ಭಾರತ, ಚೀನಾ ಸೇರಿ 16 ರಾಷ್ಟ್ರಗಳ ಮೇಲೆ ಆಮದು ಸುಂಕ ಹೆಚ್ಚಿಸಲು ಅಮೆರಿಕ ಸಿದ್ಧತೆ: ಇಂದೇ ವರದಿ ಬಿಡುಗಡೆ?
1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿಯಲ್ಲಿ ನಡೆಸಲಾಗುತ್ತಿರುವ ತನಿಖೆಯ ಫಲಿತಾಂಶದ ಆಧಾರದ ಮೇಲೆ 16 ಪ್ರಮುಖ ಆರ್ಥಿಕತೆಗಳ ಮೇಲೆ ಈ ಸುಂಕ ವಿಧಿಸಲಾಗುತ್ತದೆ. ತನಿಖೆಯ ವರದಿ ಇಂದು ಬುಧವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅಮೆರಿಕದ ಉತ್ಪಾದನಾ ವಲಯಕ್ಕೆ ಹಾನಿಯಾಗುವ ರೀತಿಯಲ್ಲಿ 16 ರಾಷ್ಟ್ರಗಳಲ್ಲಿ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ, ಭಾರತ, ಚೀನಾ ಸೇರಿದಂತೆ 16 ರಾಷ್ಟ್ರಗಳ ಮೇಲೆ ಹೆಚ್ಚುವರಿ ಆಮದು ಸುಂಕ ವಿಧಿಸಲು ಸಿದ್ಧತೆ ನಡೆಸಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿಯಲ್ಲಿ ನಡೆಸಲಾಗುತ್ತಿರುವ ತನಿಖೆಯ ಫಲಿತಾಂಶದ ಆಧಾರದ ಮೇಲೆ 16 ಪ್ರಮುಖ ಆರ್ಥಿಕತೆಗಳ ಮೇಲೆ ಈ ಸುಂಕ ವಿಧಿಸಲಾಗುತ್ತದೆ. ತನಿಖೆಯ ವರದಿ ಇಂದು ಬುಧವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷಾವಧಿಯ ಎರಡನೇ ಅವಧಿಯಲ್ಲಿ ಈಗಾಗಲೇ ವಿಧಿಸಲಾಗಿರುವ ಸುಂಕಗಳ ಜತೆಗೆ ಹೊಸ ಸುಂಕಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.
ಕಳೆದ ಫೆಬ್ರವರಿಯಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ ಆಮದು ತೆರಿಗೆ ದರಗಳಿಗೆ ಪರ್ಯಾಯವಾಗಿ ಈ ಹೊಸ ಸುಂಕಗಳು ಭಾಗಶಃ ಜಾರಿಗೆ ಬರಲಿವೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳ ಪೈಕಿ ಹೆಚ್ಚಿನವುಗಳಲ್ಲಿ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯ ಮಿತಿಮೀರಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (USTR) ಮಾರ್ಚ್ನಲ್ಲಿ ಪರಿಶೀಲನೆಗೆ ಒಳಪಡಿಸಿತ್ತು. ಇದರ ಜತೆಗೆ, 59 ರಾಷ್ಟ್ರಗಳು ಮತ್ತು ಯುರೋಪಿಯನ್ ಒಕ್ಕೂಟದಲ್ಲಿ ಬಲವಂತದ ಕಾರ್ಮಿಕ ಪದ್ಧತಿ ವಿರುದ್ಧದ ಕಾನೂನುಗಳ ಅನುಷ್ಠಾನ ದುರ್ಬಲವಾಗಿರುವ ಅಥವಾ ಕಟ್ಟುನಿಟ್ಟಾಗಿಲ್ಲದಿರುವ ಕುರಿತು ಪ್ರತ್ಯೇಕ ತನಿಖೆಯನ್ನೂ ನಡೆಸಲಾಗಿತ್ತು.
ಜುಲೈನಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತವು ಈ 60 ವ್ಯಾಪಾರ ಪಾಲುದಾರ ರಾಷ್ಟ್ರಗಳಿಂದ ಆಮದಾಗುವ ಸರಕುಗಳ ಮೇಲೆ ಶೇ.10 ಅಥವಾ ಶೇ.12.5ರಷ್ಟು ಸುಂಕ ವಿಧಿಸಿತ್ತು.
