

ಚೆನ್ನೈ: ತೆಲುಗು ಚಿತ್ರರಂಗದಲ್ಲಿ ನಟಿಯರನ್ನು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬ ಬಾಲಿವುಡ್ ನಟಿಯರಾದ ಜಾನ್ವಿ ಕಪೂರ್ ಮತ್ತು ರಾಧಿಕಾ ಆಪ್ಟೆ ಅವರ ಹೇಳಿಕೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ಇತ್ತ ಇಬ್ಬರೂ ನಟಿಯರಿಗೆ ನಟಿ ರೆಜಿನಾ ಕ್ಯಾಸ್ಸಂಡ್ರಾ ಖಡಕ್ ತಿರುಗೇಟು ನೀಡಿದ್ದಾರೆ.
ಇಂಡಿಯಾ ಟುಡೇ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ರೆಜಿನಾ, 'ಬಾಲಿವುಡ್ ನಟಿಯರು ತಮ್ಮ ಅನುಭವಗಳನ್ನು ಬಹಿರಂಗವಾಗಿ ಹೇಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ಸಮಸ್ಯೆಯನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವಿನ ಸಂಘರ್ಷದಂತೆ ಬಿಂಬಿಸಬಾರದು' ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಕೇಸರಿ ಚಾಪ್ಟರ್ 2 ಚಿತ್ರದಲ್ಲಿ ತಮಗಾದ ಕೆಟ್ಟ ಅನುಭವವನ್ನೂ ರೆಜಿನಾ ಹಂಚಿಕೊಂಡಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್ ಪತ್ನಿಯ ಪಾತ್ರ ನಿರ್ವಹಿಸಿದ್ದರೂ, ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತಮ್ಮನ್ನು ಕಡೆಗಣಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಅಸಮಾಧಾನವಿದ್ದರೆ ಸಿನಿಮಾ ಬಿಟ್ಟುಬಿಡಿ: ರೆಜಿನಾ
ಯಾವುದೇ ದೃಶ್ಯ ಅಥವಾ ಪಾತ್ರದ ಬಗ್ಗೆ ನಟರಿಗೆ ಅಸಮಾಧಾನವಿದ್ದರೆ ಅದನ್ನು ಸ್ಪಷ್ಟವಾಗಿ ಹೇಳುವ ಧೈರ್ಯ ಇರಬೇಕು. ಇಷ್ಟವಿಲ್ಲದಿದ್ದರೆ ಆ ಚಿತ್ರದಿಂದ ಹೊರಬರುವ ಆಯ್ಕೆಯೂ ಕಲಾವಿದರಿಗಿದೆ ಎಂದು ರೆಜಿನಾ ಹೇಳಿದ್ದಾರೆ.
“ಒಬ್ಬ ನಟರಿಗೆ ಕೈಯಲ್ಲೇ ಅಂತಿಮ ನಿರ್ಧಾರ ಇರುತ್ತದೆ. ನಿಮಗೆ ಯಾವುದಾದರೂ ದೃಶ್ಯ ಅಥವಾ ಪಾತ್ರದ ಬಗ್ಗೆ ಅಸಮಾಧಾನವಿದ್ದರೆ ಚಿತ್ರದಿಂದ ಹೊರಬನ್ನಿ. ನಮಗೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಹೇಳುವ ಪರಿಸ್ಥಿತಿಗೆ ನಾವೇ ನಮ್ಮನ್ನು ತಳ್ಳಿಕೊಳ್ಳಬಾರದು.
ಇದು ಪುರುಷರು ಅಥವಾ ಮಹಿಳೆಯರ ವಿಷಯವಲ್ಲ. ನಾನು ಯಾರ ಪರವೂ ವಹಿಸದೆ ಮೂರನೇ ವ್ಯಕ್ತಿಯಾಗಿ ಮಾತನಾಡುತ್ತಿದ್ದೇನೆ. ಮಹಿಳೆಯಾಗಿ ನಾನು ಯಾವಾಗಲೂ ಮಹಿಳೆಯರನ್ನು ಬೆಂಬಲಿಸುತ್ತೇನೆ. ಆದರೆ ಜಾನ್ವಿ ಅಥವಾ ರಾಧಿಕಾ ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಅವಕಾಶವೇ ಇರಲಿಲ್ಲ ಎಂದು ನನಗನಿಸುವುದಿಲ್ಲ. ಅವರು ಚಿತ್ರದಿಂದ ಹೊರಬರಬಹುದಿತ್ತು” ಎಂದು ಹೇಳಿದ್ದಾರೆ.
