Iran ಮೇಲೆ ಮತ್ತೆ ಮುಗಿಬಿದ್ದ ಅಮೆರಿಕ; Qeshm ದ್ವೀಪದ ಮೇಲೆ ವೈಮಾನಿಕ ದಾಳಿ, ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಯುದ್ಧದ ಆತಂಕ..!

ಹಾರ್ಮುಜ್ ಜಲಸಂಧಿಯ (Strait of Hormuz) ವಾಯುಪ್ರದೇಶದಲ್ಲಿ ಸಂಚರಿಸುತ್ತಿದ್ದ ಅಮೆರಿಕದ ವಿಮಾನವೊಂದನ್ನು ಹೊಡೆದುರುಳಿಸಲು ಇರಾನ್ ಇತ್ತೀಚೆಗೆ ಯತ್ನಿಸಿತ್ತು. ಇದಕ್ಕೆ ಪ್ರತಿಯಾಗಿ, ಯುಎಸ್ ಸೆಂಟ್ರಲ್ ಕಮಾಂಡ್ ಆತ್ಮರಕ್ಷಣೆಗಾಗಿ ಈ "ರಕ್ಷಣಾತ್ಮಕ ಕ್ರಮ" ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
File photo
ಸಂಗ್ರಹ ಚಿತ್ರ
Updated on: 

ವಾಷಿಂಗ್ಟನ್/ಟೆಹ್ರಾನ್: ಅಮೆರಿಕದ ಅತ್ಯಂತ ನಿರ್ಣಾಯಕ ಮಧ್ಯಾವಧಿ ಚುನಾವಣೆಗಳು ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ, ಅಮೆರಿಕಾ ಸೇನೆ ಇರಾನ್‌ನ ಕೇಶ್ಮ್ ದ್ವೀಪದ (Qeshm Island) ಮೇಲೆ ಸೀಮಿತ ರಕ್ಷಣಾತ್ಮಕ ವೈಮಾನಿಕ ದಾಳಿಗಳನ್ನು ನಡೆಸಿದೆ. ಸೋಮವಾರ ಸಂಜೆ ನಡೆದ ಮಿಲಿಟರಿ ಆಪರೇಷನ್ ಜಾಗತಿಕವಾಗಿ ತೀವ್ರ ಸಂಚಲನ ಸೃಷ್ಟಿಸಿದೆ.

ಹಾರ್ಮುಜ್ ಜಲಸಂಧಿಯ (Strait of Hormuz) ವಾಯುಪ್ರದೇಶದಲ್ಲಿ ಸಂಚರಿಸುತ್ತಿದ್ದ ಅಮೆರಿಕದ ವಿಮಾನವೊಂದನ್ನು ಹೊಡೆದುರುಳಿಸಲು ಇರಾನ್ ಇತ್ತೀಚೆಗೆ ಯತ್ನಿಸಿತ್ತು. ಇದಕ್ಕೆ ಪ್ರತಿಯಾಗಿ, ಯುಎಸ್ ಸೆಂಟ್ರಲ್ ಕಮಾಂಡ್ ಆತ್ಮರಕ್ಷಣೆಗಾಗಿ ಈ "ರಕ್ಷಣಾತ್ಮಕ ಕ್ರಮ" ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ಆಸ್ತಿಗಳನ್ನು ಗುರಿಯಾಗಿಸಲು ಬಳಸುತ್ತಿದ್ದ ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ ಲಾಂಚರ್‌ಗಳು ಮತ್ತು ರಾಡಾರ್ ಕೇಂದ್ರಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ.

