'ಶತಕ ಪೂರೈಸಲು ಸಿಕ್ಸರ್ ಬಾರಿಸುತ್ತೇನೆ,' 'ಮೈದಾನದಲ್ಲಿದ್ದರೆ ಸಾಕು, ಖುಷಿಯಾಗಿರುತ್ತೇನೆ'; ಮೆಕಲಮ್ ದಾಖಲೆ ಮುರಿದ Rishabh Pant ಹೇಳಿದ್ದೇನು?

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಂತ್ 153 ಎಸೆತಗಳಲ್ಲಿ 128 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್‌ಗಳು ಸೇರಿದ್ದವು.
Rishabh Pants Honest Confession After Ton
ರಿಷಬ್ ಪಂತ್
Updated on: 

ವೆಲ್ಲಿಂಗ್ಟನ್: ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕವೇ ಗುರುತಿಸಿಕೊಂಡಿರುವ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅಮೋಘ ಶತಕ ಸಿಡಿಸಿದ್ದಾರೆ.

ತಮ್ಮ ಒಂಬತ್ತನೇ ಟೆಸ್ಟ್ ಶತಕ ದಾಖಲಿಸಿದ ಬಳಿಕ ಮಾತನಾಡಿರುವ ಪಂತ್, ಶತಕ ಪೂರೈಸಲು ಸಿಕ್ಸರ್ ಬಾರಿಸುವುದು ತಮ್ಮ ನೆಚ್ಚಿನ ವಿಧಾನ ಎಂದು ಹೇಳಿಕೊಂಡಿದ್ದಾರೆ.

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಂತ್ 153 ಎಸೆತಗಳಲ್ಲಿ 128 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್‌ಗಳು ಸೇರಿದ್ದವು.

ಪಂತ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 720 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

Rishabh Pants Honest Confession After Ton
96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!

ಸಿಕ್ಸರ್ ಬಾರಿಸಿ ಶತಕ ಪೂರೈಸಿದ ಪಂತ್

ತಮ್ಮ ಬ್ಯಾಟಿಂಗ್ ಶೈಲಿಯ ಬಗ್ಗೆ ಮಾತನಾಡಿದ ಪಂತ್, "ನಾನು ಸಾಮಾನ್ಯವಾಗಿ ಬೌಲರ್ ಮನಸ್ಸಿನಲ್ಲಿ ಏನಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ ನನ್ನ ಆಟವನ್ನು ಸರಳವಾಗಿಟ್ಟುಕೊಳ್ಳುತ್ತೇನೆ. ಚೆಂಡು ಹೊಡೆಯುವ ವ್ಯಾಪ್ತಿಯಲ್ಲಿ ಸಿಕ್ಕರೆ ಅದನ್ನು ಸಿಕ್ಸರ್ ಅಥವಾ ಬೌಂಡರಿಗೆ ಅಟ್ಟಲು ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದಾರೆ.

ಪಂತ್ 99 ರನ್ ಗಳಿಸಿದ್ದಾಗ ಗ್ಲೆನ್ ಫಿಲಿಪ್ಸ್ ಎಸೆತವನ್ನು ಎದುರಿಸಿದರು. ಈ ವೇಳೆ ಕ್ರೀಸ್‌ನಿಂದ ಮುಂದೆ ಬಂದು ಚೆಂಡನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಶತಕ ಪೂರೈಸಿದರು. ಆದರೆ, ಶತಕವನ್ನು ಸಿಕ್ಸರ್ ಮೂಲಕವೇ ಪೂರ್ಣಗೊಳಿಸುವ ಪ್ರಯತ್ನದಲ್ಲಿ ಈ ಹಿಂದೆ ಹಲವು ಬಾರಿ ಶತಕ ಕೈತಪ್ಪಿದೆ ಎಂದೂ ಅವರು ಒಪ್ಪಿಕೊಂಡಿದ್ದಾರೆ.

"ಸಾಮಾನ್ಯವಾಗಿ ಶತಕದ ಗಡಿಯಲ್ಲಿದ್ದಾಗ ಸಿಕ್ಸರ್ ಬಾರಿಸಿ ನೂರು ರನ್ ಪೂರೈಸಲು ಪ್ರಯತ್ನಿಸುತ್ತೇನೆ. ಆದರೆ ಈ ಕಾರಣದಿಂದ ಹಲವು ಶತಕಗಳನ್ನು ಕಳೆದುಕೊಂಡಿದ್ದೇನೆ. ಈ ಬಾರಿ ತಾಳ್ಮೆಯಿಂದ ಆಡುತ್ತಿದ್ದೆ. ಮಿಡ್‌ಆಫ್ ಫೀಲ್ಡರ್ ಮುಂದೆ ಬಂದಾಗ ಸಿಕ್ಸರ್ ಬಾರಿಸಲು ಇದು ಸರಿಯಾದ ಅವಕಾಶ ಎಂದು ನಿರ್ಧರಿಸಿದೆ" ಎಂದು ಪಂತ್ ವಿವರಿಸಿದ್ದಾರೆ.

