರ್ಪನ್ನು ರದ್ದುಗೊಳಿಸಲು ಅಥವಾ ಕನಿಷ್ಠ ಶಿಕ್ಷೆಯನ್ನು ಕಡಿಮೆ ಮಾಡಲು, ಇಲ್ಲವೇ ಅದರ ಜಾರಿಯನ್ನು ಮುಂದೂಡಲು ನಮ್ಮಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ” ಎಂದು ಪರಸ್ತೂ ಅವರ ವಕೀಲರೊಬ್ಬರು ಸೋಮವಾರ ಬಿಬಿಸಿಗೆ ತಿಳಿಸಿದ್ದಾರೆ.

ಶಿಕ್ಷೆಯ ಜಾರಿಯನ್ನು ಮುಂದೂಡುವಂತೆಯೂ ಮನವಿ ಮಾಡಿದ್ದೆವು. ಆದರೆ, ಶಿಕ್ಷೆ ಜಾರಿ ವಿಭಾಗ ತಕ್ಷಣವೇ ಅದನ್ನು ಜಾರಿಗೊಳಿಸಬೇಕೆಂದು ಪಟ್ಟು ಹಿಡಿದಿತ್ತು ಎಂದು ಅವರು ಹೇಳಿದ್ದಾರೆ.

ಪರಸ್ತೂ ಅವರೊಂದಿಗೆ ಛಡಿಯೇಟು ಶಿಕ್ಷೆಗೆ ಗುರಿಯಾದ ನಾಲ್ವರು ಪುರುಷ ಸಂಗೀತಗಾರರನ್ನು ಸೊಹೈಲ್ ಫಕೀಹ್-ನಸಿರಿ, ಅಮೀನ್ ತಹೇರಿ, ಅಮಿರಾಲಿ ಪಿರ್ನಿಯಾ ಮತ್ತು ಮೊಹ್ಸೆನ್ ಲಷ್ಕರಿ ಎಂದು ಗುರ್ತಿಸಲಾಗಿದೆ.

ತಮಗೆ ಇಷ್ಟವಾದ ರೀತಿಯಲ್ಲಿ ಉಡುಪು ಧರಿಸಿ ಹಾಡಿದ್ದಾರೆ ಎಂಬ ಕಾರಣಕ್ಕೆ ಪರಸ್ತೂ ಅಹ್ಮದಿಗೆ ಛಡಿಯೇಟು ನೀಡಿರುವುದು ಅವರ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಮತ್ತು ತಾರತಮ್ಯಪೂರಿತ ಕಾನೂನು ಹಾಗೂ ನೀತಿಗಳನ್ನು ಪ್ರಶ್ನಿಸುವವರಿಗೆ ಹಿಂಸಾತ್ಮಕವಾಗಿ ಶಿಕ್ಷೆ ನೀಡಲು ಇರಾನ್ ಅಧಿಕಾರಿಗಳು ಸಿದ್ಧರಿದ್ದಾರೆ ಎಂಬುದಕ್ಕೆ ಇದು ಭಯಾನಕ ನಿದರ್ಶನ” ಎಂದು ಅಮೆರಿಕ ಮೂಲದ ಇರಾನ್ ಮಾನವ ಹಕ್ಕುಗಳ ಕೇಂದ್ರದ (CHRI) ಬಹಾರ್ ಘಂದೇಹರಿ ಹೇಳಿದ್ದಾರೆ.

ಈ ನಡುವೆ ಈ ಬೆಳವಣಿಗೆಗೆ ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಇರಾನ್ ಆಡಳಿತದ ವಿರೋಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇರಾನ್‌ನ ಧಾರ್ಮಿಕ ಆಡಳಿತದ ಅಡಿಯಲ್ಲಿ ಮಹಿಳೆಯರ ಮೇಲಿನ ನಿರಂತರ ದಮನಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ ಎಂದು ಹೋರಾಟಗಾರರು ಖಂಡಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ಬೃಹತ್ ಪ್ರತಿಭಟನೆಗಳ ಬಳಿಕ ಆಡಳಿತದ ವಿರುದ್ಧ ಧ್ವನಿ ಎತ್ತುವವರ ಮೇಲೆ ದಮನಕಾರಿ ಕ್ರಮಗಳು ಮತ್ತಷ್ಟು ತೀವ್ರಗೊಂಡಿವೆ.

