

ಬೆಂಗಳೂರು: ಧರ್ಮಸ್ಥಳದಲ್ಲಿ ಸಂತ್ರಸ್ತರ ಮೃತದೇಹಗಳನ್ನು ತಾನು ಹೂತಿದ್ದೇನೆ ಎಂದು ಹೇಳಿಕೊಂಡಿದ್ದ ಸ್ವಚ್ಛತಾ ಕಾರ್ಮಿಕ ಚಿನ್ನಯ್ಯ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ (SIT) ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಜೊತೆಗೆ, ಪ್ರಾಥಮಿಕ ತನಿಖಾ ವರದಿಯಲ್ಲಿ ಹೆಸರು ಉಲ್ಲೇಖಗೊಂಡಿರುವ ವ್ಯಕ್ತಿಗಳು, ಯೂಟ್ಯೂಬರ್‌ಗಳು ಹಾಗೂ ಇತರ ಸಂಚುಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು 2025ರ ಡಿಸೆಂಬರ್ 18ರಂದು ನೀಡಿದ್ದ ತನ್ನ ದೂರನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟಣ್ಣವರ ಅವರು ನಟ ಪ್ರಕಾಶ್ ರಾಜ್ ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಫೋನ್ ನ್ನು ತನ್ನ ಕೈಗೆ ನೀಡಿದ್ದರು ಎಂದು ಅರ್ಜಿದಾರ ಚಿನ್ನಯ್ಯ ಆರೋಪಿಸಿದ್ದಾರೆ. ತಮಿಳಿನಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಮಟ್ಟಣ್ಣವರ ಸೂಚಿಸಿದಂತೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದರೆ ನಿನ್ನನ್ನು ಬಂದು ನಾನು ತಬ್ಬಿಕೊಳ್ಳುತ್ತೇನೆ ಎಂದು ಹೇಳಿದ್ದರು ಎಂದು ಆರೋಪಿಸಿದ್ದಾನೆ.
ಇದೇ ವೇಳೆ, ಈ ಸಂಚು ಕಾರ್ಯರೂಪಕ್ಕೆ ತರಲು ಸುಮಾರು 200 ಕೋಟಿ ರೂಪಾಯಿಗಳ ‘ಪ್ಲಾನ್ ಬಜೆಟ್’ ಇದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ತಿಳಿಸಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಜೈಲಿಗೆ ಕಳುಹಿಸುವಲ್ಲಿ ಸಹಕರಿಸಿದರೆ 50 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಚಿನ್ನಯ್ಯ ಹೇಳಿದ್ದಾರೆ.
ಒಂದು ಹಂತದಲ್ಲಿ, ಇಂತಹ ಆಧಾರರಹಿತ ವ್ಯಾಜ್ಯವನ್ನು ಹೂಡಲು ಅವರ ಆದಾಯದ ಮೂಲ ಏನು ಎಂದು ಮಹೇಶ್ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ ಅವರನ್ನು ಪ್ರಶ್ನಿಸಿದ್ದಾಗಿ ಅರ್ಜಿದಾರ ಹೇಳಿದ್ದಾರೆ.
ಮೊದಲಿಗೆ ಅವರು ಆದಾಯದ ಮೂಲವನ್ನು ಬಹಿರಂಗಪಡಿಸಲು ನಿರಾಕರಿಸಿದ್ದರು. ನಂತರ ಕೇರಳದಿಂದ ಹಣಕಾಸಿನ ನೆರವು ದೊರೆಯುತ್ತಿದೆ ಎಂದು ತಿಳಿಸಿದ್ದು, ಚಿತ್ರದುರ್ಗದ ಮಹಿಳೆಯೊಬ್ಬಳು ಧರ್ಮಸ್ಥಳದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಹಣ ಕಳುಹಿಸುತ್ತಿದ್ದಾಳೆ ಎಂಬುದಾಗಿ ತಮ್ಮ ಪ್ರಮುಖ ಆದಾಯದ ಮೂಲವನ್ನು ಬಹಿರಂಗಪಡಿಸಿದ್ದರು ಎಂದು ಆತ ಆರೋಪಿಸಿದ್ದಾರೆ.
ತನ್ನ ದೂರಿನ ನಂತರ ಹಲವು ತಿಂಗಳುಗಳಾದರೂ ಸಂಚುಕೋರರ ವಿರುದ್ಧದ ಪ್ರಕರಣದಲ್ಲಿ ಎಸ್‌ಐಟಿ ಅಂತಿಮ ವರದಿ ಸಲ್ಲಿಸಿಲ್ಲ ಎಂದು ಆರೋಪಿಸಿರುವ ಚಿನ್ನಯ್ಯ, ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ಬೆಳ್ತಂಗಡಿಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ರಾಜ್ಯ ಸರ್ಕಾರ, ಎಸ್‌ಐಟಿ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿದರು.
2014ರಿಂದ 2024ರವರೆಗೆ ನಡೆದ ಬೆಳವಣಿಗೆಗಳನ್ನು, ತಮಿಳುನಾಡಿನಿಂದ ತನ್ನನ್ನು ಮರಳಿ ಧರ್ಮಸ್ಥಳಕ್ಕೆ ಕರೆತಂದ ವಿಚಾರ ಸೇರಿದಂತೆ, ವಿವರವಾಗಿ ಉಲ್ಲೇಖಿಸಿರುವ ಅರ್ಜಿದಾರ, ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆಯವರನ್ನು ಗುರಿಯಾಗಿಸಿಕೊಂಡು ರೂಪಿಸಲಾದ ಸಂಚಿನ ಹಿಂದೆ ವಿಠಲ್ ಗೌಡ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್, ಕೆಲವು ಯೂಟ್ಯೂಬರ್‌ಗಳು ಹಾಗೂ ಇತರರು ಇದ್ದಾರೆ ಎಂದು ಆರೋಪಿಸಿದ್ದಾರೆ.