ಸಾರ್ವಜನಿಕವಾಗಿ ಹೇಳಿಕೆ ನೀಡಲು ಅಧಿಕೃತ ಅನುಮತಿ ಇಲ್ಲದ ಕಾರಣ ಹೆಸರು ಬಹಿರಂಗಪಡಿಸದ ಅಮೆರಿಕದ ಅಧಿಕಾರಿಯೊಬ್ಬರು, ಅಮೆರಿಕದ ನೆಲೆಗಳ ಮೇಲೆ ಇರಾನ್ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಬಳಸುತ್ತಿರುವುದನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಈ ದಾಳಿಗಳು ಪೂರ್ಣ ಪ್ರಮಾಣದ ಯುದ್ಧಕ್ಕೆ ಮರಳುವ ಸೂಚನೆಯಂತೆ ಕಾಣುತ್ತಿಲ್ಲ. ಆದರೆ, ಮಂಗಳವಾರ ನಡೆಯಲಿರುವ ಮಧ್ಯಂತರ ಚುನಾವಣೆಗೂ ಮುನ್ನ ಇರಾನ್ ಮೇಲೆ ಹೊಸ ದಾಳಿ ನಡೆಸುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಹೇಳಿದ್ದರು. ಈ ನಡುವೆ ಇದೀಗ ನಡೆದಿರುವ ದಾಳಿಯು ಹೊಸ ಆತಂಕಕ್ಕೆ ಕಾರಣವಾಗಿದೆ.

ಜನಪ್ರಿಯತೆ ಕಳೆದುಕೊಂಡಿರುವ ಯುದ್ಧ ಹಾಗೂ ಅದರಿಂದ ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಸೇರಿದಂತೆ ಆರ್ಥಿಕತೆಯ ಮೇಲೆ ಉಂಟಾಗಿರುವ ಪರಿಣಾಮಗಳು, ಕಾಂಗ್ರೆಸ್ ಮೇಲಿನ ಹಿಡಿತ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಇದರಂತೆ ಅಮೆರಿಕ ಮತ್ತೆ ಇರಾನ್ ವಿರುದ್ಧ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ಆರಂಭಿಸಬಹುದೇ ಎಂಬ ಆತಂಕ ಈ ಪ್ರದೇಶದಲ್ಲಿ ಹೆಚ್ಚಾಗಿದೆ.

ವಾಲ್ ಸ್ಟ್ರೀಟ್ ಜರ್ನಲ್ ಕೂಡ ಈ ದಾಳಿಯ ಕುರಿತು ಮೊದಲೇ ವರದಿ ಮಾಡಿತ್ತು. ಎಂಟು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಯುದ್ಧವು ಜಾಗತಿಕ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಿದ್ದು, ಇರಾನ್‌ನಲ್ಲಿ ಭಾರೀ ಪರಿಣಾಮ ಬೀರಿದೆ.

ಈ ನಡುವೆ ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ಕೆಲವು ಮಿತ್ರ ರಾಷ್ಟ್ರಗಳು ಮುಂದಿನ ಕಾರ್ಯತಂತ್ರದ ಕುರಿತು ಟ್ರಂಪ್ ಮೇಲೆ ಒತ್ತಡ ಹೇರುತ್ತಿವೆ. ಮತ್ತೊಂದೆಡೆ, ತೆರೆಮರೆಯ ರಾಜತಾಂತ್ರಿಕ ಮಾತುಕತೆಗಳೂ ನಡೆಯುತ್ತಿವೆ. ಅಮೆರಿಕ ಸೆಪ್ಟೆಂಬರ್ ಆರಂಭದಲ್ಲಿ ಕೊನೆಯದಾಗಿ ಇರಾನ್ ಮೇಲೆ ದಾಳಿ ನಡೆಸಿತ್ತು ಎಂದು ತಿಳಿದುಬಂದಿದೆ.