ಜಾನ್ವಿ ಹೇಳಿಕೆಗೆ ರೆಜಿನಾ ಪ್ರತಿಕ್ರಿಯೆ
ಈ ಹಿಂದೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಾನ್ವಿ ಕಪೂರ್, ಪೆದ್ದಿ ಚಿತ್ರದ ಕೆಲವು ದೃಶ್ಯಗಳನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ಎಂಬ ಬಗ್ಗೆ ತಮಗೆ ಮೊದಲೇ ಸ್ಪಷ್ಟ ಮಾಹಿತಿ ಇರಲಿಲ್ಲ. ಪ್ರತಿಯೊಂದು ದೃಶ್ಯದ ವಿವರಗಳಿರುವ ಪೂರ್ಣ ಸ್ಕ್ರಿಪ್ಟ್ (ಬೌಂಡ್ ಸ್ಕ್ರಿಪ್ಟ್) ತಮಗೆ ಸಿಕ್ಕಿರಲಿಲ್ಲ ಎಂಬ ವಿಚಾರವನ್ನೂ ಪ್ರಸ್ತಾಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರೆಜಿನಾ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಕೆಲವೊಮ್ಮೆ ಚಿತ್ರೀಕರಣದ ದಿನವೇ ಬೆಳಗ್ಗೆ ದೃಶ್ಯಗಳನ್ನು ನೀಡಲಾಗುತ್ತದೆ. ಆದರೆ ಸಾಮಾನ್ಯವಾಗಿ ಚಿತ್ರದ ಕಥೆ, ಪಾತ್ರ ಮತ್ತು ಸಿನಿಮಾದ ಸ್ವರೂಪದ ಬಗ್ಗೆ ಕಲಾವಿದರಿಗೆ ಮೊದಲೇ ತಿಳಿದಿರುತ್ತದೆ ಎಂದಿದ್ದಾರೆ.
“ಕೆಲವು ಸಿನಿಮಾಗಳಲ್ಲಿ ಚಿತ್ರೀಕರಣದ ದಿನ ಬೆಳಗ್ಗೆ 6 ಗಂಟೆಗೆ ದೃಶ್ಯಗಳನ್ನು ನೀಡುತ್ತಾರೆ. ಆದರೆ ಸಾಮಾನ್ಯವಾಗಿ ನೀವು ಯಾವ ಕಥೆ, ಯಾವ ಪಾತ್ರ ಮತ್ತು ಯಾವ ರೀತಿಯ ಸಿನಿಮಾದಲ್ಲಿ ನಟಿಸುತ್ತಿದ್ದೀರಿ ಎಂಬುದು ತಿಳಿದಿರುತ್ತದೆ. ಕೆಲವು ಸಿನಿಮಾಗಳಲ್ಲಿ ಸಂಪೂರ್ಣ ಸ್ಕ್ರಿಪ್ಟ್ ಅನ್ನು ಪುಸ್ತಕದ ರೂಪದಲ್ಲಿಯೇ ನೀಡುತ್ತಾರೆ” ಎಂದು ವಿವರಿಸಿದ್ದಾರೆ.
ಮುಂಬೈನಲ್ಲಿ ಚಿತ್ರೀಕರಣದ ವ್ಯವಸ್ಥೆ ಹೆಚ್ಚು ಕ್ರಮಬದ್ಧವಾಗಿರುತ್ತದೆ ಎಂದಿರುವ ಅವರು, ಕಲಾವಿದರಿಗೆ ನೀಡುವ ಕಾಲ್‌ಶೀಟ್‌ನಲ್ಲಿ ಚಿತ್ರೀಕರಣದ ಸಮಯ, ದೃಶ್ಯಗಳ ಸಂಖ್ಯೆ, ತಂತ್ರಜ್ಞರ ವಿವರ, ಕಲಾವಿದರ ಮಾಹಿತಿ ಸೇರಿದಂತೆ ಎಲ್ಲ ವಿವರಗಳೂ ಇರುತ್ತವೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಎಲ್ಲ ಕಡೆ ಇಂತಹ ವ್ಯವಸ್ಥೆ ಇರುವುದಿಲ್ಲ ಎಂದಿದ್ದಾರೆ.