ನಾಲ್ಕೂ SENA ದೇಶಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್

ನ್ಯೂಜಿಲೆಂಡ್‌ನಲ್ಲಿ ಶತಕ ಗಳಿಸುವುದು ತಮ್ಮ ಬಹುದಿನದ ಆಸೆಯಾಗಿತ್ತು ಎಂದು ಪಂತ್ ಹೇಳಿದ್ದಾರೆ. ಈ ಶತಕದೊಂದಿಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (SENA) ನಾಲ್ಕೂ ದೇಶಗಳಲ್ಲಿ ಟೆಸ್ಟ್ ಶತಕ ಗಳಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದೇ ವೇಳೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಬ್ರೆಂಡನ್ ಮೆಕಲಮ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಮೊದಲ ಸ್ಥಾನದಲ್ಲಿದ್ದಾರೆ.

ಆದರೆ, ಈಗ ದಾಖಲೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿರುವ ಪಂತ್, "ಚಿಕ್ಕವನಿದ್ದಾಗ ಹೆಚ್ಚು ಸಿಕ್ಸರ್ ಬಾರಿಸುವುದು ಸೇರಿದಂತೆ ಹಲವು ಗುರಿಗಳಿದ್ದವು. ಆದರೆ ಈಗ ನನ್ನ ವೃತ್ತಿಜೀವನದ ಈ ಹಂತದಲ್ಲಿ ದಾಖಲೆಗಳ ಬಗ್ಗೆ ಯೋಚಿಸುವುದಿಲ್ಲ. ಸ್ಥಿರವಾಗಿ ಆಡಬೇಕು ಮತ್ತು ತಂಡಕ್ಕೆ ಅಗತ್ಯವಿರುವ ಕೊಡುಗೆ ನೀಡಬೇಕು ಎಂಬುದಷ್ಟೇ ನನ್ನ ಗುರಿ" ಎಂದು ಹೇಳಿದ್ದಾರೆ.

Rishabh Pants Honest Confession After Ton
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ವಿಶ್ವದಾಖಲೆ.. ಈ ಸಾಧನೆ ಮಾಡಿದ ಜಗತ್ತಿನ ಮೊದಲ ತಂಡ!

ಮೈದಾನದಲ್ಲಿರುವುದೇ ನನಗೆ ಖುಷಿ

ಮೈದಾನದಲ್ಲಿ ಯಾವಾಗಲೂ ಖುಷಿಯಿಂದ ಇರಲು ಬಯಸುತ್ತೇನೆ ಎಂದಿರುವ ಪಂತ್, ಬ್ಯಾಟಿಂಗ್ ಮಾಡುತ್ತಿರಲಿ ಅಥವಾ ವಿಕೆಟ್ ಕೀಪಿಂಗ್ ಮಾಡುತ್ತಿರಲಿ, ಆಟವನ್ನು ಆನಂದಿಸುವುದು ತಮ್ಮ ಸ್ವಭಾವ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತ್ತು. ಭಾರತಕ್ಕಿಂತ 233 ರನ್‌ಗಳ ಹಿನ್ನಡೆಯಲ್ಲಿರುವ ಕಿವೀಸ್ ತಂಡದ ಉಳಿದ ಎಂಟು ವಿಕೆಟ್‌ಗಳನ್ನು ಅಂತಿಮ ದಿನ ಕಬಳಿಸುವ ವಿಶ್ವಾಸವನ್ನು ಪಂತ್ ವ್ಯಕ್ತಪಡಿಸಿದ್ದಾರೆ.

ಪಿಚ್ ಇನ್ನೂ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಹೀಗಾಗಿ ಬೌಲರ್‌ಗಳು ತಾಳ್ಮೆಯಿಂದ ಶ್ರಮಿಸಬೇಕಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರತಿದಿನವೂ ಬೌಲರ್‌ಗಳಿಗೆ ನೆರವಾಗುವ ಪಿಚ್ ಸಿಗುವುದಿಲ್ಲ. ಕಠಿಣ ಪರಿಶ್ರಮದ ಜೊತೆಗೆ ತಂಡದ ಆಟಗಾರರು ಸಣ್ಣ ಸಣ್ಣ ಕ್ಷಣಗಳನ್ನು ಸಂಭ್ರಮಿಸುತ್ತಾ ಆಡಬೇಕು ಎಂದು ಪಂತ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X