ಆದರೆ, ಇರಾನ್‌ನ ತೈಲವನ್ನು ಸಾಗಿಸುವ ಟ್ಯಾಂಕರ್‌ಗಳು ಜಾಗತಿಕ ಮಾರುಕಟ್ಟೆ ತಲುಪದಂತೆ ತಡೆಯಲು ವಿಧಿಸಿರುವ ನೌಕಾ ದಿಗ್ಬಂಧನವನ್ನು ಮುಂದುವರಿಸಲು ಸಾವಿರಾರು ಅಮೆರಿಕದ ಸೈನಿಕರು ಇರಾನ್ ಕರಾವಳಿಯ ಸಮುದ್ರ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದಾರೆ. ಇದರ ಜತೆಗೆ ಮೂರನೇ ವಿಮಾನವಾಹಕ ನೌಕೆ ಹಾಗೂ ಸಾವಿರಾರು ಹೆಚ್ಚುವರಿ ಸೈನಿಕರು ಮಧ್ಯಪ್ರಾಚ್ಯದತ್ತ ತೆರಳುತ್ತಿದ್ದಾರೆ.

ದಾಳಿ ದೃಢಪಡಿಸುವುದಕ್ಕೂ ಮುನ್ನ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಇರಾನ್ ಜೊತೆ ಒಪ್ಪಂದ ಸಾಧ್ಯವಾಗಬಹುದು ಎಂಬ ಆಶಾವಾದ ವ್ಯಕ್ತಪಡಿಸಿದ್ದರು.

File photo
ಅಮೆರಿಕಾ ಚುನಾವಣಾ ರ‍್ಯಾಲಿಯಲ್ಲಿ Operation Sindoor ಪ್ರಸ್ತಾಪ; Nobel ಕೈತಪ್ಪಿದ್ದಕ್ಕೆ ಟ್ರಂಪ್ ಆಕ್ರೋಶ..!

ಕಳೆದ ವಾರ ಇರಾನ್‌ನ ಭದ್ರತಾ ಮುಖ್ಯಸ್ಥ ಮೊಹ್ಸೆನ್ ರೆಜಾಯಿಗೆ ವ್ಯಾನ್ಸ್ ಪತ್ರ ಬರೆದಿದ್ದರು. ಆದರೆ, ಶ್ವೇತಭವನ ಈ ಪತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ. ಇರಾನ್‌ಗೆ ವೈದ್ಯಕೀಯ ಸಾಮಗ್ರಿಗಳು ಮತ್ತು ಇತರ ನೆರವು ಒದಗಿಸುವ ಕುರಿತು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದರು.

ಸೋಮವಾರ ಈ ಪತ್ರದ ಕುರಿತು ಪ್ರಶ್ನಿಸಿದಾಗ, ಇರಾನ್ ಜೊತೆ ಹಲವು ಸುತ್ತಿನ ಉತ್ತಮ ಮಾತುಕತೆಗಳು ನಡೆದಿವೆ. ಸುಮಾರು ಒಂದು ಗಂಟೆ ಹಿಂದೆ ಅಧ್ಯಕ್ಷರೊಂದಿಗೂ ಈ ಕುರಿತು ಮಾತನಾಡಿದ್ದೇನೆ. ಮಾತುಕತೆಯ ಮೂಲಕ ಒಪ್ಪಂದಕ್ಕೆ ಬರುವ ಸಾಧ್ಯತೆಗಳ ಬಗ್ಗೆ ಅಧ್ಯಕ್ಷರು ಮತ್ತು ನಾನು ಆಶಾವಾದ ಹೊಂದಿದ್ದೇವೆ. ಈ ಪ್ರಯತ್ನ ಮುಂದುವರಿಸುತ್ತೇವೆ ಎಂದು ವ್ಯಾನ್ಸ್ ಹೇಳಿದರು.