ಸಂಚುಕೋರರ ಸೂಚನೆಯಂತೆ ಯೂಟ್ಯೂಬರ್‌ಗಳಿಗೆ ಹೇಳಿಕೆ ನೀಡುವಂತೆ ತನ್ನನ್ನು ಒತ್ತಾಯಿಸಲಾಯಿತು. ನ್ಯಾಯಾಲಯದ ಮುಂದೆ ಯಾವ ರೀತಿಯಲ್ಲಿ ಹೇಳಿಕೆ ನೀಡಬೇಕು ಎಂಬುದರ ಬಗ್ಗೆಯೂ ಪೂರ್ವಸಿದ್ಧತೆ ಮಾಡಿಕೊಡಲಾಗಿತ್ತು ಎಂದು ಚಿನ್ನಯ್ಯ ಆರೋಪಿಸಿದ್ದಾರೆ.
ಸ್ವಚ್ಛತಾ ಕಾರ್ಮಿಕನಾದ ತಾನು ತೀವ್ರ ಬೆದರಿಕೆ, ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ತನ್ನ ಅಳಿಯ ಹಾಗೂ ಅತ್ತೆಯ ಮಗನನ್ನು ಮಟ್ಟಣ್ಣವರ ಕರೆಸಿಕೊಂಡು, ಮಹೇಶ್ ತಿಮರೋಡಿಯ ನಿವಾಸದಲ್ಲಿ ಎರಡು ದಿನಗಳ ಕಾಲ ಇರಿಸಿದ್ದರು. ಅವರು ಇಬ್ಬರನ್ನೂ ಕೊಲೆ ಮಾಡುವುದಾಗಿ ಗಿರೀಶ್ ಮಟ್ಟಣ್ಣವರ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.
ಹಲವು ಸಂದರ್ಭಗಳಲ್ಲಿ ಗಿರೀಶ್ ಮಟ್ಟಣ್ಣವರ ಮತ್ತು ಮಹೇಶ್ ತಿಮರೋಡಿ ಇಬ್ಬರೂ ತನ್ನನ್ನು ನಿಂದಿಸಿ ಹಲ್ಲೆ ನಡೆಸಿದ್ದರು ಎಂದು ಆತ ಹೇಳಿದ್ದಾರೆ. ಅಸ್ಥಿಪಂಜರಗಳಿಗಾಗಿ ಶೋಧ ನಡೆಸಲು ತಾನು ಮೊದಲಿಗೆ ಸೂಚಿಸಿದ್ದ ಸ್ಥಳಗಳ ಬದಲು ಬೇರೆ ಸ್ಥಳಗಳನ್ನು ತೋರಿಸಿದ್ದಕ್ಕೆ ತನ್ನನ್ನು ಕೊಲೆ ಮಾಡುವುದಾಗಿ ಮಹೇಶ್ ತಿಮರೋಡಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.
ನಿರಂತರ ಹಾಗೂ ಬಲವಂತದ ಒತ್ತಡದ ನಡುವೆಯೂ, ತಾನು ವಾಸಿಸುತ್ತಿದ್ದ ಧರ್ಮಸ್ಥಳದ ವಿರುದ್ಧ ಸುಳ್ಳು ಸಾಕ್ಷ್ಯ ನೀಡಲು ಮನಸ್ಸಾಗಲಿಲ್ಲ ಎಂದು ಚಿನ್ನಯ್ಯ ಹೇಳಿದ್ದಾರೆ. ತನ್ನ ಸುಳ್ಳು ಹೇಳಿಕೆಯಿಂದ ಹೆಗ್ಗಡೆಯವರಿಗೆ ಹಾನಿಯಾಗಬಹುದು ಎಂಬ ಭಯದಿಂದ ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ತಿಳಿಸಿದ್ದಾರೆ.
ಆದರೆ ಗಿರೀಶ್ ಮಟ್ಟಣ್ಣವರ ಹಾಗೂ ಅವರ ಸಹಚರರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದು, ಹಲ್ಲೆ ನಡೆಸಿ, ನೀನು ಸತ್ತರೆ ನಮಗೆ ಬೇಕಾದ ಸುಳ್ಳು ಸಾಕ್ಷ್ಯ ನೀಡಲು ಯಾರೂ ಉಳಿಯುವುದಿಲ್ಲ ಎಂದು ಹೇಳಿದ್ದರು ಎಂದು ಆರೋಪಿಸಿದ್ದಾರೆ.
ನಂತರ ಈ ಸಂಚಿನ ಬಗ್ಗೆ ಎಸ್‌ಐಟಿಗೆ ಮಾಹಿತಿ ನೀಡಿದ್ದು, ಆ ಬಳಿಕ ತನ್ನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಲಾಯಿತು. ಅಲ್ಲಿ ರೂಪಿಸಲಾದ ಸಂಚಿನ ವಿವರಗಳನ್ನು ತಿಳಿಸಿದೆ. ನಂತರ ನನ್ನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು, ಎಫ್‌ಐಆರ್ ದಾಖಲಿಸಲಾಯಿತು. 2025ರ ಡಿಸೆಂಬರ್ 18ರಂದು ಬಿಡುಗಡೆಯಾದ ಬಳಿಕ, ಸಂಚುಕೋರರು ಹಾಗೂ ಅವರ ಸಹಚರರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಚಿನ್ನಯ್ಯ ಅರ್ಜಿಯಲ್ಲಿ ಆರೋಪಿಸಿದ್ದಾರೆ.
Advertisement