ಈ ರಾಷ್ಟ್ರಗಳೆಂದರೆ ಚೀನಾ, ಯುರೋಪಿಯನ್ ಒಕ್ಕೂಟ, ಭಾರತ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ವಿಯೆಟ್ನಾಂ, ತೈವಾನ್, ಥಾಯ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ, ಸ್ವಿಟ್ಜರ್ಲೆಂಡ್, ನಾರ್ವೆ, ಸಿಂಗಾಪುರ, ಬಾಂಗ್ಲಾದೇಶ ಮತ್ತು ಕಾಂಬೋಡಿಯಾ.
ತನಿಖೆಯ ಫಲಿತಾಂಶಗಳು ಈ ವಾರವೇ ಪ್ರಕಟವಾಗುವ ಸಾಧ್ಯತೆಯಿದೆ ಎಂದು 'ದಿ ವಾಲ್ ಸ್ಟ್ರೀಟ್ ಜರ್ನಲ್' ಈ ಹಿಂದೆ ವರದಿ ಮಾಡಿತ್ತು.
ಆಮದು ಸರಕುಗಳ ಮೇಲೆ ಎಷ್ಟು ಪ್ರಮಾಣದ ಸುಂಕ ವಿಧಿಸಲಾಗುತ್ತದೆ ಅಥವಾ ಯಾವ ಸರಕುಗಳಿಗೆ ವಿನಾಯಿತಿ ನೀಡಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮಿತಿಮೀರಿದ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯಕ್ಕೆ ಚೀನಾವೇ ಪ್ರಮುಖ ಮೂಲ ಎಂದು ಅಮೆರಿಕದ ಆಡಳಿತ ಆರೋಪಿಸಿದೆ. ಚೀನಾ ಉಕ್ಕು, ಅಲ್ಯೂಮಿನಿಯಂ, ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ವಿವಿಧ ಉತ್ಪನ್ನಗಳಿಂದ ಜಾಗತಿಕ ಮಾರುಕಟ್ಟೆಯನ್ನು ತುಂಬುತ್ತಿದೆ ಎಂಬುದು ಅಮೆರಿಕದ ವಾದವಾಗಿದೆ.
ಈಗಾಗಲೇ ಚೀನಾದಿಂದ ಆಮದಾಗುವ ಎಲ್ಲ ಸರಕುಗಳ ಮೇಲೆ ಅಮೆರಿಕ ಶೇ.12.5ರಷ್ಟು ಬಲವಂತದ ಕಾರ್ಮಿಕ ಪದ್ಧತಿ ವಿರೋಧಿ ಸುಂಕ ವಿಧಿಸಿದೆ. ಹೀಗಾಗಿ, ಶೇ.20ರಷ್ಟು ಗರಿಷ್ಠ ಮಿತಿಯನ್ನು ತಲುಪಲು ಇನ್ನೂ ಶೇ.7.5ರಷ್ಟು ಸುಂಕ ವಿಧಿಸುವ ಅವಕಾಶವಿದೆ.
ಇದೇ ವೇಳೆ, ಅಮೆರಿಕ ಮತ್ತು ಚೀನಾ ಎರಡೂ ದೇಶಗಳು ಪರಸ್ಪರರ ದೇಶಗಳಿಂದ ಆಮದಾಗುವ 30 ಶತಕೋಟಿ ಡಾಲರ್ ಮೌಲ್ಯದ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವವಿಲ್ಲದ ಸರಕುಗಳ ಮೇಲಿನ ಸುಂಕ ಕಡಿತಗೊಳಿಸಲು 'ಬೋರ್ಡ್ ಆಫ್ ಟ್ರೇಡ್' ಎಂಬ ಪ್ರಕ್ರಿಯೆಯಡಿ ಮಾತುಕತೆ ನಡೆಸುತ್ತಿವೆ. ಸೆಕ್ಷನ್ 301ರ ಅಡಿಯಲ್ಲಿ ವಿಧಿಸಲಾಗುವ ಹೊಸ ಸುಂಕಗಳು ಈ ಪ್ರಕ್ರಿಯೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