ಉತ್ತರ-ದಕ್ಷಿಣ ವಿವಾದ ಸೃಷ್ಟಿಸಬೇಡಿ ಎಂದ ನಟಿ
ಜಾನ್ವಿ ಅವರ ಸಂಪೂರ್ಣ ಸಂದರ್ಶನವನ್ನು ತಾವು ನೋಡಿಲ್ಲ. ಆದರೆ ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳನ್ನು ಗಮನಿಸಿದ್ದೇನೆ ಎಂದು ರೆಜಿನಾ ಹೇಳಿದ್ದಾರೆ. “ನಟಿಯರು ತಮ್ಮ ಅನುಭವಗಳ ಬಗ್ಗೆ ಮಾತನಾಡುತ್ತಿರುವುದಕ್ಕೆ ನನಗೆ ಸಂತೋಷವಿದೆ. ಆದರೆ ಉತ್ತರ ಭಾರತದ ನಟಿಯೊಬ್ಬರು ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಈ ರೀತಿಯ ಹೇಳಿಕೆಗಳಿಂದ ಅರಿವಿಲ್ಲದೆಯೇ ಉತ್ತರ-ದಕ್ಷಿಣ ವಿಭಜನೆ ಸೃಷ್ಟಿಯಾಗಬಹುದು. ಈಗಾಗಲೇ ಚಿತ್ರರಂಗದಲ್ಲಿ ಇಂತಹ ವಿಭಜನೆಯ ಚರ್ಚೆ ಇದೆ. ಹಿಂದಿ ಚಿತ್ರರಂಗದಲ್ಲೂ ಕೆಲಸ ಮಾಡುತ್ತಿರುವ ದಕ್ಷಿಣ ಭಾರತದ ನಟಿಯಾಗಿ ನಾನು ಇದನ್ನು ಹೇಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಕೇಸರಿ ಚಾಪ್ಟರ್ 2 ಪ್ರಚಾರದಲ್ಲಿ ನನ್ನನ್ನು ಕಡೆಗಣಿಸಿದ್ದರು
ಈ ಚರ್ಚೆಯ ನಡುವೆ ತಮ್ಮ ಅನುಭವವನ್ನೂ ಪ್ರಸ್ತಾಪಿಸಿರುವ ರೆಜಿನಾ, 'ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಕೇಸರಿ ಚಾಪ್ಟರ್ 2 ಚಿತ್ರದಲ್ಲಿ ಅಕ್ಷಯ್ ಕುಮಾರ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದರೂ, ಚಿತ್ರದ ಪ್ರಚಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.
“ಜಾನ್ವಿ ಕಪೂರ್ ತಮ್ಮನ್ನು ವಸ್ತುವಿನಂತೆ ಬಿಂಬಿಸಲಾಯಿತು, ತಮ್ಮ ಮಾತಿಗೆ ಬೆಲೆ ಇರಲಿಲ್ಲ ಎಂದು ಹೇಳಿದ್ದಾರೆ. ಆದರೆ ಇದೇ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನನ್ನೊಂದಿಗೆ ಕೇಸರಿ ಚಾಪ್ಟರ್ 2 ಸಿನಿಮಾ ಮಾಡಿತು. ಅದರಲ್ಲಿ ನಾನು ಅಕ್ಷಯ್ ಕುಮಾರ್ ಪತ್ನಿಯ ಪಾತ್ರ ನಿರ್ವಹಿಸಿದ್ದೆ. ಆದರೆ ಚಿತ್ರದ ಪ್ರಚಾರದಲ್ಲಿ ನನ್ನನ್ನು ಸೇರಿಸಿಕೊಳ್ಳಲಿಲ್ಲ.