ಚುನಾವಣೆ ಬಳಿಕ ಇರಾನ್ ಮೇಲೆ ಮತ್ತೊಂದು ಸುತ್ತಿನ ದಾಳಿಗೆ ನೆತನ್ಯಾಹು ಒತ್ತಡ

ಏತನ್ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಚುನಾವಣೆ ಮುಗಿದ ಬಳಿಕ ಇರಾನ್ ಮೇಲೆ ಮತ್ತೊಂದು ಸುತ್ತಿನ ದಾಳಿ ನಡೆಸುವಂತೆ ಟ್ರಂಪ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರ ನಡೆದ ಚುನಾವಣೆಯಲ್ಲಿ ನೆತನ್ಯಾಹು ಮತ್ತು ಅವರ ಬಲಪಂಥೀಯ ಮಿತ್ರಪಕ್ಷಗಳು ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿವೆ. ಹೀಗಾಗಿ ಇರಾನ್ ವಿರುದ್ಧ ಮತ್ತೆ ಪೂರ್ಣ ಪ್ರಮಾಣದ ಯುದ್ಧ ಆರಂಭವಾದರೆ, ಇಸ್ರೇಲ್‌ನಲ್ಲಿ ತುರ್ತು ಸರ್ಕಾರ ರಚಿಸಲು ನೆತನ್ಯಾಹು ಅವರಿಗೆ ನೆರವಾಗಬಹುದು ಎಂದು ಹೇಳಲಾಗಿದೆ.

ಟ್ರಂಪ್ ಕೂಡ ಇರಾನ್ ವಿರುದ್ಧ ಭಾರೀ ದಾಳಿ ನಡೆಸುವ ಎಚ್ಚರಿಕೆ ನೀಡುವ ಮತ್ತು ಒಪ್ಪಂದಕ್ಕೆ ಮುಂದಾಗುವ ನಿಲುವುಗಳ ನಡುವೆ ಬದಲಾವಣೆ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.

ಕತಾರ್ ಮಧ್ಯಸ್ಥಿಕೆಯಲ್ಲಿ ಕಳೆದ ವಾರ ಇರಾನ್ ಅಧಿಕಾರಿಗಳೊಂದಿಗೆ ಎರಡು ಸುತ್ತಿನ ಮಾತುಕತೆಗಳು ನಡೆದಿದ್ದು, ರಾಜತಾಂತ್ರಿಕ ಪ್ರಯತ್ನಗಳಲ್ಲಿ ಪ್ರಗತಿ ಕಂಡುಬಂದಿದೆ ಎಂದು ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಾಳಿಗಳನ್ನು ನಿಲ್ಲಿಸುವುದಕ್ಕೆ ಪ್ರತಿಯಾಗಿ, ಇರಾನ್ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ತೆರವುಗೊಳಿಸುವ ಪ್ರಸ್ತಾವಿತ ಒಪ್ಪಂದದ ಚೌಕಟ್ಟನ್ನು ರೂಪಿಸಲು ಮಧ್ಯಸ್ಥಿಕೆ ವಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವಾರ ಮತ್ತಷ್ಟು ಮಾತುಕತೆಗಳು ನಡೆಯುವ ನಿರೀಕ್ಷೆಯಿದೆ. ಅಮೆರಿಕದ ಮತ್ತು ಕೆಲವು ಸಂದರ್ಭಗಳಲ್ಲಿ ಇಸ್ರೇಲ್ ಅಧಿಕಾರಿಗಳಿಂದ ಪಡೆದ ಗೌಪ್ಯ ಮಾಹಿತಿಯ ಕುರಿತು ಮಾತನಾಡುತ್ತಿದ್ದ ಕಾರಣ ಅಧಿಕಾರಿಗಳು ತಮ್ಮ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಅಮೆರಿಕದ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವ ನೆತನ್ಯಾಹು, ಇರಾನ್ ಮೇಲೆ ತ್ವರಿತವಾಗಿ ವ್ಯಾಪಕವಾಗಿ ವೈಮಾನಿಕ ದಾಳಿ ನಡೆಸುವಂತೆ ಟ್ರಂಪ್ ಅವರನ್ನು ಒಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಟ್ರಂಪ್ ಈ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾರಾಂತ್ಯದಲ್ಲಿ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನೆತನ್ಯಾಹು, ದಾಳಿ ನಡೆಸುವಂತೆ ಒತ್ತಾಯಿಸಿದ್ದಾರೆ. ಆದರೆ ಟ್ರಂಪ್ ಯಾವುದೇ ಸೇನಾ ಕ್ರಮದ ಭರವಸೆ ನೀಡಿಲ್ಲ ಎಂದು ಈ ಮಾತುಕತೆಯ ಮಾಹಿತಿ ಹೊಂದಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ ಮಧ್ಯಪ್ರಾಚ್ಯದ ಇತರ ಕೆಲವು ಅಮೆರಿಕದ ಮಿತ್ರ ರಾಷ್ಟ್ರಗಳು ಮತ್ತಷ್ಟು ದಾಳಿಗಳನ್ನು ನಡೆಸದಂತೆ ಎಚ್ಚರಿಕೆ ನೀಡಿವೆ.

