

ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಹೆಸರು ತಳುಕು ಹಾಕಿಕೊಂಡಿದೆ. ಈ ಬಗ್ಗೆ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಬೇಕೆಂದು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಮತ್ತಿತರರು ಷಡ್ಯಂತ್ರ ಮಾಡಿದ್ದಾರೆ ಎಂದು ಮಾಸ್ಕ್ ಮ್ಯಾನ್ ಸಿ.ಎನ್. ಚಿನ್ನಯ್ಯ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಡೀ ಘಟನೆಯ ವಿವರವನ್ನು ವಿಷಾಧವಾಗಿ ಬಿಚ್ಚಿಟ್ಟಿದ್ದಾರೆ.
ಪ್ರಕಾಶ್ ರಾಜ್ ಎಂಬುವರು ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರು. ಒಂದು ದಿನ ಅಪ್ಪಿಕೊಳ್ಳುವುದಾಗಿ ಹೇಳಿದ್ದರು ಎಂದು ಅರ್ಜಿಯಲ್ಲಿ ಚಿನ್ನಯ್ಯ ಉಲ್ಲೇಖಿಸಿದ್ದಾರೆ.
ಈ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಸರು ಪ್ರಸ್ತಾಪ ಆದ ಕೂಡಲೇ ಎಲ್ಲರೂ ಕ್ರಿಮಿನಲ್ ಅಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಎಸ್ ಐ ಟಿ ಮುಖ್ಯಸ್ಥರ ಬಳಿ ಮಾಹಿತಿ ಕೇಳಿದೆ. ಅವರು ಉತ್ತರ ನೀಡಲಿ. ಮೊದಲು ನ್ಯಾಯಾಲಯಕ್ಕೆ ಉತ್ತರ ಕೊಡಬೇಕು. ಹಾಗಾಗಿ ನಾವು ಮಾಧ್ಯಮದಲ್ಲಿ ಬಂದು ಚರ್ಚೆ ಮಾಡ್ಲಿಕ್ಕೆ ಆಗೋದಿಲ್ಲ ಎಂದರು.
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ ಶೀಟ್ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನ್ಯಾಯಾಲಯ ಎಸ್ ಐ ಟಿ ಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ಎಸ್ ಐ ಟಿ ಚೀಫ್ ಕೋರ್ಟಿಗೆ ಉತ್ತರ ಕೊಡ್ತಾರೆ. ಇಲ್ಲಿ ಬಹಿರಂಗವಾಗಿ ಚರ್ಚೆ ಮಾಡಲು ಆಗುವುದಿಲ್ಲ. ಹಾಗಾಗಿ ನ್ಯಾಯಾಲಯಕ್ಕೆ ಉತ್ತರ ಕೊಟ್ಟ ನಂತರ ತಮಗೆ ತಿಳಿಸಲಾಗುವುದು ಎಂದರು
ಬೇರೆ ಬೇರೆ ಕಡೆಗಳಿಂದ ಹಣ ಸಂಗ್ರಹವಾಗಿದೆ ಎಂದು ಹೇಳಲಾಗಿದೆ. ಕೆಲವರ ಭಾಗಿದಾರಿಕೆ ಇದೆ ಅನ್ನುವಂತಹ ಆರೋಪವನ್ನು ಕೂಡ ಮಾಡಿದ್ದಾರೆ. ಸದ್ಯ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ ಅಂತ ಹೇಳ್ತಾ ಇದ್ದಾರೆ. ಮಾಧ್ಯಮದಲ್ಲಿ ಕೂಡ ಪ್ರಕಟಣೆ ಆಗಿದೆ. ಇದು ಸಣ್ಣ ಪ್ರಮಾಣದ ಹಣ ಅಲ್ಲ, 200 ಕೋಟಿ ಅಂತ ಹೇಳ್ತಾ ಇದ್ದಾರೆ. ಆದರೆ ಅದು ಎಷ್ಟು ನಿಜ ಎಷ್ಟು ಸುಳ್ಳೋ ಗೊತ್ತಿಲ್ಲ. ಈ ಹಿಂದೆ ಅದೇ ವ್ಯಕ್ತಿ ಧರ್ಮಸ್ಥಳದ ಬಗ್ಗೆ ಆರೋಪ ಮಾಡಿದ್ದರು. ಅವರು ಎಷ್ಟು ಸತ್ಯ ಹೇಳ್ತಾ ಇದ್ದಾರೆ? ಎಷ್ಟು ಸುಳ್ಳು ಹೇಳ್ತಾ ಇದ್ದಾರೆ ಅನ್ನೋದನ್ನು ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇನ್ನೂ ಮೈಕ್ರೋ ಫೈನಾನ್ಸ್ ಕಾಯ್ದೆ (Micro Finance Act) ಧರ್ಮಸ್ಥಳ ಸಂಘ ಪಾಲನೆ ಮಾಡ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಕಾಯ್ದೆ ಇಡೀ ರಾಜ್ಯಕ್ಕೆ ತಂದುರೋದು. ಹೊಸ ಕಾಯ್ದೆ ಬಂದ ಮೇಲೆ ಯಾರು ಉಲ್ಲಂಘನೆ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಒಂದು ವಾರ, 10 ದಿನಗಳಲ್ಲಿ ಮೀಟಿಂಗ್ ಮಾಡಿ ತಿಳಿಸ್ತೀನಿ. ಧರ್ಮಸ್ಥಳ ಸಂಘಕ್ಕೆ ಮಾತ್ರವಲ್ಲ ಆ ಕಾಯ್ದೆ ಅಲ್ಲ. ಎಲ್ಲರಿಗೂ ಅನ್ವಯ ಆಗುತ್ತದೆ. ಪಾಲನೆ ಮಾಡಬೇಕು. ದೂರು ಏನಿದೆ ಗೊತ್ತಿಲ್ಲ. ತನಿಖೆ ಆಗಬೇಕು. ಅದರ ಬಗ್ಗೆ ಪರಿಶೀಲನೆ ಮಾಡೋಣ ಎಂದಿದ್ದಾರೆ.
Advertisement