'ನಾನೇನ್ ಬುರ್ಖಾ ಧರಿಸಲ್ಲ, ಆದ್ರೆ.. ಧರಿಸಬೇಡ ಎಂದರೆ ಮೂರ್-ಮೂರು ಧರಿಸುತ್ತೇನೆ': ಹಿಜಾಬ್ ಕುರಿತು ನಟಿ ಶಬಾನಾ ಅಜ್ಮಿ ಖಡಕ್ ಮಾತು!

ಮುಂಬೈ: ಬುರ್ಖಾ, ಹಿಜಾಬ್ ಮತ್ತು ಕಡ್ಡಾಯ ಧಾರ್ಮಿಕ ಧಿರಿಸಿನ ಕುರಿತು ಬಾಲಿವುಡ್ ನಟಿ ಶಬಾನಾ ಅಜ್ಮಿ ಖಡಕ್ ಹೇಳಿಕೆ ನೀಡಿದ್ದು, 'ಬುರ್ಖಾ ಧರಿಸಬೇಡ ಎಂದರೆ ಮೂರ್-ಮೂರು ಧರಿಸುತ್ತೇನೆ' ಆದರೆ ಕುರಾನ್ ಕಡ್ಡಾಯ ಮಾಡಿಲ್ಲ ಎಂದು ಹೇಳಿದ್ದಾರೆ.
ಉಷಾ ಕಾಕಡೆ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಶಬಾನಾ ಅಜ್ಮಿ, ಕುರಾನ್ನಲ್ಲಿ ಮಹಿಳೆಯರು ನಿರ್ದಿಷ್ಟ ಮಾದರಿಯ ಬುರ್ಖಾ ಧರಿಸಬೇಕು ಎಂದು ಎಲ್ಲಿಯೂ ಹೇಳಿಲ್ಲ. ಬದಲಿಗೆ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಭ್ಯತೆ ಹಾಗೂ ಸಂಯಮವನ್ನು ಪಾಲಿಸಬೇಕು ಎಂಬ ಸಂದೇಶವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರು ಏನು ಧರಿಸಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಅವರಿಗಿರಬೇಕು. ಬುರ್ಖಾ ಧರಿಸಬಾರದು ಎಂದು ಯಾರಾದರೂ ನಿರ್ಬಂಧಿಸಿದರೆ, ನಾನು ಮೂರು ಬುರ್ಖಾ ಧರಿಸುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಧಾರ್ಮಿಕ ವಿಚಾರಗಳ ಬಗ್ಗೆ ಮಧ್ಯವರ್ತಿಗಳು ನೀಡುವ ವ್ಯಾಖ್ಯಾನಗಳಿಂದ ಗೊಂದಲ ಸೃಷ್ಟಿಯಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಕುರಾನ್ ಕಡ್ಡಾಯ ಮಾಡಿಲ್ಲ
"ನನ್ನ ಪ್ರಕಾರ ಕುರಾನ್ನಲ್ಲಿ ಈ ರೀತಿಯ ಬುರ್ಖಾವನ್ನೇ ಧರಿಸಬೇಕು ಎಂದು ಎಲ್ಲಿಯೂ ಹೇಳಿಲ್ಲ. ನಮ್ಮ ದೃಷ್ಟಿಯಲ್ಲಿ ಸಭ್ಯತೆ ಇರಬೇಕು ಎಂದು ಹೇಳಲಾಗಿದೆ. ಈ ನಿಯಮ ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಅನ್ವಯಿಸುತ್ತದೆ. ಆದರೆ ಮಧ್ಯದಲ್ಲಿ ಬರುವ ಕೆಲವರು ಧರ್ಮದ ವಿಚಾರಗಳನ್ನು ತಮಗೆ ಬೇಕಾದಂತೆ ಬಿಂಬಿಸುವುದರಿಂದ ಗೊಂದಲ ಸೃಷ್ಟಿಯಾಗುತ್ತದೆ" ಎಂದು ಶಬಾನಾ ಅಜ್ಮಿ ಹೇಳಿದ್ದಾರೆ.
ನಾನೇನ್ ಬುರ್ಖಾ ಧರಿಸಲ್ಲ.. ಆದ್ರೆ..
ತಾವು ವೈಯಕ್ತಿಕವಾಗಿ ಬುರ್ಖಾ ಧರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮಹಿಳೆಯರು ಬುರ್ಖಾ ಧರಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬಿಟ್ಟದ್ದು ಎಂದಿದ್ದಾರೆ.
