

ಚೆನ್ನೈ: ವಿವಾದಾತ್ಮಕ ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಮತ್ತು ಕರ್ನಾಟಕದ ನಡುವಿನ ವಾಕ್ಸಮರದ ನಡುವೆಯೇ, ಕೇಂದ್ರ ಜಲ ಆಯೋಗ (CWC) ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿ (DPR)ಯನ್ನು ವಾಪಸ್ ಕಳುಹಿಸಿದೆ. ಯೋಜನಾ ಪ್ರಸ್ತಾವನೆ ಕಾವೇರಿ ಜಲ ವಿವಾದ ನ್ಯಾಯಮಂಡಳಿ (CWDT) ನೀಡಿರುವ ತೀರ್ಪು ಹಾಗೂ 2018ರ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ಗೆ ಲಭ್ಯವಾಗಿರುವ ಅಧಿಕೃತ ದಾಖಲೆಗಳ ಪ್ರಕಾರ, ಕರ್ನಾಟಕವು ಬಳಕೆಗಾಗಿ ಸಂಗ್ರಹಿಸಬಹುದಾದ ನೀರಿನ ಪ್ರಮಾಣವನ್ನು 2.2 ಟಿಎಂಸಿ ಅಡಿ (tmcft) ಹೆಚ್ಚಿಸುವ ಪ್ರಸ್ತಾಪ ಮಾಡಿದ್ದ ಹಿನ್ನೆಲೆಯಲ್ಲಿ, ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ಸೂಚಿಸಿ ಜೂನ್ 29ರಂದು ಸಿಡಬ್ಲ್ಯುಸಿ ಡಿಪಿಆರ್ ನ್ನು ಹಿಂದಿರುಗಿಸಿದೆ.
ತಿದ್ದುಪಡಿ ಮಾಡಿದ ಯೋಜನಾ ವರದಿಯಲ್ಲಿ ಕರ್ನಾಟಕ ಸರ್ಕಾರ, ಕಾವೇರಿ ನದಿಗೆ ಅಡ್ಡಲಾಗಿ ಡೈವರ್ಷನ್ ವೀರ್ ನಿರ್ಮಿಸುವ 'ಶಿವನಸಮುದ್ರ ರನ್-ಆಫ್-ದಿ-ರಿವರ್ ಪವರ್ ಪ್ರಾಜೆಕ್ಟ್' ಎಂಬ ಹೊಸ ಅಂಶವನ್ನು ಸೇರಿಸಿತ್ತು.
ಈ ಕುರಿತು ಕರ್ನಾಟಕವು 2019ರಲ್ಲಿ ಸಲ್ಲಿಸಿದ್ದ ಮೂಲ ಡಿಪಿಆರ್‌ಗೆ ಸಂಬಂಧಿಸಿದಂತೆ ಸಿಡಬ್ಲ್ಯುಸಿ ಎತ್ತಿದ್ದ ಪ್ರಶ್ನೆಗಳಿಗೆ, 2026ರ ಏಪ್ರಿಲ್ 21ರಂದು ಸಲ್ಲಿಸಿದ್ದ ಅನುಸರಣೆ ವರದಿಯನ್ನು ಪರಿಶೀಲಿಸಿದ ಬಳಿಕ ಆಯೋಗ ಈ ಆಕ್ಷೇಪಣೆಗಳನ್ನು ದಾಖಲಿಸಿದೆ.
2018ರಲ್ಲಿ ಮೇಕೆದಾಟು ಯೋಜನೆಯನ್ನು ಮೊದಲು ಪ್ರಸ್ತಾಪಿಸಿದ್ದಾಗ, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 4.75 ಟಿಎಂಸಿ ಅಡಿ ಹೆಚ್ಚುವರಿ ಬಳಕೆಗೆ ಅವಕಾಶ ಕಲ್ಪಿಸುವ ಸಮತೋಲನ ಜಲಾಶಯ ಎಂದು ವಿವರಿಸಲಾಗಿತ್ತು. ಇದನ್ನು ಆಧರಿಸಿ 2018ರ ನವೆಂಬರ್‌ನಲ್ಲಿ ಸಿಡಬ್ಲ್ಯುಸಿ ಡಿಪಿಆರ್ ಸಿದ್ಧಪಡಿಸಲು ತಾತ್ವಿಕ ಅನುಮೋದನೆ ನೀಡಿತ್ತು.
ಆದರೆ, ಈ ವರ್ಷದ ಏಪ್ರಿಲ್‌ನಲ್ಲಿ ಸಲ್ಲಿಸಿದ ಪರಿಷ್ಕೃತ ಪ್ರಸ್ತಾವನೆಯಲ್ಲಿ ಕರ್ನಾಟಕ ಸರ್ಕಾರ, ಶಿವನಸಮುದ್ರ ಜಲವಿದ್ಯುತ್ ಯೋಜನೆಯನ್ನು ಸೇರಿಸುವುದರ ಜೊತೆಗೆ ಹೆಚ್ಚುವರಿ ಬಳಕೆಯ ನೀರಿನ ಪ್ರಮಾಣವನ್ನು 4.75 ಟಿಎಂಸಿಯಿಂದ 6.95 ಟಿಎಂಸಿಗೆ ಹೆಚ್ಚಿಸಲು ಪ್ರಸ್ತಾಪಿಸಿತ್ತು.
