

ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಗುರುವಾರ ಭಾರಿ ಮಳೆಯಾಗಿದೆ. ಕೊಡಗು, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗದ ಕೆಲವು ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಎಂಟು ಸೆಂ.ಮೀ.ಗಿಂತ ಹೆಚ್ಚು ಮಳೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಹವಾಮಾನ ವರದಿಯ ಪ್ರಕಾರ, ರಾಜ್ಯದ ಮಳೆ ಮಾಪಕ ಕೇಂದ್ರಗಳಲ್ಲಿ ಶೇ. 36 ರಷ್ಟು ಕಳೆದ 24 ಗಂಟೆಗಳಲ್ಲಿ ಕನಿಷ್ಠ 2.5 ಮಿಮೀ ಮಳೆಯಾಗಿದ್ದು, ದಕ್ಷಿಣ ಕನ್ನಡದ ಬಳಂಜದಲ್ಲಿ 103 ಮಿಮೀ ಮಳೆಯಾಗಿದೆ. ಹಾಸನ ಜಿಲ್ಲೆಯ ಹೊಗದಹಳ್ಳದಲ್ಲಿ 92 ಮಿಮೀ ಮಳೆಯಾಗಿದ್ದರೆ, ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 85 ಮಿಮೀ ಮಳೆಯಾಗಿದೆ.
ಜುಲೈ 31 ಮತ್ತು ಆಗಸ್ಟ್ 1 ರಂದು ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಆಗಸ್ಟ್ 1 ರಂದು ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದೆ.
ಜುಲೈ 31 ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ, ಹಾಸನ, ಕೊಡಗು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿಭಾರೀ ಮಳೆಯಾಗುವ ನಿರೀಕ್ಷೆಯಿದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಆಲಮಟ್ಟಿ, ನಾರಾಯಣಪುರ, ಘಟಪ್ರಭಾ, ತುಂಗಭದ್ರ, ಹಾರಂಗಿ, ಹೇಮಾವತಿ, ಕಬಿನಿ, ಲಿಂಗನಮಕ್ಕಿ ಮತ್ತು ಸೂಪಾ ಅಣೆಕಟ್ಟುಗಳಿಗೆ ಗುರುವಾರ ಒಳಹರಿವು ಹೆಚ್ಚಾಗಿದೆ.