ಆ ಪ್ರತಿಭಟನೆಗಳ ವೇಳೆ ಆಡಳಿತದ ಭದ್ರತಾ ಪಡೆಗಳಿಂದ ಹತ್ತಾರು ಸಾವಿರ ಇರಾನಿಯನ್ನರು ಹತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಯುದ್ಧದ ಬಳಿಕವೂ ಸರ್ಕಾರದ ಟೀಕಾಕಾರರು ಹಾಗೂ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮಗಳು ಹೆಚ್ಚಾಗಿವೆ. ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆಗಳ ಬಳಕೆಯನ್ನೂ ಇರಾನ್ ಗಣನೀಯವಾಗಿ ವಿಸ್ತರಿಸಿದೆ.

ಆಕೆ ಹಾಡಿದಳು. ಅದಕ್ಕೆ ಇಸ್ಲಾಮಿಕ್ ಗಣರಾಜ್ಯ ಛಡಿಯೇಟಿನ ಮೂಲಕ ಪ್ರತಿಕ್ರಿಯಿಸಿತು. ಜನರ ಜೀವನೋಪಾಯ, ನೀರು ಮತ್ತು ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ಅಸಮರ್ಥವಾಗಿರುವ ಸರ್ಕಾರವೊಂದು, ಮಹಿಳೆಯೊಬ್ಬಳು ತನ್ನ ಧ್ವನಿಯಲ್ಲಿ ಹಾಡಿದ್ದಾಳೆ ಎಂಬ ಕಾರಣಕ್ಕೆ ಆಕೆಗೆ ಛಡಿಯೇಟು ನೀಡಲು ಹಿಂಜರಿಯುವುದಿಲ್ಲ ಎಂದರೆ, ಅದರ ಆಡಳಿತದ ಅಂತ್ಯ ಸಮೀಪಿಸಿದೆ ಎಂದು ವ್ಯಕ್ತಿಯೊಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇದರಂತೆ ಇತರ ಇರಾನಿ ಹೋರಾಟಗಾರರೂ ಈ ಶಿಕ್ಷೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮೊಜ್ತಬಾ ನಜಫಿ ಅವರು ಎಕ್ಸ್‌ನಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, ನೀವು ಅಸ್ತಿತ್ವದ ಹೋರಾಟ ಎಂದು ಕರೆಯುತ್ತಿರುವ ಯುದ್ಧದ ನಡುವೆಯಾದರೂ ನಮ್ಮ ದೇಶದ ಹೆಣ್ಣುಮಕ್ಕಳಿಗೆ ಛಡಿಯೇಟು ನೀಡುವುದನ್ನು ನಿಲ್ಲಿಸಿ. ಇದನ್ನು ಮಾಡುವುದು ಅಷ್ಟು ಕಷ್ಟವೇ?” ಎಂದು ಪ್ರಶ್ನಿಸಿದ್ದಾರೆ.

ಗಡಿಪಾರಾಗಿರುವ ಇರಾನ್‌ನ ರಾಜಕುಮಾರ ರೆಜಾ ಪಹ್ಲವಿ ಕೂಡ ಈ ಶಿಕ್ಷೆಯನ್ನು ಖಂಡಿಸಿದ್ದಾರೆ. ಈ ಶಿಕ್ಷೆಯ ಉದ್ದೇಶ ಮಹಿಳೆಯರನ್ನು ಅವಮಾನಿಸುವುದು ಮತ್ತು ಅವರ ಧ್ವನಿಯನ್ನು ಅಡಗಿಸುವುದಾಗಿದೆ. ಮಹಿಳೆಯರ ಧ್ವನಿಗೆ ಧಾರ್ಮಿಕ ಆಡಳಿತ ಹೆದರುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರ ಕಚೇರಿ ಹೇಳಿಕೆ ನೀಡಿದೆ.

