ಪಾರಂಪರಿಕ ತ್ಯಾಜ್ಯ(Legacy waste) ವಿಲೇವಾರಿಗಾಗಿ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನ : ಕೃಷ್ಣ ಬೈರೇಗೌಡ!

ಗೃಹ ತ್ಯಾಜ್ಯದಿಂದ ಉಂಟಾಗಿರುವ ಬ್ಲಾಕ್ ಸ್ಪಾಟ್ ಗಳನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಗುರುವಾರ ತಿಳಿಸಿದರು.
krishbyregowda
ಕೃಷ್ಣ ಬೈರೇಗೌಡ
Updated on

ಬೆಂಗಳೂರು: ಬೆಂಗಳೂರಿನಾದ್ಯಂತ ಆಗಸ್ಟ್ 1ರಿಂದ ಹಮ್ಮಿಕೊಳ್ಳಲಾಗುತ್ತಿರುವ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನ ದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯವನ್ನು(Legacy waste) ಮಾತ್ರ ತೆರವುಗೊಳಿಸಲಾಗುತ್ತದೆ. ಗೃಹ ತ್ಯಾಜ್ಯದಿಂದ ಉಂಟಾಗಿರುವ ಬ್ಲಾಕ್ ಸ್ಪಾಟ್ ಗಳನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಗುರುವಾರ ತಿಳಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ಆಗಸ್ಟ್ 1ರಿಂದ ಆರಂಭವಾಗಲಿರುವ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನಕ್ಕೆ ಸಂಬಂಧಿಸಿದಂತೆ ಇಂದು ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಾದ್ಯಂತ ಹಲವು ವರ್ಷಗಳಿಂದ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ಜಾಗಗಳಲ್ಲಿ ಸಂಗ್ರಹವಾಗಿರುವ ಮಣ್ಣು, ಕಟ್ಟಡ ಭಗ್ನಾವಶೇಷಗಳು (ಸಿ & ಡಿ ವೇಸ್ಟ್), ಪೈಪ್‌ಗಳು, ವಿದ್ಯುತ್ ಕಂಬಗಳು ಸೇರಿದಂತೆ ವಿವಿಧ ಪಾರಂಪರಿಕ ತ್ಯಾಜ್ಯವನ್ನು ಈ ಅಭಿಯಾನದಡಿ ತೆರವುಗೊಳಿಸಲಾಗುತ್ತದೆ. ಗೃಹ ಬಳಕೆಯ ತ್ಯಾಜ್ಯದಿಂದ ಉಂಟಾಗಿರುವ *ಬ್ಲಾಕ್ ಸ್ಪಾಟ್‌ಗಳ ತೆರವು ಕಾರ್ಯವನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ನಗರದ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಮತ್ತು ವಿವಿಧ ಸಾಮಗ್ರಿಗಳನ್ನು ಸುರಿಯುತ್ತಿರುವುದರಿಂದ ಅವುಗಳ ಮೇಲೆ ಗಿಡಗಂಟಿಗಳು ಬೆಳೆದು, ಇಲಿ, ಹಾವು ಹಾಗೂ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದರ ಜೊತೆಗೆ, ತ್ಯಾಜ್ಯ ಬಿದ್ದಿರುವ ಸ್ಥಳಗಳಲ್ಲಿ ಮತ್ತಷ್ಟು ಕಸವನ್ನು ಎಸೆಯುವ ಪ್ರವೃತ್ತಿ ಹೆಚ್ಚಾಗಿ ನಗರದ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಿದರು.

ಅಲ್ಲದೆ, ನಗರದಲ್ಲಿರುವ ಅನೇಕ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಮಣ್ಣು, ತ್ಯಾಜ್ಯ ಹಾಗೂ ಕಳೆ-ಗಿಡಗಳು ಬೆಳೆದು ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ನಾಗರಿಕರಿಂದ ನೂರಾರು ದೂರುಗಳು ಬಂದಿವೆ ಎಂದು ತಿಳಿಸಿದರು.