ಈ ಬದಲಾವಣೆಗಳು 2019ರ ಮೂಲ ಡಿಪಿಆರ್‌ನಲ್ಲಿ ಇರಲಿಲ್ಲ ಎಂದು ಸಿಡಬ್ಲ್ಯುಸಿ ಗಮನಿಸಿದ್ದು, 59.46 ಟಿಎಂಸಿ ಜೀವಂತ ಸಂಗ್ರಹ ಸಾಮರ್ಥ್ಯದ (Live Storage) ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ನೀಡಿರುವ ಸಮರ್ಥನೆಯನ್ನೂ ಪ್ರಶ್ನಿಸಿದೆ.
ಕರ್ನಾಟಕದ ಪ್ರಕಾರ
ಜೂನ್ ಮತ್ತು ಜುಲೈನಲ್ಲಿ ತಮಿಳುನಾಡಿಗೆ ನೀರು ಬಿಡಲು – 13 ಟಿಎಂಸಿ
ಫೆಬ್ರವರಿಯಿಂದ ಮೇವರೆಗೆ ಪರಿಸರ ಹರಿವು ಕಾಯ್ದುಕೊಳ್ಳಲು – 10 ಟಿಎಂಸಿ
2044ರ ವೇಳೆಗೆ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕಾಗಿ – 33.15 ಟಿಎಂಸಿ
ಆವಿಯಾಗುವಿಕೆ ಮತ್ತು ಹೂಳು ಸಂಗ್ರಹಕ್ಕೆ – 3.85 ಟಿಎಂಸಿ
ಒಟ್ಟು ಸುಮಾರು 60 ಟಿಎಂಸಿ ಸಂಗ್ರಹ ಸಾಮರ್ಥ್ಯ ಅಗತ್ಯ ಎಂದು ರಾಜ್ಯ ವಾದಿಸಿತ್ತು.
ಆದರೆ, ಈ ಲೆಕ್ಕಾಚಾರದಲ್ಲಿ ಗಂಭೀರ ದೋಷಗಳಿವೆ ಎಂದು ಸಿಡಬ್ಲ್ಯುಸಿ ಹೇಳಿದೆ. 2044ರ ವೇಳೆಗೆ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು 64 ಟಿಎಂಸಿ ಎಂದು ಅಂದಾಜಿಸಿರುವ ಕರ್ನಾಟಕ, ಅದರಲ್ಲಿ 14.52 ಟಿಎಂಸಿ ಅನ್ನು ಈಗಿನ ನೀರು ಪೂರೈಕೆ ಎಂದು ಕಡಿತಗೊಳಿಸಿದೆ. ಆದರೆ ಈ 14.52 ಟಿಎಂಸಿ ಅಂಕಿ 1990ರದ್ದು ಎಂದು ಸಿಡಬ್ಲ್ಯುಸಿ ಸೂಚಿಸಿದೆ.
ಇದಲ್ಲದೆ, 2018ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಕರ್ನಾಟಕದ ಒಟ್ಟು ಕುಡಿಯುವ ಹಾಗೂ ಗೃಹಬಳಕೆಯ ನೀರಿನ ಅಗತ್ಯವನ್ನು 33 ಟಿಎಂಸಿ ಎಂದು ಹಾಗೂ ಅದರಲ್ಲಿ ಬೆಂಗಳೂರುಗೆ ಮಾತ್ರ 24 ಟಿಎಂಸಿ ಸಾಕು ಎಂದು ಈಗಾಗಲೇ ನಿರ್ಧರಿಸಲಾಗಿದೆ ಎಂದು ಆಯೋಗ ಉಲ್ಲೇಖಿಸಿದೆ.
ಕಳೆದ ಮೂರು ದಶಕಗಳಲ್ಲಿ ಬೆಂಗಳೂರು ಬಹಳಷ್ಟು ವಿಸ್ತರಿಸಿದ್ದರೂ, ಪ್ರಸ್ತುತ ನಗರ ಎಷ್ಟು ನೀರನ್ನು ಬಳಸುತ್ತಿದೆ ಎಂಬ ಮಾಹಿತಿ ಕರ್ನಾಟಕ ನೀಡಿಲ್ಲ ಎಂದು ಸಿಡಬ್ಲ್ಯುಸಿ ಹೇಳಿದೆ.
