

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಪಾಪಿ ಪತ್ನಿಯೊಬ್ಬ ಮದುವೆಯಾದ ಮೂರೇ ತಿಂಗಳಿಗೆ ತನ್ನ ಪತ್ನಿಯನ್ನು ಕೊಂದು ಬೆಡ್‌ಶೀಟ್‌ನಲ್ಲಿ ಶವ ಸುತ್ತಿಟ್ಟು ಪರಾರಿಯಾಗಿದ್ದಾನೆ.
ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಈ ಭೀಕರ ಕೊಲೆ ನಡೆದಿದ್ದು, ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮನೆ ಬಾಗಿಲು ತೆರೆದು ನೋಡಿದಾಗ ಈ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.
ಹತ್ಯೆಯಾದ ಮಹಿಳೆಯನ್ನು ಬಿಹಾರ ಮೂಲದ ರೀಮಾ ಕುಮಾರಿ(20) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪ ಎದುರಿಸುತ್ತಿರುವ ಆಕೆಯ ಪತಿ ಧೀರಜ್ ಕುಮಾರ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನಾಲ್ಕು ತಿಂಗಳ ಹಿಂದೆ ಈ ದಂಪತಿ ಬಿಹಾರದಿಂದ ಬೆಂಗಳೂರಿಗೆ ಬಂದು ಗೇರುಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ರಿಯಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಧೀರಜ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆದರೆ, ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಸ್ನೇಹಿತರು ಹಲವು ಬಾರಿ ಸಮಾಧಾನ ಮಾಡಿದರೂ ಪರಿಸ್ಥಿತಿ ಸುಧಾರಿಸಿರಲಿಲ್ಲ.
ಈ ಜಗಳವೇ ಕೊನೆಗೆ ಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಕೋಪದ ಭರದಲ್ಲಿ ಧೀರಜ್ ಕುಮಾರ್, ತನ್ನ ಪತ್ನಿಯನ್ನು ಹತ್ಯೆಗೈದ ಬಳಿಕ, ಆಕೆಯ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಮನೆಯಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಹಲವು ದಿನಗಳವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಮೃತೆಯ ಸ್ನೇಹಿತೆಯೊಬ್ಬರು ಮನೆಗೆ ಭೇಟಿ ನೀಡಿದ ವೇಳೆ ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ಅವರು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅನುಮಾನಗೊಂಡ ಮನೆ ಮಾಲೀಕರು ಮನೆ ಬಾಗಿಲು ತೆರೆಯಿಸಿ ಪರಿಶೀಲನೆ ನಡೆಸಿದಾಗ, ಟಾಯ್ಲೆಟ್ ಸಮೀಪ ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ತಕ್ಷಣವೇ ಮನೆ ಮಾಲೀಕರು ಕುಂಬಳಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪರಿಶೀಲನೆ ವೇಳೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಾಲ್ಕೈದು ದಿನಗಳ ಹಿಂದೆಯೇ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕುಂಬಳಗೋಡು ಪೊಲೀಸರು, ಪರಾರಿಯಾಗಿರುವ ಆರೋಪಿ ಧೀರಜ್ ಕುಮಾರ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.