ರಾಜ್ಯದಾದ್ಯಂತ ನೋಂದಣಿ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ; 500 ಹೋಮ್‌ಸ್ಟೇ ಮಾಲೀಕರು ಅರ್ಜಿ ಸಲ್ಲಿಕೆ!

ಇನ್ನೂ ನೋಂದಣಿ ಮಾಡಿಕೊಳ್ಳದ ಎಲ್ಲ ಅರ್ಹ ಹೋಮ್‌ಸ್ಟೇ ನಿರ್ವಾಹಕರು ತಡಮಾಡದೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮತ್ತು ಕರ್ನಾಟಕದ ಅಧಿಕೃತ ಪ್ರವಾಸೋದ್ಯಮ ವ್ಯವಸ್ಥೆಯ ಭಾಗವಾಗುವಂತೆ ಅವರು ಕರೆ ನೀಡಿದರು.
Representative Image
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಮ್‌ಸ್ಟೇಗಳ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಲ್ಲಿಯವರೆಗೆ 500ಕ್ಕೂ ಹೆಚ್ಚು ಹೋಮ್‌ಸ್ಟೇ ಮಾಲೀಕರು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಹೋಮ್‌ಸ್ಟೇಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಆಯುಕ್ತ ವಿ. ರಾಮ್ ಪ್ರಸಾದ್ ಮನೋಹರ್ ಭಾನುವಾರ ತಿಳಿಸಿದ್ದಾರೆ.

ಇನ್ನೂ ನೋಂದಣಿ ಮಾಡಿಕೊಳ್ಳದ ಎಲ್ಲ ಅರ್ಹ ಹೋಮ್‌ಸ್ಟೇ ನಿರ್ವಾಹಕರು ತಡಮಾಡದೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮತ್ತು ಕರ್ನಾಟಕದ ಅಧಿಕೃತ ಪ್ರವಾಸೋದ್ಯಮ ವ್ಯವಸ್ಥೆಯ ಭಾಗವಾಗುವಂತೆ ಅವರು ಕರೆ ನೀಡಿದರು.

'ಹೊಸ ನೋಂದಣಿ ವ್ಯವಸ್ಥೆಗೆ ಹೋಮ್‌ಸ್ಟೇ ಮಾಲೀಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ವಲಯವು ಪಾರದರ್ಶಕ ಮತ್ತು ನಿಯಂತ್ರಿತ ಪ್ರವಾಸೋದ್ಯಮ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ಉತ್ತೇಜಕ ಸೂಚನೆಯಾಗಿದೆ' ಎಂದು ಮನೋಹರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಜಾರಿಗೆ ತಂದಿರುವ ಹೋಮ್‌ಸ್ಟೇಗಳ ನೋಂದಣಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ರಾಜ್ಯದಾದ್ಯಂತ ಹೋಮ್‌ಸ್ಟೇ ಮಾಲೀಕರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ' ಎಂದು ಅವರು ಹೇಳಿದರು.

ನೋಂದಣಿ ಕಡ್ಡಾಯವಾಗಿರುವುದರಿಂದ, ನೋಂದಾಯಿಸಿಕೊಳ್ಳದ ಎಲ್ಲ ಹೋಮ್‌ಸ್ಟೇ ನಿರ್ವಾಹಕರು ಆದಷ್ಟು ಬೇಗ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಅಧಿಕೃತ ಮಾನ್ಯತೆಯನ್ನು ಪಡೆಯಬೇಕೆಂದು ಆಯುಕ್ತರು ಮನವಿ ಮಾಡಿದರು.

Representative Image
Kodagu: ಅಮೆರಿಕ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ; ಹೋಂಸ್ಟೇ ಪರವಾನಗಿ ರದ್ದು; ಡಿಸಿ ಆದೇಶ

