'ಕ್ರಿಕೆಟ್ ಅಂದ್ರೆ ಬ್ಯಾಟಿಂಗ್ ಮಾತ್ರವೇ ಅಲ್ಲ..': ವೈಭವ್ ಸೂರ್ಯವಂಶಿ ಐತಿಹಾಸಿಕ ದ್ವಿಶತಕ, ಸಂಜಯ್ ಮಂಜ್ರೇಕರ್ ಅಸಮಾಧಾನ! ಹೇಳಿದ್ದೇನು?

ದೋಹಾ: ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್‌ಗಳ ಐತಿಹಾಸಿಕ ದ್ವಿಶತಕ ಸಿಡಿಸಿದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಪ್ರದರ್ಶನಕ್ಕೆ ಜಗತ್ತಿನಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿರುವಂತೆಯೇ ಇತ್ತ ಖ್ಯಾತ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಮಾತ್ರ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ದೋಹಾದಲ್ಲಿ ನಡೆದ ಏಷ್ಯಾ ಕಪ್ ಪುರುಷರ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಭಾರತ ಎ ತಂಡದ ಪರ ಆಡಿದ ವೈಭವ್ ಸೂರ್ಯವಂಶಿ, ಯುಎಇ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿದ ಅವರು, ತಮ್ಮ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 28 ಸಿಕ್ಸರ್‌ಗಳನ್ನು ಬಾರಿಸಿದ್ದರು.
ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರ ಆಟಕ್ಕೆ ಮಾಜಿ ಭಾರತೀಯ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಯಾದರೂ, ಈ ಇನ್ನಿಂಗ್ಸ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳಿಗೆ ಎಷ್ಟು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿದೆ ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.
ವೈಭವ್ ಆಟವನ್ನು ಶ್ಲಾಘಿಸಿರುವ ಸಂಜಯ್ ಮಂಜ್ರೇಕರ್, ಬುಧವಾರ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಂಜ್ರೇಕರ್ ಹೇಳಿದ್ದೇನು?
"ವೈಭವ್‌ನಲ್ಲಿ ವಿಶೇಷ ಪ್ರತಿಭೆ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಆತ ಆಡಿದ ರೀತಿಯ ಇನ್ನಿಂಗ್ಸ್ ವೈಟ್‌ಬಾಲ್ ಕ್ರಿಕೆಟ್ ತಲುಪಿರುವ ವಿಚಿತ್ರ ಹಂತವನ್ನು ಮತ್ತೊಮ್ಮೆ ನೆನಪಿಸುತ್ತದೆ.
ಅಭಿಮಾನಿಗಳಿಗೆ ಇಂತಹ ಬ್ಯಾಟಿಂಗ್ ಮಾತ್ರ ಬೇಕು ಎಂದು ಭಾವಿಸುವುದು ತಪ್ಪು. ಕ್ರಿಕೆಟ್ ಎನ್ನುವುದು ಬ್ಯಾಟ್ ಮತ್ತು ಬಾಲ್ ನಡುವಿನ ಆಟ. ಕೇವಲ ಬ್ಯಾಟಿಂಗ್ ಮಾತ್ರವಲ್ಲ" ಎಂದು ಬರೆದುಕೊಂಡಿದ್ದಾರೆ.
ವೈಭವ್ ಅವರ ಈ ಸ್ಫೋಟಕ ಆಟದ ಬೆನ್ನಲ್ಲೇ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲವಾಗುವ ನಿಯಮಗಳು ಮತ್ತು ಬೌಲರ್‌ಗಳ ಸವಾಲುಗಳ ಕುರಿತು ಚರ್ಚೆ ಆರಂಭವಾಗಿದೆ.
ಯುವರಾಜ್ ಸಿಂಗ್ ಸಲಹೆ ನೆರವಾಯಿತು ಎಂದ ವೈಭವ್
ಇದಕ್ಕೂ ಮುನ್ನ ದೋಹಾದಲ್ಲಿ ನಡೆದ ಮೊದಲ ಎರಡು ಪಂದ್ಯಗಳಲ್ಲಿ ವೈಭವ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ನೇಪಾಳ ವಿರುದ್ಧ 26 ರನ್ ಹಾಗೂ ಪಾಕಿಸ್ತಾನ ಎ ವಿರುದ್ಧ 11 ರನ್ ಗಳಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ಪರ ಸೌರಾಷ್ಟ್ರ ವಿರುದ್ಧ ಆಡಿದ್ದ ಪಂದ್ಯದಲ್ಲೂ 18 ರನ್‌ಗಳಿಗೆ ಔಟಾಗಿದ್ದರು.
ಆದರೆ, ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರೊಂದಿಗೆ ಸುಮಾರು ಅರ್ಧ ಗಂಟೆ ಮಾತನಾಡಿದ್ದಾಗಿ ವೈಭವ್ ಬಹಿರಂಗಪಡಿಸಿದ್ದಾರೆ. ಆ ಮಾತುಕತೆಯಲ್ಲಿ ತಮ್ಮ ಬ್ಯಾಟಿಂಗ್‌ನಲ್ಲಿದ್ದ ಒಂದು ತಾಂತ್ರಿಕ ದೋಷವನ್ನು ಗುರುತಿಸಲು ಯುವರಾಜ್ ಸಹಾಯ ಮಾಡಿದ್ದರು. ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ.
ಯುವರಾಜ್ ಸಿಂಗ್ ತಮ್ಮ ಆರಾಧ್ಯ ಕ್ರಿಕೆಟಿಗ ಎಂದು ಹೇಳಿರುವ ವೈಭವ್, ಅವರು ಬ್ಯಾಟಿಂಗ್‌ಗೆ ಸಂಬಂಧಿಸಿದ ಕೆಲವು ತಾಂತ್ರಿಕ ಸಲಹೆಗಳನ್ನು ನೀಡಿದ್ದಲ್ಲದೆ, ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯುವಂತೆ ಸೂಚಿಸಿದ್ದರು ಎಂದು ಹೇಳಿದ್ದಾರೆ.
ಅಂದಹಾಗೆ ಭಾರತ ಎ ತಂಡ ಗುರುವಾರ ನಡೆಯಲಿರುವ ಟೂರ್ನಿಯ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎ ತಂಡವನ್ನು ಎದುರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



