Iran Drone ಭಯವಿದೆಯಾ? ಪತ್ರಕರ್ತನ ಪ್ರಶ್ನೆಗೆ 'ಎಚ್ಚರಿಕೆಯಿಂದಿರಿ' ಎಂದ Trump, ವಾರ್ನಿಂಗ್ ಕೊಟ್ಟಿದ್ದೇಕೆ..?

ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯೊಂದರ ಮೇಲೆ ಇರಾನ್ ಮತ್ತೊಂದು ಡ್ರೋನ್ ದಾಳಿಗೆ ಪ್ರಯತ್ನಿಸಿದ ಒಂದು ದಿನದ ಬಳಿಕ ಈ ಮಾತುಕತೆ ನಡೆದಿದೆ. ಮೂರು ದಿನಗಳ ಅವಧಿಯಲ್ಲಿ ಅಮೆರಿಕದ ನೆಲೆಯ ಮೇಲೆ ನಡೆದ ಎರಡನೇ ದಾಳಿ ಪ್ರಯತ್ನ ಇದಾಗಿದೆ.
Donald Trump
ಡೊನಾಲ್ಡ್ ಟ್ರಂಪ್
Updated on: 

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಉದ್ವಿಗ್ನತೆ ತೀವ್ರಗೊಂಡಿರುವ ಬೆನ್ನಲ್ಲೇ, ಇರಾನ್ ಡ್ರೋನ್ ದಾಳಿಯ ಭಯದ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಸ್ಯಮಯ ಹಾಗೂ ಅಷ್ಟೇ ಅಚ್ಚರಿಯ ಉತ್ತರ ನೀಡಿದ್ದಾರೆ.

ನವೆಂಬರ್ 16 ರಂದು ಶ್ವೇತಭವನದ ಸೌತ್ ಲಾನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ, "ಇರಾನ್ ಡ್ರೋನ್‌ಗಳು ನಿಮ್ಮನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವ ಭಯವಿದೆಯೇ?" ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ನನಗಿಂತ ಹೆಚ್ಚಾಗಿ ನಿಮ್ಮ ಬಗ್ಗೆ ನನಗೆ ಚಿಂತೆಯಿದೆ. ಏಕೆಂದರೆ ಅವರು ನನ್ನ ಮೇಲೆ ದಾಳಿ ಮಾಡಿದರೆ, ನೀವೂ ಇರುವುದಿಲ್ಲ ಎಂದು ಹೇಳಿದ್ದಾರೆ.

ಬಳಿಕ ತಮ್ಮ ಮತ್ತು ಪತ್ರಕರ್ತರ ನಡುವಿನ ಅಲ್ಪ ಅಂತರವನ್ನು ಕೈಯಿಂದ ತೋರಿಸಿದ ಅವರು, “ಎಚ್ಚರಿಕೆಯಿಂದಿರಿ” ಎಂದೂ ಎಚ್ಚರಿಸಿದರು.

ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯೊಂದರ ಮೇಲೆ ಇರಾನ್ ಮತ್ತೊಂದು ಡ್ರೋನ್ ದಾಳಿಗೆ ಪ್ರಯತ್ನಿಸಿದ ಒಂದು ದಿನದ ಬಳಿಕ ಈ ಮಾತುಕತೆ ನಡೆದಿದೆ. ಮೂರು ದಿನಗಳ ಅವಧಿಯಲ್ಲಿ ಅಮೆರಿಕದ ನೆಲೆಯ ಮೇಲೆ ನಡೆದ ಎರಡನೇ ದಾಳಿ ಪ್ರಯತ್ನ ಇದಾಗಿದೆ.

ನವೆಂಬರ್ 15ರಂದು ನಡೆದ ಘಟನೆಯ ಹೊಣೆಯನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೊತ್ತುಕೊಂಡಿದೆ ಎಂದು 'ಪೀಪಲ್' ವರದಿ ಮಾಡಿದೆ.

Donald Trump
Hormuz ಜಲಸಂಧಿಯಲ್ಲಿ ಮತ್ತೊಂದು ತೈಲ ಟ್ಯಾಂಕರ್ ಮೇಲೆ ದಾಳಿ; 24 ಗಂಟೆಗಳಲ್ಲಿ 4 ಹಡಗುಗಳಿಗೆ ಹಾನಿ, ಹೆಚ್ಚಿದ ಯುದ್ಧದ ಭೀತಿ..!

ಬಹ್ರೇನ್‌ನ ಅಲ್-ರಿಫಾ ವಾಯುನೆಲೆಯಲ್ಲಿರುವ ಅಮೆರಿಕದ ವಾಯು ರಕ್ಷಣಾ ರಾಡಾರ್ ಸೌಲಭ್ಯವನ್ನು ಗುರಿಯಾಗಿಸಿಕೊಂಡು ಆರು ಡ್ರೋನ್‌ಗಳನ್ನು ಉಡಾಯಿಸಿರುವುದಾಗಿ ಐಆರ್‌ಜಿಸಿ ಹೇಳಿಕೊಂಡಿದೆ. ಆದರೆ, ಗುರಿ ತಲುಪುವ ಮುನ್ನವೇ ತಮ್ಮ ಪಡೆಗಳು ಆ ಡ್ರೋನ್‌ಗಳನ್ನು ಪತ್ತೆಹಚ್ಚಿ ನಾಶಪಡಿಸಿವೆ ಎಂದು ಬಹ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಗಳ ಬೆನ್ನಲ್ಲೇ ಬಹ್ರೇನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಅಲ್ಲಿನ ಅಮೆರಿಕನ್ನರಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಈ ಪ್ರದೇಶದಲ್ಲಿರುವ ಅಮೆರಿಕ ಸರ್ಕಾರದ ಸಿಬ್ಬಂದಿ ಮತ್ತು ಕಚೇರಿಗಳಿಗೂ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲೇ ಈ ದಾಳಿಗಳು ನಡೆದಿವೆ. 2026ರ ಫೆಬ್ರವರಿಯಲ್ಲಿ ಆರಂಭವಾದ ಸಂಘರ್ಷ ಸುಮಾರು ಒಂಬತ್ತು ತಿಂಗಳಿನಿಂದ ಮುಂದುವರಿದಿದೆ.

ಈ ಯುದ್ಧದಿಂದ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಹಡಗು ಸಂಚಾರಕ್ಕೆ ಅಡ್ಡಿಯಾಗಿದ್ದು, ಜಾಗತಿಕವಾಗಿ ಇಂಧನ ಬೆಲೆ ಏರಿಕೆಗೂ ಕಾರಣವಾಗಿದೆ. ಇದೇ ವೇಳೆ ಅಮೆರಿಕದ ರಾಜಕೀಯ ವಲಯದಲ್ಲೂ ಇರಾನ್ ಸಂಘರ್ಷ ಪ್ರಮುಖ ವಿಚಾರವಾಗಿ ಪರಿಣಮಿಸಿದೆ.

2026ರ ಮಧ್ಯಂತರ ಚುನಾವಣೆಗಳ ಬಳಿಕ ಪ್ರತಿಕ್ರಿಯಿಸಿದ್ದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ರಿಪಬ್ಲಿಕನ್ ಪಕ್ಷದ ಚುನಾವಣಾ ಸೋಲಿಗೆ ಇರಾನ್ ಯುದ್ಧವೇ ಕಾರಣ ಎಂದು ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X