ಇಂತಹ ದಾಳಿಗಳು ಪ್ರದೇಶದಲ್ಲಿ ಅಸ್ಥಿರತೆ ಹೆಚ್ಚಿಸುವುದಲ್ಲದೆ, ಯೆಮೆನ್‌ನಲ್ಲಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಹಡಗುಗಳ ಮೇಲೆ ದಾಳಿಗಳನ್ನು ಹೆಚ್ಚಿಸಲು ಕಾರಣವಾಗಬಹುದು ಎಂದು ಎಚ್ಚರಿಸಿವೆ.

File photo
ಸೇನೆ ದಾಳಿ ನಡೆಸಿದರೆ ಇರಾನ್, ಹೌತಿಗಳಿಂದ ಪ್ರತೀಕಾರ?: ಅಮೆರಿಕ ಗುಪ್ತಚರ ಮಾಹಿತಿ

ಈ ಕುರಿತು ಇಸ್ರೇಲ್ ಸರ್ಕಾರ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಾರಾಂತ್ಯದ ದೂರವಾಣಿ ಸಂಭಾಷಣೆಯಲ್ಲಿ ನೆತನ್ಯಾಹು ಮತ್ತು ಟ್ರಂಪ್ ಸಂಭಾವ್ಯ ದಾಳಿಗಳ ಕುರಿತು ಚರ್ಚಿಸಿದ್ದಾರೆಯೇ ಎಂಬ ಪ್ರಶ್ನೆಗೂ ಶ್ವೇತಭವನ ನೇರ ಉತ್ತರ ನೀಡಿಲ್ಲ.

ಸೌದಿ ಅರೇಬಿಯಾದ ರಕ್ಷಣಾ ಸಚಿವ ಪ್ರಿನ್ಸ್ ಖಾಲಿದ್ ಬಿನ್ ಸಲ್ಮಾನ್ ಅವರು ಸೋಮವಾರ ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಗಳು ಹಾಗೂ ಹೌತಿಗಳ ನಿರಂತರ ದಾಳಿಗಳ ಕುರಿತು ಚರ್ಚಿಸಿದ್ದಾರೆ.

ಇರಾನ್ ಯುದ್ಧದ ಕುರಿತು ರಾಜತಾಂತ್ರಿಕ ಪ್ರಯತ್ನಗಳು ಪ್ರಗತಿ ಸಾಧಿಸುತ್ತಿರುವ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರ ತೈಲ ಬೆಲೆಗಳು ತೀವ್ರವಾಗಿ ಕುಸಿದವು.

ವಾಷಿಂಗ್ಟನ್‌ನಲ್ಲಿ ಸೋಮವಾರ ಅಮೆರಿಕನ್ನರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಟ್ರಂಪ್, ತೈಲ ಬೆಲೆ ಇಳಿಕೆಯನ್ನು ಪ್ರಸ್ತಾಪಿಸಿದರು. ಇದನ್ನು ಯುದ್ಧ ಎಂದು ಕರೆಯಬೇಕೋ ಬೇಡವೋ ಎಂಬುದೇ ನನಗೆ ಗೊತ್ತಿಲ್ಲ. ಏಕೆಂದರೆ ಹಲವು ತಿಂಗಳುಗಳಿಂದ ನಾವು ಯಾವುದೇ ಹೋರಾಟ ನಡೆಸುತ್ತಿಲ್ಲ ಎಂದು ಹೇಳಿದರು.

