ರಾಜೀನಾಮೆ ನೀಡಿದ 2 ವಾರದಲ್ಲೇ CEO ಆಗಿ Jensen Huang ವಾಪಸ್; ಟ್ರಂಪ್ ಸ್ವಾಗತ: Nvidia ಷೇರುಬೆಲೆ ಏರಿಕೆ!
ಚಿಪ್ ತಯಾರಿಕಾ ದೈತ್ಯ ಕಂಪನಿ ಎನ್‌ವಿಡಿಯಾದ ಷೇರುಗಳು ಸೋಮವಾರ ಒಂದೇ ದಿನದಲ್ಲಿ ಸುಮಾರು ಶೇ.34ರಷ್ಟು ಏರಿಕೆ ಕಂಡಿದ್ದು, ಕಂಪನಿಯ ನಿರ್ದೇಶಕರ ಮಂಡಳಿ ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಸಿಇಒ ಸ್ಥಾನಕ್ಕೆ ನೇಮಿಸಿ..

ನ್ಯೂಯಾರ್ಕ್: ವಿವಾಹೇತರ ಸಂಬಂಧ ಮತ್ತು ಗೂಢಚಾರಿಕೆಗಾಗಿ ಹನಿ ಟ್ರ್ಯಾಪ್ ಆರೋಪದ ಮೇರೆಗೆ ವಿವಾದಕ್ಕೆ ತುತ್ತಾಗಿದ್ದ ಎನ್ ವಿಡಿಯಾ ಸಂಸ್ಥೆಯ ಸಿಇಒ ಜೆನ್ಸನ್ ಹುವಾಂಗ್ ಮರು ನೇಮಕದ ಬೆನ್ನಲ್ಲೇ ಸಂಸ್ಥೆಯ ಷೇರುಗಳ ಮೌಲ್ಯ ಮತ್ತೆ ಗಗನಕ್ಕೇರಿದೆ.
ಚಿಪ್ ತಯಾರಿಕಾ ದೈತ್ಯ ಕಂಪನಿ ಎನ್‌ವಿಡಿಯಾದ ಷೇರುಗಳು ಸೋಮವಾರ (ನವೆಂಬರ್ 23) ಒಂದೇ ದಿನದಲ್ಲಿ ಸುಮಾರು ಶೇ.34ರಷ್ಟು ಏರಿಕೆ ಕಂಡಿದ್ದು, ಕಂಪನಿಯ ನಿರ್ದೇಶಕರ ಮಂಡಳಿ ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ನೇಮಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಭಾರೀ ಚೇತರಿಕೆ ಕಂಡುಬಂದಿದೆ.
ಅಮೆರಿಕ ಮಾರುಕಟ್ಟೆ ವಹಿವಾಟು ಆರಂಭವಾದ ಬೆನ್ನಲ್ಲೇ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಬರೊಬ್ಬರಿ ಶೇ.31.46ರಷ್ಟು ಏರಿಕೆ ಕಂಡುಬಂದಿದೆ. ಪ್ರಸ್ತುತ ಎನ್ ವಿಡಿಯಾ ಕಾರ್ಪೋರೇಷನ್ ಸಂಸ್ಥೆಯ ಷೇರುಗಳು 165.02 ಅಮೆರಿಕನ್ ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದೆ.
ವಿವಾದದ ಬೆನ್ನಲ್ಲೇ ಹುವಾಂಗ್ ರಾಜಿನಾಮೆ
ಇನ್ನು ಚೀನಾದ ಗುಪ್ತಚರ ಇಲಾಖೆಯೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಅಮೆರಿಕದ ಅಧಿಕಾರಿಗಳು ಶಂಕಿಸಿರುವ ಮಹಿಳೆಯೊಂದಿಗಿನ ಸಂಬಂಧದ ವಿವಾದದ ಹಿನ್ನೆಲೆಯಲ್ಲಿ ಹುವಾಂಗ್ ನವೆಂಬರ್ 12ರಂದು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದೀಗ 11 ದಿನಗಳ ಬಳಿಕ ಮಂಡಳಿ ಅವರನ್ನು ಮತ್ತೆ ಹುದ್ದೆಗೆ ನೇಮಿಸಿದೆ. ಈ ವಿವಾದದ ಹಿನ್ನೆಲೆಯಲ್ಲಿ ಷೇರುಗಳು ಸುಮಾರು ಶೇ.33ರಷ್ಟು ಕುಸಿದಿದ್ದವು. ಸೋಮವಾರದ ಏರಿಕೆಯಿಂದ ನಷ್ಟದ ಬಹುಪಾಲು ಚೇತರಿಕೆಯಾಗಿದೆ.
ಒಮ್ಮತದ ನಿರ್ಧಾರ
ಹುವಾಂಗ್ ಅವರೊಂದಿಗೆ ಹಲವು ಸುತ್ತಿನ ಚರ್ಚೆ ಹಾಗೂ ಸಭೆಗಳನ್ನು ನಡೆಸಿದ ಬಳಿಕ ಎನ್ ವಿಡಿಯಾ ನಿರ್ದೇಶಕರ ಮಂಡಳಿ ಸರ್ವಾನುಮತದಿಂದ ಅವರನ್ನು ಮತ್ತೆ ನೇಮಿಸಲು ನಿರ್ಧರಿಸಿದೆ. ಹುವಾಂಗ್ ಅವರು ತಮ್ಮ ನಿಲುವನ್ನು ಸ್ಪಷ್ಟವಾಗಿ ಮಂಡಿಸಿದ್ದು, ಕಂಪನಿಯನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ವಿಶ್ವಾಸ ಮಂಡಳಿಗೆ ಬಂದಿದೆ ಎಂದು ಸಂಸ್ಥೆ ತಿಳಿಸಿದೆ.
ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳಿಂದಲೂ ಮಂಡಳಿ ಮಾಹಿತಿ ಪಡೆದಿದೆ. ಹುವಾಂಗ್ ಮತ್ತೆ ಸಿಇಒ ಆಗುವುದರಿಂದ ರಾಷ್ಟ್ರೀಯ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂಬ ವಿಶ್ವಾಸವಿದೆ ಎಂದು ಕಂಪನಿ ಹೇಳಿದೆ.
ಹುವಾಂಗ್ ಹೇಳಿದ್ದೇನು?
"ಎನ್‌ವಿಡಿಯಾವನ್ನು ಮುನ್ನಡೆಸಲು ಜೆನ್ಸನ್ ಅವರೇ ಸೂಕ್ತ ವ್ಯಕ್ತಿ. ಅವರ ಮರುನೇಮಕವು ಷೇರುದಾರರು, ಉದ್ಯೋಗಿಗಳು, ಪಾಲುದಾರರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಉತ್ತಮ ನಿರ್ಧಾರ" ಎಂದು ಮಂಡಳಿ ಅಧ್ಯಕ್ಷ ಹಾರ್ವೆ ಜೋನ್ಸ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹುವಾಂಗ್, "ಮತ್ತೆ ಕೆಲಸಕ್ಕೆ ಮರಳಲು ಕಾತರನಾಗಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.
ನಿರ್ಧಾರಕ್ಕೆ ಟ್ರಂಪ್ ಸ್ವಾಗತ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಹುವಾಂಗ್ ಅವರ ಮರುನೇಮಕವನ್ನು ಸ್ವಾಗತಿಸಿದ್ದಾರೆ. ಮಂಡಳಿಯ ನಿರ್ಧಾರ ಸರಿಯಾದದ್ದು ಮತ್ತು ಸೂಕ್ತವಾದದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಹುವಾಂಗ್ ಯಾವುದೇ ತಪ್ಪು ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಹುವಾಂಗ್ ಮತ್ತು ಮಂಡಳಿ ಪ್ರತ್ಯೇಕ ಸಭೆಗಳನ್ನು ನಡೆಸಿದ್ದರು. ಕಂಪನಿಯ ಷೇರುಗಳ ಬೆಲೆ ಕುಸಿಯುತ್ತಿರುವುದೂ ಮರುನೇಮಕದ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿತ್ತು ಎಂದು ವರದಿಯಾಗಿದೆ.
ತನಿಖೆ ಪೂರ್ಣಗೊಂಡಿಲ್ಲ
ಹುವಾಂಗ್ ಸಿಇಒ ಸ್ಥಾನಕ್ಕೆ ಮರಳಿದರೂ ಅವರ ವಿರುದ್ಧದ ವಿವಾದದ ತನಿಖೆ ಮುಂದುವರಿಯಲಿದೆ. ಸ್ವತಂತ್ರ ನಿರ್ದೇಶಕರ ಸಮಿತಿಯು ವಾಚ್‌ಟೆಲ್, ಲಿಪ್ಟನ್, ರೋಸೆನ್ ಆ್ಯಂಡ್ ಕಾಟ್ಜ್ ಕಾನೂನು ಸಂಸ್ಥೆಯ ಸಲಹೆಯೊಂದಿಗೆ ತನಿಖೆ ನಡೆಸುತ್ತಿದೆ ಎಂದು ಎನ್‌ವಿಡಿಯಾ ಸ್ಪಷ್ಟಪಡಿಸಿದೆ.
ಇದಲ್ಲದೆ, ರಾಷ್ಟ್ರೀಯ ಭದ್ರತೆ ಮತ್ತು ರಫ್ತು ನಿಯಂತ್ರಣ ಸಮಿತಿಯನ್ನೂ ರಚಿಸಲಾಗಿದೆ. ಕಂಪನಿಯು ಹೊಸ ಮುಖ್ಯ ಅನುಸರಣೆ ಅಧಿಕಾರಿ (Chief Compliance Officer) ನೇಮಕಕ್ಕೂ ಹುಡುಕಾಟ ಆರಂಭಿಸಿದೆ. ಮಧ್ಯಂತರ ಸಿಇಒ ಆಗಿದ್ದ ಕೊಲೆಟ್ ಕ್ರೆಸ್ ಮತ್ತೆ ಹಣಕಾಸು ಮುಖ್ಯಸ್ಥೆ (ಸಿಎಫ್‌ಒ) ಜವಾಬ್ದಾರಿ ಮುಂದುವರಿಸಲಿದ್ದಾರೆ.
ಹುವಾಂಗ್ ಅವರು ಡಿಸೆಂಬರ್ 1ರಂದು ಅಮೆರಿಕದ ಹೌಸ್ ವಿದೇಶಾಂಗ ವ್ಯವಹಾರಗಳ ಸಮಿತಿ ಸೇರಿದಂತೆ ಮೂರು ಸಮಿತಿಗಳ ಮುಂದೆ ಮುಚ್ಚಿದ ಕೋಣೆಯಲ್ಲಿ ವಿಚಾರಣೆಗೆ ಹಾಜರಾಗಬೇಕಿದೆ. ಎನ್‌ವಿಡಿಯಾದ ಕಾನೂನು ವಿಭಾಗದ ಮುಖ್ಯಸ್ಥ ಟಿಮ್ ಟೆಟರ್ ಡಿಸೆಂಬರ್ 2ರಂದು ವಿಚಾರಣೆಗೆ ಹಾಜರಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