ಇದನ್ನು ನಾನೇನು ಎಂದು ಕರೆಯಬೇಕು? ನಾನು ದಕ್ಷಿಣ ಭಾರತದವಳಾಗಿರುವ ಕಾರಣಕ್ಕೆ ಹೀಗೆ ಮಾಡಲಾಯಿತೇ? ಇಂದಿಗೂ ನನ್ನ ಹೆಸರನ್ನು ಏಕೆ ಸೇರಿಸಲಿಲ್ಲ ಎಂಬುದು ಗೊತ್ತಿಲ್ಲ. ಅಂತೆಯೇ ಚಿತ್ರದಲ್ಲಿ ತಾನು ಮಾತ್ರ ಕಾಣಿಸಿಕೊಂಡಿರುವ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಆ ಹಾಡಿನ ಬಗ್ಗೆ ತನಗೆ ಮಾಹಿತಿ ನೀಡಲಿಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ತಮ್ಮನ್ನು ಟ್ಯಾಗ್ ಮಾಡಲಿಲ್ಲ ಎಂದು ರೆಜಿನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ನಿಮ್ಮ ಮೇಲೆ ಅತ್ಯಾಚಾರವಾಗುತ್ತಿಲ್ಲ'
ಚಿತ್ರರಂಗದಲ್ಲಿ ಹಿರಿಯ ನಟರೊಂದಿಗೆ ನಟಿಸುವಾಗ ಕೆಲವು ನಟಿಯರಿಗೆ ಅಸಮಾಧಾನ ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ತಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿ ಚಿತ್ರದಿಂದ ಹೊರಬರಬಹುದು ಎಂದು ರೆಜಿನಾ ಹೇಳಿದ್ದಾರೆ.
ನಂದಮೂರಿ ಬಾಲಕೃಷ್ಣ ಅವರ ಸಿನಿಮಾಗಳನ್ನು ಉದಾಹರಣೆಯಾಗಿ ಪ್ರಸ್ತಾಪಿಸಿದ ಅವರು, “ನಿಮಗೆ ಯಾವುದಾದರೂ ಸಿನಿಮಾ ಅಥವಾ ಪಾತ್ರ ಇಷ್ಟವಾಗದಿದ್ದರೆ, ಅದರಲ್ಲಿ ನಟಿಸಲು ಇಷ್ಟವಿಲ್ಲ ಎಂದು ಹೇಳಿ ಹೊರಬರಬಹುದು. ಚಿತ್ರದ ಚಿತ್ರೀಕರಣದಿಂದ ಹೊರನಡೆದಿದ್ದೀರಿ ಎಂಬ ಸುದ್ದಿ ಬರಲಿ. ನಂತರ ಕುಳಿತು ಅದರ ಬಗ್ಗೆ ಮಾತನಾಡುವುದಕ್ಕಿಂತ ಅದೇ ಉತ್ತಮ.
ನಿಮ್ಮನ್ನು ಒತ್ತಡದ ಪರಿಸ್ಥಿತಿಗೆ ತಳ್ಳಿರಬಹುದು ಎಂಬುದನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಆದರೆ ನಿಮ್ಮ ಮೇಲೆ ಅತ್ಯಾಚಾರ ನಡೆಯುತ್ತಿಲ್ಲ. ನೀವು ಸಂಪೂರ್ಣವಾಗಿ ಅಸಹಾಯಕರಾಗಿರುವ ಪರಿಸ್ಥಿತಿಯಲ್ಲಿಲ್ಲ. ಇಂತಹ ಸಮಸ್ಯೆಗಳನ್ನು ಎದುರಿಸಲು ಇಂದು ಕಾನೂನು ಮಾರ್ಗಗಳಿವೆ. ನಿಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಆದರೆ ಉತ್ತರ-ದಕ್ಷಿಣ ವಿಭಜನೆಯನ್ನು ಸೃಷ್ಟಿಸಬೇಡಿ. ಇದು ಚಿತ್ರರಂಗಕ್ಕೆ ಒಳ್ಳೆಯದಲ್ಲ” ಎಂದು ಹೇಳಿದ್ದಾರೆ.
ಜಾನ್ವಿ, ರಾಧಿಕಾ ಹೇಳಿದ್ದೇನು? ವಿವಾದವೇಕೆ?