"ನಾನು ಬುರ್ಖಾ ಧರಿಸುವುದಿಲ್ಲ. ಆದರೆ ಬುರ್ಖಾ ಧರಿಸುವ ಹಕ್ಕು ನಿನಗಿಲ್ಲ ಎಂದು ಯಾರಾದರೂ ನನಗೆ ಹೇಳಿದರೆ, ನಾನು ಮೂರು ಬುರ್ಖಾ ಧರಿಸುತ್ತೇನೆ. ನನ್ನ ಉಡುಪಿನ ಬಗ್ಗೆ ನಿರ್ಧರಿಸಲು ನೀವ್ಯಾರು? ಇದು ಎರಡೂ ಕಡೆಯಿಂದಲೂ ಅನ್ವಯಿಸುವ ವಿಚಾರ. ಜಾತ್ಯತೀತತೆಯ ಹೆಸರಿನಲ್ಲಿ ಮೂಲಭೂತವಾದವನ್ನು ಬೆಳೆಸಲು ಸಾಧ್ಯವಿಲ್ಲ" ಎಂದು ಖಡಕ್ ಆಗಿ ಹೇಳಿದ್ದಾರೆ.
ರಾಜಕೀಯಕ್ಕೆ ಬರುವ ನಟರ ಬಗ್ಗೆಯೂ ಶಬಾನಾ ಮಾತು
ಇದೇ ಸಂವಾದದಲ್ಲಿ ಬಾಲಿವುಡ್ ನಟರು ರಾಜಕೀಯಕ್ಕೆ ಪ್ರವೇಶಿಸುವ ವಿಚಾರವಾಗಿಯೂ ಶಬಾನಾ ಆಜ್ಮಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಟರು ರಾಜಕೀಯಕ್ಕೆ ಬರಬೇಕೇ ಬೇಡವೇ ಎಂಬುದು ಅವರ ವೈಯಕ್ತಿಕ ಆಯ್ಕೆ. ಆದರೆ ಜನರಿಂದ ಜವಾಬ್ದಾರಿಯುತ ಸ್ಥಾನ ಪಡೆದ ಬಳಿಕ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಕೇವಲ ಹುದ್ದೆ ಅಥವಾ ಗೌರವದ ಸಂಕೇತವಾಗಿ ರಾಜಕೀಯ ಸ್ಥಾನವನ್ನು ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ.
"ರಾಜಕೀಯಕ್ಕೆ ಬರುವುದು ಅವರ ವೈಯಕ್ತಿಕ ಆಯ್ಕೆ. ನಿಜವಾಗಿಯೂ ಜನರಿಗಾಗಿ ಕೆಲಸ ಮಾಡುವ ಉದ್ದೇಶವಿದ್ದರೆ ಸ್ವಾಗತ. ಆದರೆ ಒಂದು ಪದವಿ ಅಥವಾ ಪದಕ ಸಿಕ್ಕಿತು ಎಂಬಂತೆ ಸ್ಥಾನವನ್ನು ಅಲಂಕರಿಸಿಕೊಂಡು, ಯಾವುದೇ ಕೆಲಸ ಮಾಡದೆ, ಜನರ ಪರವಾಗಿ ಧ್ವನಿ ಎತ್ತದೆ ಇದ್ದರೆ ಅಂತಹ ಸ್ಥಾನವನ್ನು ವ್ಯರ್ಥ ಮಾಡಬಾರದು" ಎಂದು ಹೇಳಿದ್ದಾರೆ.
ಜನರು ಪ್ರೀತಿ ಮತ್ತು ವಿಶ್ವಾಸದಿಂದ ಒಂದು ಜವಾಬ್ದಾರಿಯನ್ನು ವಹಿಸಿದಾಗ ಅದನ್ನು ಗೌರವಿಸಬೇಕು. ಸಮಾಜದಲ್ಲಿ ಜನಪ್ರಿಯತೆ ಮತ್ತು ಪ್ರಭಾವ ಹೊಂದಿರುವವರು ತಮ್ಮ ಮಾತುಗಳನ್ನು ಸಮಾಜದ ಸುಧಾರಣೆಗಾಗಿ ಬಳಸಿಕೊಳ್ಳಬೇಕು. ಇದರಿಂದ ಜನರಿಗೆ ಅನುಕೂಲವಾಗುತ್ತದೆ ಎಂದು ಶಬಾನಾ ಅಜ್ಮಿ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