ಹೀಗಾಗಿ, ಹಳೆಯ ಅಂಕಿ-ಅಂಶಗಳ ಆಧಾರದ ಮೇಲೆ 59.46 ಟಿಎಂಸಿ ಜಲಾಶಯದ ಸಾಮರ್ಥ್ಯ ನಿಗದಿಪಡಿಸಿರುವುದು ಸೂಕ್ತವಾಗಿ ಕಾಣುವುದಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಕರ್ನಾಟಕವು ಹೆಚ್ಚುವರಿ 6.95 ಟಿಎಂಸಿ ನೀರಿನ ಬಳಕೆಗೆ ಅನುಮತಿ ಕೋರಿರುವುದಕ್ಕೂ ಸಿಡಬ್ಲ್ಯುಸಿ ಆಕ್ಷೇಪ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ 6.5 ಟಿಎಂಸಿ ಹೆಚ್ಚುವರಿ ಕುಡಿಯುವ ನೀರಿನ ಬಳಕೆಗೆ ಅವಕಾಶ ನೀಡಿತ್ತು. ಆದರೆ, ಈ 6.5 ಟಿಎಂಸಿಯಲ್ಲಿ ರಾಜ್ಯದ ಈಗಿನ ಬಳಕೆಯೂ ಸೇರಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
1990ರಲ್ಲಿ ಕರ್ನಾಟಕದ ಕುಡಿಯುವ ನೀರಿನ ಬಳಕೆ 2.9 ಟಿಎಂಸಿ ಎಂದು ಪರಿಗಣಿಸಿದರೂ, ಹೆಚ್ಚುವರಿ ಬಳಕೆಗೆ ಸುಮಾರು 3.6 ಟಿಎಂಸಿ ಮಾತ್ರ ಲಭ್ಯ ಎಂದು ಸಿಡಬ್ಲ್ಯುಸಿ ಹೇಳಿದೆ. ಹೀಗಾಗಿ 6.95 ಟಿಎಂಸಿ ಬಳಕೆಯ ಪ್ರಸ್ತಾಪವು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಿತಿಯನ್ನು ಮೀರಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಈ ಎಲ್ಲ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ, 2019ರ ಡಿಪಿಆರ್ ಅನ್ನು ಅಧಿಕೃತವಾಗಿ ವಾಪಸ್ ಕಳುಹಿಸಿರುವ ಸಿಡಬ್ಲ್ಯುಸಿ, ಕಾವೇರಿ ನ್ಯಾಯಮಂಡಳಿ ತೀರ್ಪು, ಸುಪ್ರೀಂ ಕೋರ್ಟ್ ಆದೇಶ ಹಾಗೂ ಸಿಡಬ್ಲ್ಯುಸಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹೊಸ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ.
ಹೊಸ ಪ್ರಸ್ತಾವನೆಯಲ್ಲಿ ನವೀಕೃತ ತಾಂತ್ರಿಕ ವಿವರಗಳು, ಹೊಸ ಅಂಕಿ-ಅಂಶಗಳು ಹಾಗೂ ಪರಿಷ್ಕೃತ ನಕ್ಷೆಗಳು ಇರಬೇಕು ಎಂದು ಆಯೋಗ ತಿಳಿಸಿದೆ.
ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಸಿಡಬ್ಲ್ಯುಸಿಯ ಆಕ್ಷೇಪಣೆಗಳು ಮೇಕೆದಾಟು ಯೋಜನೆ ಕುರಿತು ರಾಜ್ಯ ಸರ್ಕಾರ ಆರಂಭದಿಂದಲೇ ವ್ಯಕ್ತಪಡಿಸಿದ್ದ ಆತಂಕವನ್ನು ಸ್ವತಂತ್ರವಾಗಿ ಸಮರ್ಥಿಸಿವೆ ಎಂದು ಹೇಳಿದ್ದಾರೆ.
"ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳ ಕೆಳಭಾಗದಲ್ಲಿ ಉಂಟಾಗುವ ಸುಮಾರು 80 ಟಿಎಂಸಿ ಹರಿವಿನ ನೀರನ್ನು ತಡೆಹಿಡಿಯುವ ಪ್ರಯತ್ನವೇ ಮೇಕೆದಾಟು ಯೋಜನೆ. ಇದು ತಮಿಳುನಾಡಿನ ಪಾಲಿನ ನೀರಿನ ಮೇಲೆ ಪರಿಣಾಮ ಬೀರುತ್ತದೆ. ಕುಡಿಯುವ ನೀರಿನ ನೆಪದಲ್ಲಿ ಮೇಲ್ಭಾಗದಲ್ಲಿ ಹೆಚ್ಚುವರಿ ಸಂಗ್ರಹ ಸಾಮರ್ಥ್ಯ ಸೃಷ್ಟಿಸುವ ಉದ್ದೇಶ ಇದಾಗಿದೆ ಎಂದು ನಾವು ಆರಂಭದಿಂದಲೇ ಹೇಳುತ್ತಿದ್ದೇವೆ," ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಕಾವೇರಿ ಜಲಾನಯನ ಪ್ರದೇಶವನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಿಸುವಂತೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದ ಆಹ್ವಾನವನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಆಗಸ್ಟ್ 3ರಂದು ಬೆಂಗಳೂರಿನ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾವೇರಿ ನೀರು ಬಿಡುಗಡೆ ಕುರಿತು ಚರ್ಚೆ ನಡೆಸಿದ ಬಳಿಕ, ಅದೇ ದಿನ ಚೆನ್ನೈಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್ ಅವರು ವಿಜಯ್ ಅವರೊಂದಿಗೆ ಇರಲಿದ್ದಾರೆ.