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಟ ವರುಣ್ ಧವನ್ ಜೊತೆ ಭಾಗವಹಿಸಿದ್ದ ಜಾನ್ವಿ ಕಪೂರ್, ಪೆದ್ದಿ ಚಿತ್ರದ ವಿವಾದದ ಬಗ್ಗೆ ಮಾತನಾಡಿದ್ದರು. ಚಿತ್ರದ ಕೆಲವು ದೃಶ್ಯಗಳಲ್ಲಿ ತಮ್ಮನ್ನು ವಸ್ತುವಿನಂತೆ ಬಿಂಬಿಸಲಾಗಿದೆ ಎಂಬ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, ಈ ವಿಚಾರದಲ್ಲಿ ತಾವು ಇನ್ನಷ್ಟು ಎಚ್ಚರಿಕೆ ವಹಿಸಬೇಕಿತ್ತು ಮತ್ತು ತಮ್ಮ ಆಕ್ಷೇಪವನ್ನು ಗಟ್ಟಿಯಾಗಿ ವ್ಯಕ್ತಪಡಿಸಬೇಕಿತ್ತು ಎಂದು ಒಪ್ಪಿಕೊಂಡಿದ್ದರು.
“ನಾನು ಇನ್ನಷ್ಟು ಮಾಡಬಹುದಿತ್ತೇ? ಹೆಚ್ಚು ಎಚ್ಚರಿಕೆ ವಹಿಸಬಹುದಿತ್ತೇ? ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಬಹುದಿತ್ತೇ? ಖಂಡಿತವಾಗಿಯೂ ಹೌದು. ಆ ದೃಶ್ಯಗಳು ಸಮಸ್ಯಾತ್ಮಕವಾಗಿದ್ದವೇ? ಅತಿಯಾದ ವಸ್ತುವೀಕರಣ ನಡೆದಿತ್ತೇ? ಹೌದು” ಎಂದು ಜಾನ್ವಿ ಹೇಳಿದ್ದರು.
ಇನ್ನು ನಟಿ ರಾಧಿಕಾ ಆಪ್ಟೆ ಕೂಡ ತೆಲುಗು ಸಿನಿಮಾದಲ್ಲಿ ಕೆಲಸ ಮಾಡಿದ ತಮ್ಮ ಅನುಭವವನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. ತಾವು ನಟಿಸಿದ್ದ ಚಿತ್ರದಲ್ಲಿ ತಾಯಿಯ ಸಹೋದರನನ್ನೇ ಮದುವೆಯಾಗುವ ಮಹಿಳೆಯ ಪಾತ್ರ ನಿರ್ವಹಿಸಬೇಕಾಗಿತ್ತು. ತಮ್ಮ ಎದುರು ತನಗಿಂತ ಸಾಕಷ್ಟು ಹಿರಿಯ ನಟರಿದ್ದರು. ಆ ಪಾತ್ರದ ಹಿನ್ನೆಲೆಯಲ್ಲಿದ್ದ ಪುರುಷ ಪ್ರಧಾನ ಮನಸ್ಥಿತಿಯ ಬಗ್ಗೆ ರಾಧಿಕಾ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಕ್ಕ ಚಿತ್ರದ ಪ್ರಚಾರದ ವೇಳೆ ಕೀರ್ತಿ ಸುರೇಶ್ ಜೊತೆ ಮಾತನಾಡಿದ ರಾಧಿಕಾ, ಈ ಅನುಭವ ಸವಾಲಿನಿಂದ ಕೂಡಿತ್ತು ಎಂದು ಹೇಳಿದ್ದರು. ಅವರು ಚಿತ್ರದ ಹೆಸರನ್ನು ಬಹಿರಂಗಪಡಿಸದಿದ್ದರೂ, 2014ರಲ್ಲಿ ಬಿಡುಗಡೆಯಾದ ಬೋಯಪಾಟಿ ಶ್ರೀನು ನಿರ್ದೇಶನದ, ನಂದಮೂರಿ ಬಾಲಕೃಷ್ಣ ನಟನೆಯ ಲೆಜೆಂಡ್ ಸಿನಿಮಾದ ಬಗ್ಗೆ ಮಾತನಾಡಿರಬಹುದು ಎಂದು ಊಹಿಸಲಾಗುತ್ತಿದೆ.