ರಾಜತಾಂತ್ರಿಕ ಮಾತುಕತೆಗೂ ಸಿದ್ಧ, ಯುದ್ಧಕ್ಕೂ ಸಿದ್ಧ: ಇರಾನ್

ಯಾವುದೇ ಒಪ್ಪಂದವಾದರೂ ಅದರಲ್ಲಿ ಅಮೆರಿಕ ತನ್ನ ಪಾಲಿನ ಭರವಸೆಗಳನ್ನು ಪಾಲಿಸುತ್ತದೆ ಎಂಬ ಖಾತರಿಯನ್ನು ಇರಾನ್ ಬಯಸುತ್ತಿದೆ. ವಿವಾದಿತ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲೇ ಅಮೆರಿಕ ಮತ್ತು ಇಸ್ರೇಲ್ ಎರಡು ಬಾರಿ ಇರಾನ್ ಮೇಲೆ ದಾಳಿ ನಡೆಸಿವೆ.

ಇರಾನ್ ಅಧಿಕಾರಿಗಳು ಸಾರ್ವಜನಿಕವಾಗಿ ಯುದ್ಧಕ್ಕೂ ಮತ್ತು ರಾಜತಾಂತ್ರಿಕ ಮಾತುಕತೆಗೂ ಸಿದ್ಧವಿರುವುದಾಗಿ ಹೇಳುತ್ತಿದ್ದಾರೆ.

ಇರಾನ್‌ನ ನೂತನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅವರು ದೇಶದ ಸೇನಾ ಮುಖ್ಯಸ್ಥರನ್ನು ಭೇಟಿಯಾಗಿ, ಅಮೆರಿಕ ಅಥವಾ ಇಸ್ರೇಲ್‌ನಿಂದ ಯಾವುದೇ ರೀತಿಯ ಮತ್ತು ಯಾವುದೇ ಮಟ್ಟದ ಬೆದರಿಕೆ ಎದುರಾದರೂ ತಕ್ಷಣವೇ ಪ್ರತಿಕ್ರಿಯಿಸಬೇಕು ಎಂದು ಸೂಚಿಸಿದ್ದಾರೆ.

ಪ್ರತಿದಾಳಿಗೆ ಗುರಿಯಾಗಬಹುದಾದ ಸ್ಥಳಗಳ ಪಟ್ಟಿಯನ್ನು ವಿಸ್ತರಿಸುವಂತೆಯೂ ಅವರು ಕರೆ ನೀಡಿದ್ದಾರೆ. ಈ ಪ್ರತಿಕ್ರಿಯೆಗೆ ಭೌಗೋಳಿಕ ಮಿತಿಗಳಿರಬಾರದು ಎಂದು ಹೇಳಿದ್ದಾರೆ.

ಯುದ್ಧ ಆರಂಭವಾದ ಬಳಿಕ ಇರಾನ್ ಎರಡು ಡಜನ್‌ಗೂ ಹೆಚ್ಚು ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಇದರಿಂದ ಕೋಟ್ಯಂತರ ಡಾಲರ್ ಮೌಲ್ಯದ ಸೇನಾ ಉಪಕರಣಗಳಿಗೆ ಹಾನಿಯಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಇತ್ತೀಚೆಗೆ ನಡೆಸಿದ ವಿಶ್ಲೇಷಣೆ ತಿಳಿಸಿದೆ.

ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಬರೆದಿರುವ ಪತ್ರದ ಕುರಿತು ಇರಾನ್ ಭದ್ರತಾ ಮುಖ್ಯಸ್ಥ ರೆಜಾಯಿ ಸರ್ಕಾರಿ ದೂರದರ್ಶನದೊಂದಿಗೆ ಮಾತನಾಡಿದ್ದಾರೆ.

