

ಗಾಂಧಿನಗರ: ಗುಜರಾತ್‌ನ ಗಾಂಧಿನಗರ ಜಿಲ್ಲೆಯ ನ್ಯಾಯಾಲಯವೊಂದು, ಗೋಹತ್ಯೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 277 ಕೆಜಿ ಗೋಮಾಂಸ ಸಾಗಾಟ ಮಾಡುತ್ತಿದ್ದಾಗ ಈ ಮೂವರು ಸಿಕ್ಕಿ ಬಿದ್ದಿದ್ದರು ಎಂದು 'ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಕರಣದ ವಿಚಾರಣೆ ನಡೆಸಿ ಸೋಮವಾರ ತೀರ್ಪು ನೀಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ.ಆರ್. ರಜಪೂತ್ ಅವರು, ವಸೀಮ್ ಖುರೇಶಿ, ಮೊಹಮ್ಮದ್ ರಫೀಕ್ ಖುರೇಶಿ ಮತ್ತು ಅಸ್ಫಾಕ್ ಬಹೇಲಿಮ್ ಎಂಬ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ತೀರ್ಪು ಪ್ರಕಟಿಸುವಾಗ ಹಿಂದೂ ಧರ್ಮಗ್ರಂಥಗಳನ್ನು ಮತ್ತು ಮನುಸ್ಮೃತಿ ಉಲ್ಲೇಖಿಸಿದ ನ್ಯಾಯಾಧೀಶರು, ಗೋವಿನ ಧಾರ್ಮಿಕ ಮಹತ್ವವನ್ನು ಒತ್ತಿ ಹೇಳಿದರು. ಗೋವನ್ನು ‘ವಿಶ್ವದ ತಾಯಿ’ ಎಂದು ಪೂಜಿಸಲಾಗುತ್ತದೆ ಮತ್ತು ಅದರಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯಿದೆ ಎಂದರು.
ಗೋವನ್ನು ಕೇವಲ ಪ್ರಾಣಿಯಾಗಿ ನೋಡದೆ, ಸಮಾನ ಸ್ಥಾನಮಾನ ಹೊಂದಿರುವ ಜೀವಿಯಾಗಿ ಹಾಗೂ ಧರ್ಮದ ಅಥವಾ ಹಿಂದೂ ಧರ್ಮದ ‘ಧುರೀಣ ಶಕ್ತಿ’ ಎಂದು ಪರಿಗಣಿಸಲಾಗಿದೆ ಎಂದು ವಿವರಿಸಿದ್ದಾರೆ.
ಗೋವುಗಳನ್ನು ತಾಯಿಯಂತೆ ಪರಿಗಣಿಸಲಾಗುತ್ತದೆ ಎಂಬುದು ತಿಳಿದಿದ್ದರೂ, ಆರೋಪಿಗಳು ಗೋವೊಂದನ್ನು 'ನಿರ್ದಯವಾಗಿ ಹತ್ಯೆ ಮಾಡಿದ್ದಾರೆ’ ಎಂದು ನ್ಯಾಯಾಲಯ ಹೇಳಿದೆ.
‘ಇಂತಹ ಆರೋಪಿಗಳಿಗೆ ಕಾನೂನಿನಲ್ಲಿ ನಿಗದಿಪಡಿಸಿದಂತೆ ಶಿಕ್ಷೆ ವಿಧಿಸದಿದ್ದರೆ, ಕಾಲಕ್ರಮೇಣ ಗೋವುಗಳು ಸಂಪೂರ್ಣವಾಗಿ ಅಳಿದುಹೋಗುತ್ತವೆ’ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಗುಜರಾತ್ ಉಪ ಮುಖ್ಯಮಂತ್ರಿ ಹರ್ಷ್ ಸಂಘವಿ ಅವರು ಈ ತೀರ್ಪನ್ನು ಸ್ವಾಗತಿಸಿದ್ದು, ರಾಜ್ಯದಲ್ಲಿ ಗೋಹತ್ಯೆಯಲ್ಲಿ ತೊಡಗಿರುವವರನ್ನು ಕಾನೂನು ಸುಮ್ಮನೆ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.