'ಇಲ್ಲಿಯವರೆಗೆ ಸ್ವೀಕರಿಸಲಾದ ಅರ್ಜಿಗಳ ಪೈಕಿ, ಸುಮಾರು 400 ಅರ್ಜಿಗಳ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದ್ದು, ಸದ್ಯ ಸ್ಥಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ನೋಂದಣಿ ಪ್ರಮಾಣಪತ್ರವನ್ನು ನೀಡುವ ಮೊದಲು ಪ್ರತಿಯೊಂದು ಅರ್ಜಿಯೂ ಸಮಗ್ರ ಪರಿಶೀಲನಾ ಪ್ರಕ್ರಿಯೆಗೆ ಒಳಪಡುತ್ತದೆ' ಎಂದು ಅಧಿಕಾರಿ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಅಧಿಕಾರಿಗಳು ಜಂಟಿಯಾಗಿ ಈ ಪರಿಶೀಲನೆಗಳನ್ನು ನಡೆಸುತ್ತಾರೆ. ಮೂಲಸೌಕರ್ಯ, ಸುರಕ್ಷತೆ, ನೈರ್ಮಲ್ಯ ಮತ್ತು ಕಾರ್ಯಾಚರಣೆಯ ಅಗತ್ಯಗಳಿಗೆ ಸಂಬಂಧಿಸಿದ ನಿಗದಿತ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಈ ಪರಿಶೀಲನಾ ಪ್ರಕ್ರಿಯೆಯು ಮೌಲ್ಯಮಾಪನ ಮಾಡುತ್ತದೆ ಎಂದು ಅವರು ವಿವರಿಸಿದರು.

ಮಾರ್ಗಸೂಚಿಗಳ ಅಡಿಯಲ್ಲಿ ನಿಗದಿಪಡಿಸಲಾದ ಕನಿಷ್ಠ ಮಾನದಂಡಗಳನ್ನು ಪೂರೈಸದ ಹೋಮ್‌ಸ್ಟೇಗಳಿಗೆ ನೋಂದಣಿ ನೀಡಲಾಗುವುದಿಲ್ಲ. ಗುರುತಿಸಲಾದ ಕೊರತೆಗಳನ್ನು ಸರಿಪಡಿಸಿಕೊಂಡು, ಪರಿಶೀಲನೆಗಾಗಿ ಹೊಸ ಅರ್ಜಿಯನ್ನು ಮಾಲೀಕರು ಸಲ್ಲಿಸಬಹುದು.

ಯಶಸ್ವಿ ಪರಿಶೀಲನೆ, ತಪಾಸಣೆಗಳ ಪೂರ್ಣಗೊಳಿಸುವಿಕೆ ಮತ್ತು ಸಮರ್ಥ ಪ್ರಾಧಿಕಾರದ ಅನುಮೋದನೆಯ ನಂತರ 45 ದಿನಗಳೊಳಗೆ ನೋಂದಣಿ ಪ್ರಮಾಣಪತ್ರವನ್ನು ನೀಡಲಾಗುವುದು. ಈ ಪ್ರಮಾಣಪತ್ರವು ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ; ಆ ಅವಧಿಯ ನಂತರ ಅದನ್ನು ನವೀಕರಿಸುವುದು ಕಡ್ಡಾಯವಾಗಿರುತ್ತದೆ ಎಂದರು.

ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕೃತ ಹೋಮ್‌ಸ್ಟೇಗಳಿಗೆ ಸರ್ಕಾರದ ಮಾನ್ಯತೆಯನ್ನು ಒದಗಿಸುವ ಉದ್ದೇಶದಿಂದ ಈ ಕಡ್ಡಾಯ ನೋಂದಣಿ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಪ್ರವಾಸಿಗರಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಗುಣಮಟ್ಟದ ವಸತಿ ಸೌಲಭ್ಯದ ಭರವಸೆ ನೀಡುವುದರ ಜೊತೆಗೆ, ರಾಜ್ಯದಾದ್ಯಂತ ನೋಂದಾಯಿತ ಹೋಮ್‌ಸ್ಟೇಗಳ ಅಧಿಕೃತ ದತ್ತಾಂಶವನ್ನು ನಿರ್ವಹಿಸಲು ಈ ಉಪಕ್ರಮವು ಪ್ರವಾಸೋದ್ಯಮ ಇಲಾಖೆಗೆ ಸಹಕಾರಿಯಾಗಲಿದೆ.

ನೋಂದಾಯಿತ ಹೋಮ್‌ಸ್ಟೇಗಳು ಇಲಾಖೆಯ ಕಾರ್ಯಾಚರಣೆ ಮತ್ತು ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ; ಇದು ಪ್ರವಾಸಿಗರ ವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಕರ್ನಾಟಕದಲ್ಲಿ ಜವಾಬ್ದಾರಿಯುತ ಹಾಗೂ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ರಾಜ್ಯದಲ್ಲಿ ವಿದೇಶಿ ಪ್ರವಾಸಿಗರಿಗೆ ಸಂಬಂಧಿಸಿದ ಕೆಲವು ಅಹಿತಕರ ಘಟನೆಗಳ ನಂತರ ಇಲಾಖೆಯು ಈ ಮಾರ್ಗಸೂಚಿಗಳನ್ನು ರೂಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com