1,616 ಸ್ಥಳಗಳಲ್ಲಿ 22 ಸಾವಿರ ಟನ್ ತ್ಯಾಜ್ಯ ಗುರುತು: ರಸ್ತೆ ಬದಿ, ಪಾದಚಾರಿ ಮಾರ್ಗ, ಸಾರ್ವಜನಿಕ ಸ್ಥಳಗಳು, ಖಾಲಿ ನಿವೇಶನಗಳು ಮಾತ್ರವಲ್ಲದೆ ವಿವಿಧ ಇಲಾಖೆಗಳ ಖಾಲಿ ಜಾಗಗಳಲ್ಲಿಯೂ ಪಾರಂಪರಿಕ ತ್ಯಾಜ್ಯ ಸಂಗ್ರಹವಾಗಿದ್ದು, ಇದರಿಂದ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಪ್ರಸ್ತುತ 1,616 ಸ್ಥಳಗಳಲ್ಲಿ ಸುಮಾರು 22,000 ಟನ್ ಪಾರಂಪರಿಕ ತ್ಯಾಜ್ಯವನ್ನು ಗುರುತಿಸಲಾಗಿದೆ. ನಗರದಾದ್ಯಂತ ಒಟ್ಟು 1 ಲಕ್ಷ ಟನ್‌ಗಿಂತ ಹೆಚ್ಚು ತ್ಯಾಜ್ಯ ಇರಬಹುದೆಂದು ಅಂದಾಜಿಸಲಾಗಿದೆ.

ಈ ಸಂಬಂಧ ಜಿಬಿಎ, ಐದು ನಗರ ಪಾಲಿಕೆಗಳು, ರೈಲ್ವೆ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಕೆ-ರೈಡ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪಾರಂಪರಿಕ ತ್ಯಾಜ್ಯ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಬೃಹತ್ ತ್ಯಾಜ್ಯ ತೆರವು ಕಾರ್ಯಕ್ಕಾಗಿ ಸುಮಾರು 100 ವಾಹನಗಳನ್ನು ನಿಯೋಜಿಸಲಾಗುತ್ತಿದ್ದು, ಅಗತ್ಯವಿದ್ದಲ್ಲಿ ಇನ್ನಷ್ಟು ವಾಹನಗಳನ್ನು ನಿಯೋಜಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳಿಂದ ಅಭಿಯಾನಕ್ಕೆ ಚಾಲನೆ: ಆಗಸ್ಟ್ 1ರಂದು ಆರಂಭವಾಗಲಿರುವ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಆಗಸ್ಟ್ ತಿಂಗಳ ಪೂರ್ತಿ ಅಭಿಯಾನ ನಡೆಯಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿರುವ ಬೃಹತ್ ತ್ಯಾಜ್ಯವನ್ನು ಸಂಬಂಧಿಸಿದ ಇಲಾಖೆಗಳು ಹಾಗೂ ಸಂಸ್ಥೆಗಳು ತೆರವುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ.

ಆಗಸ್ಟ್ 15ರೊಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ: ಖಾಲಿ ನಿವೇಶನಗಳ ಮಾಲೀಕರು ಆಗಸ್ಟ್ 15ರೊಳಗೆ ತಮ್ಮ ನಿವೇಶನಗಳನ್ನು ಸ್ವಯಂ ಸ್ವಚ್ಛಗೊಳಿಸಬೇಕು ಎಂದು ಮನವಿ ಮಾಡಿದರು. ಸ್ವಚ್ಛತಾ ಕಾರ್ಯ ನಡೆಸುವ ಸಂಸ್ಥೆಗಳು ಹಾಗೂ ಗುತ್ತಿಗೆದಾರರ ಸಂಪರ್ಕ ವಿವರಗಳನ್ನು ಆಯಾ ನಗರ ಪಾಲಿಕೆಗಳಲ್ಲಿ ಲಭ್ಯವಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಗಸ್ಟ್ 15ರ ನಂತರವೂ ಸ್ವಚ್ಛಗೊಳಿಸದ ನಿವೇಶನಗಳನ್ನು ಸಂಬಂಧಿಸಿದ ನಗರ ಪಾಲಿಕೆ ಸ್ವಚ್ಛಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದ ವೆಚ್ಚದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದರು.

ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ ಕ್ರಮ:

ಅಭಿಯಾನದಡಿ ಸ್ವಚ್ಛಗೊಳಿಸಲಾದ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ ನಿಗಾ ವಹಿಸಲಾಗುವುದು. ನಗರ ಪಾಲಿಕೆಗಳು ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

'ಜಸ್ಟ್ ಕ್ಲೀನ್ ಬೆಂಗಳೂರು(JCB)'ಗೆ ನಾಗರಿಕರ ಸಹಭಾಗಿತ್ವ ಅಗತ್ಯ:

ಬೆಂಗಳೂರನ್ನು ಇನ್ನಷ್ಟು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ರೂಪಿಸಲು 'ಜಸ್ಟ್ ಕ್ಲೀನ್ ಬೆಂಗಳೂರು(JCB)' ಗೆ ನಾಗರಿಕರು ಕೈಜೋಡಿಸಬೇಕು. ಬೃಹತ್ ಸ್ವಚ್ಛತಾ ಕಾರ್ಯದಲ್ಲಿ ಅಧಿಕಾರಿಗಳಷ್ಟೇ ಅಲ್ಲದೆ ಸಾರ್ವಜನಿಕರ ಸಹಭಾಗಿತ್ವವೂ ಅತ್ಯಂತ ಅಗತ್ಯವಾಗಿದೆ ಎಂದು ಅವರು ಮನವಿ ಮಾಡಿದರು.

ಸಿ & ಡಿ ವೇಸ್ಟ್ ಸಾಗಿಸುವ ವಾಹನಗಳಿಗೆ ಜಿಪಿಎಸ್ ಕಡ್ಡಾಯ:

ನಗರದಲ್ಲಿ ಕಟ್ಟಡ ಭಗ್ನಾವಶೇಷಗಳನ್ನು (ಸಿ & ಡಿ ವೇಸ್ಟ್) ಸಾಗಿಸುವ ಎಲ್ಲಾ ವಾಹನಗಳಿಗೆ ಇನ್ನು ಮುಂದೆ *ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿ ಅಳವಡಿಸಬೇಕು. ಅಲ್ಲದೆ, ಸಿ & ಡಿ ವೇಸ್ಟ್ ಸಾಗಿಸುವ ವಾಹನಗಳು ಕಡ್ಡಾಯವಾಗಿ ನೋಂದಣಿಯಾಗಿರಬೇಕು. ನೋಂದಾಯಿತ ವಾಹನಗಳಿಗೆ ಮಾತ್ರ ತ್ಯಾಜ್ಯ ಸಾಗಿಸಲು ಅನುಮತಿ ನೀಡಲಾಗುವುದು. ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯವನ್ನು ಅಕ್ರಮವಾಗಿ ಸುರಿಯುವುದನ್ನು ತಡೆಯಲು ಸಾಧ್ಯವಾಗಲಿದೆ. ಈ ಸಂಬಂಧ ಜಿಬಿಎ, ಪೊಲೀಸ್ ಹಾಗೂ ಸಾರಿಗೆ ಇಲಾಖೆಗಳೊಂದಿಗೆ ಜಂಟಿ ಸಭೆ ನಡೆಸಿ, ಶೀಘ್ರದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ ಎಂದು ತಿಳಿಸಿದರು.

krishbyregowda
Watch | GBA ಅಧಿಕಾರಿಗಳ ಮೇಲೆ ದಾಳಿಗೆ ಹಣ ಸುಲಿಗೆ ಮಾಡುವವರು ಕಾರಣ: ಕೃಷ್ಣ ಬೈರೇಗೌಡ

ಸಿ & ಡಿ ವೇಸ್ಟ್ ವಿಲೇವಾರಿಗಾಗಿ ಸಂಸ್ಥೆ ನಿಯೋಜನೆ: ನಗರದಲ್ಲಿ ಕಟ್ಟಡ ಭಗ್ನಾವಶೇಷಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಅಧಿಕೃತ ಸಂಸ್ಥೆಯನ್ನು ನಿಯೋಜಿಸಲಾಗಿದೆ.ಪ್ರತಿ ಟನ್‌ಗೆ ₹760* ದರ ನಿಗದಿಪಡಿಸಲಾಗಿದ್ದು, ಇನ್ನು ಮುಂದೆ ಕಟ್ಟಡ ತ್ಯಾಜ್ಯವನ್ನು ನೋಂದಾಯಿತ ಸಂಸ್ಥೆಗಳಿಗೆ ಮಾತ್ರ ನೀಡಬೇಕು. ಸಂಬಂಧಿಸಿದ ಸಂಸ್ಥೆಗಳ ಸಂಪರ್ಕ ವಿವರಗಳನ್ನು ಸಹ ಸಾರ್ವಜನಿಕರಿಗೆ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com