1979ರ ಕ್ರಾಂತಿಗೂ ಮೊದಲು ಇರಾನ್ ಕಲೆ ಮತ್ತು ಸಂಗೀತದ ಪ್ರಮುಖ ಕೇಂದ್ರವಾಗಿತ್ತು. ಆ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮದೇ ಆದ ಸ್ಥಾನವನ್ನು ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ಇಂದು ಅಪರಾಧಿ ಇಸ್ಲಾಮಿಕ್ ಗಣರಾಜ್ಯವು ಧೈರ್ಯ ಮತ್ತು ಸೌಂದರ್ಯಕ್ಕೆ ಛಡಿಯೇಟು ನೀಡುತ್ತಿದೆ. ಇರಾನ್ ವಿರೋಧಿ ಈ ಆಡಳಿತ ಶೀಘ್ರದಲ್ಲೇ ನಾಶವಾಗಲಿದೆ. ಸ್ವತಂತ್ರ ಇರಾನ್‌ನಲ್ಲಿ ಮಹಿಳೆಯರು ಕಲೆ, ಸಮಾಜ, ಆರ್ಥಿಕತೆ ಮತ್ತು ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರೊಂದಿಗೆ ಸಮಾನವಾಗಿ ನಿಂತು ದೇಶದ ಪುನರ್‌ನಿರ್ಮಾಣದಲ್ಲಿ ತೊಡಗಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಲಕ್ಷಾಂತರ ವೀಕ್ಷಕರ ಗಮನ ಸೆಳೆದ ಸಂಗೀತ ಕಾರ್ಯಕ್ರಮ

29 ವರ್ಷದ ಪರಸ್ತೂ ಅಹ್ಮದಿ ಇರಾನ್‌ನ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. 2024ರ ಡಿಸೆಂಬರ್‌ನಲ್ಲಿ ಅವರು ಮತ್ತು ಅವರೊಂದಿಗೆ ಇದ್ದ ನಾಲ್ವರು ಸಂಗೀತಗಾರರು ನೀಡಿದ್ದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ವಿಧಿಸಲಾಗಿದೆ.

ಯಾವುದೇ ಪ್ರೇಕ್ಷಕರಿಲ್ಲದೆ ನಡೆದ ಈ ಕಾರ್ಯಕ್ರಮವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಇದುವರೆಗೆ ಮೂರು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಕಾರ್ಯಕ್ರಮದಲ್ಲಿ ಪರಸ್ತೂ ಕಪ್ಪು ಬಣ್ಣದ ಉಡುಪು ಧರಿಸಿದ್ದರು. ಅವರ ಕುತ್ತಿಗೆ ಮತ್ತು ತೋಳುಗಳು ಕಾಣಿಸುತ್ತಿದ್ದವು ಹಾಗೂ ತಲೆಯ ಮೇಲೆ ಹಿಜಾಬ್ ಇರಲಿಲ್ಲ. ಕಾರ್ಯಕ್ರಮದ ಯೂಟ್ಯೂಬ್ ಪುಟದಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

ನಾನು ಪರಸ್ತೂ. ನಾನು ಪ್ರೀತಿಸುವ ಜನರಿಗಾಗಿ ಹಾಡಲು ಬಯಸುವ ಹುಡುಗಿ. ನಾನು ತುಂಬಾ ಪ್ರೀತಿಸುವ ನನ್ನ ದೇಶಕ್ಕಾಗಿ ಹಾಡುವುದು ನನ್ನ ಹಕ್ಕು. ಈ ಹಕ್ಕನ್ನು ನಾನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದರು.