ಅಮೆರಿಕದ ಧೋರಣೆಯಲ್ಲಿ ಸಂಪೂರ್ಣ ಬದಲಾವಣೆಯಾಗಿದೆ. ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ, ಪತ್ರದ ವಿವರಗಳನ್ನು ಬಹಿರಂಗಪಡಿಸಿಲ್ಲ ಹಾಗೂ ಅದಕ್ಕೆ ತಾವು ಇನ್ನೂ ಉತ್ತರ ನೀಡಿಲ್ಲ ಎಂದು ತಿಳಿಸಿದ್ದಾರೆ.

ಅಮೆರಿಕ-ಇರಾನ್ ಸಂಘರ್ಷದ ನಡುವೆ ಸಿಲುಕಿದ ಅರಬ್ ರಾಷ್ಟ್ರಗಳು

ಮಾರ್ಚ್ ಬಳಿಕ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ದಾಳಿಗಳು ನಡೆದಿವೆ. ಅಮೆರಿಕ ತನ್ನ ದಿಗ್ಬಂಧನ ತೆರವುಗೊಳಿಸುವಂತೆ ಒತ್ತಡ ಹೇರಲು ಇರಾನ್ ಆರ್ಥಿಕ ಒತ್ತಡದ ತಂತ್ರವನ್ನು ತೀವ್ರಗೊಳಿಸಿದೆ.

ಬಹ್ರೇನ್‌ನಲ್ಲಿ ಅಂತಾರಾಷ್ಟ್ರೀಯ ಕಾರ್ಯತಂತ್ರ ಅಧ್ಯಯನ ಸಂಸ್ಥೆ ಆಯೋಜಿಸಿದ್ದ ವಾರ್ಷಿಕ ಭದ್ರತಾ ಶೃಂಗಸಭೆ 'ಮನಾಮಾ ಡೈಲಾಗ್‌'ನಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿತ್ತು.

ಅಮೆರಿಕ ಮತ್ತು ಇರಾನ್ ನಡುವಿನ ನಿಲುವುಗಳಲ್ಲಿ ಭಾರೀ ಅಂತರವಿದೆ. ಈ ಅಂತರವನ್ನು ಕಡಿಮೆ ಮಾಡದಿದ್ದರೆ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಯುಎಇ ಅಧ್ಯಕ್ಷರ ಸಲಹೆಗಾರ ಅನ್ವರ್ ಗರ್ಗಾಶ್ ಸಭೆಯಲ್ಲಿ ಎಚ್ಚರಿಸಿದರು.

ಯುದ್ಧ ಆರಂಭವಾದಾಗಿನಿಂದ ಗಲ್ಫ್ ರಾಷ್ಟ್ರಗಳು ತಮ್ಮ ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೋಟ್ಯಂತರ ಡಾಲರ್ ವೆಚ್ಚ ಮಾಡಿವೆ. ಬಹ್ರೇನ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಈಜಿಪ್ಟ್ ವಿದೇಶಾಂಗ ಸಚಿವ ಬದ್ರ್ ಅಬ್ದೆಲಟ್ಟಿ, ಮುಂದಿನ ಹಂತದ ಸಂಘರ್ಷ ಮತ್ತಷ್ಟು ಅಪಾಯಕಾರಿ ಮತ್ತು ವಿನಾಶಕಾರಿಯಾಗಲಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ನವೆಂಬರ್ ತಿಂಗಳ ಮೊದಲಾರ್ಧದಲ್ಲಿ ಇರಾನ್, ಒಮಾನ್ ಮತ್ತು ಸೌದಿ ಅರೇಬಿಯಾಗಳಿಗೆ ಚೀನಾ ವಿಶೇಷ ರಾಯಭಾರಿಯನ್ನು ಕಳುಹಿಸಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X