ಕೋಮ್ ನಗರದ ಸಮೀಪವಿರುವ ಐತಿಹಾಸಿಕ ದೇರ್-ಎ ಗಚಿನ್ ಕಾರವಾನ್‌ಸರಾಯ್‌ನಲ್ಲಿ ಈ ಸಂಗೀತ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗಿದ್ದು, ಹಿಂದೆ ಪ್ರಯಾಣಿಕರು ತಂಗಲು ಬಳಸುತ್ತಿದ್ದ ಈ ಕೋಟೆಯಂತಹ ಕಟ್ಟಡವು ಐತಿಹಾಸಿಕ ವಿಶ್ರಾಂತಿ ತಾಣವಾಗಿದೆ.

ಶಿಯಾ ಮುಸ್ಲಿಮರಿಗೆ ಪವಿತ್ರವಾಗಿರುವ ಮತ್ತು ಧಾರ್ಮಿಕ ಸಂಪ್ರದಾಯವಾದದ ಪ್ರಮುಖ ಕೇಂದ್ರವೆಂದು ಪರಿಗಣಿಸಲ್ಪಟ್ಟಿರುವ ಕೋಮ್ ನಗರದ ಸಮೀಪವೇ ಈ ಕಾರ್ಯಕ್ರಮ ನಡೆದಿತ್ತು.

ಕಾರ್ಯಕ್ರಮ ಪ್ರಸಾರವಾದ ಬಳಿಕ ಭದ್ರತಾ ಪಡೆಗಳು ಪರಸ್ತೂ ಅವರ ಮನೆ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದವು.

ಜೂನ್‌ನಲ್ಲಿ ಪರಸ್ತೂ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಲ್ವರು ಸಂಗೀತಗಾರರಿಗೆ ಸಾರ್ವಜನಿಕ ಸಭ್ಯತೆಗೆ ಧಕ್ಕೆ ತಂದ ಆರೋಪದ ಮೇಲೆ ಶಿಕ್ಷೆ ವಿಧಿಸಲಾಯಿತು. ಅಧಿಕಾರಿಗಳು ಅವರ ಕಾರ್ಯಕ್ರಮದ ವಿಷಯವನ್ನು ಅಶ್ಲೀಲ ಮತ್ತು ಅನೈತಿಕ ಎಂದು ಕರೆದಿದ್ದರು.

ಆದರೆ, ತೀರ್ಪಿನಲ್ಲಿ ಹಿಜಾಬ್ ಧರಿಸದೆ ಕಾರ್ಯಕ್ರಮ ನೀಡಿದ ನಿರ್ಧಾರವನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ. ಪ್ರಕರಣದ ತನಿಖೆ ಆರಂಭವಾದ ಸಂದರ್ಭದಲ್ಲಿ ಇರಾನ್ ಮಾಧ್ಯಮಗಳು, ದೇಶದ ಕಾನೂನು ಮತ್ತು ಧಾರ್ಮಿಕ ನಿಯಮಗಳನ್ನು ಪಾಲಿಸದ ಕಾರಣ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ಮಾಡಿದ್ದವು.

ಈ ನಡುವೆ ಪರಸ್ತೂ ಧರಿಸಿದ್ದ ಉಡುಪು ಶಿಕ್ಷೆ ವಿಧಿಸಲು ಪ್ರಮುಖ ಕಾರಣವಾಗಿತ್ತು ಎಂದು ಇರಾನ್‌ನ ಮಾನವ ಹಕ್ಕುಗಳ ಸಂಘಟನೆ (IHRNGO) ಅಭಿಪ್ರಾಯಪಟ್ಟಿದೆ.

ಸಾರ್ವಜನಿಕವಾಗಿ ಹಾಡಿರುವುದು ಮತ್ತು ಆಡಳಿತದ ನಿಯಮಗಳಿಗೆ ಸವಾಲು ಹಾಕಿದ್ದಾರೆ ಎಂಬ ಗ್ರಹಿಕೆಯೂ ಕಾನೂನು ಪ್ರಕ್ರಿಯೆಗೆ ಕಾರಣವಾಗಿದೆ ಎಂದು ಸಂಘಟನೆ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.