ಶೌಚಾಲಯಗಳಿಗೆ ಬಾಗಿಲಿಲ್ಲ, ಕೊಠಡಿಗಳಿಗೆ ಗಾಳಿ-ಬೆಳಕಿಲ್ಲ: ಮಂಡ್ಯ ಹಾಸ್ಟೆಲ್‌ಗಳ ದುಸ್ಥಿತಿ ಕಂಡು ಉಪ ಲೋಕಾಯುಕ್ತ ಗರಂ, ಕ್ರಮಕ್ಕೆ ಆದೇಶ..!

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಮೇ ತಿಂಗಳ ಅಂತ್ಯದಲ್ಲಿ ಮಂಡ್ಯದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ವಸತಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
Upa Lokayukta Justice B Veerappa interacts with students at Social Welfare Department hostel in Mandya during his surprise visit
ಮಂಡ್ಯದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗೆ ಹಠಾತ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.
Updated on

ಮಂಡ್ಯ: ಹರಿದ ಹಾಸಿಗೆಗಳು, ಬಾಗಿಲಿಲ್ಲದ ಶೌಚಾಲಯಗಳು, ಕಳಪೆ ಆಹಾರ, ಎರಡು ತಿಂಗಳಿಂದ ಸ್ಯಾನಿಟರಿ ಪ್ಯಾಡ್ ವಿತರಣೆ ಇಲ್ಲ..!

ಉತ್ತಮ ಶಿಕ್ಷಣದ ಕನಸು ಹೊತ್ತು ವಸತಿ ನಿಲಯಗಳಲ್ಲಿ ಉಳಿದುಕೊಂಡಿರುವ ನೂರಾರು ವಿದ್ಯಾರ್ಥಿನಿಯ ದಯನೀಯ ಸ್ಥಿತಿ ಇದು. ಈ ವಸತಿ ನಿಲಯಗಳಲ್ಲಿ ದುಸ್ಥಿತಿ ಕಂಡು ಉಪ ಲೋಕಾಯುಕ್ತರೇ ಬೆಚ್ಚಿಬಿದ್ದಿದ್ದಾರೆ.

ಮಂಡ್ಯದ ನಾಲ್ಕು ಸರ್ಕಾರಿ ಬಾಲಕಿಯರ ಹಾಸ್ಟೆಲ್‌ಗಳ ಸ್ಥಿತಿ ಕುರಿತು ದಿಢೀರ್ ಪರಿಶೀಲನೆ ನಡೆಸಿದ ವೇಳೆ ಹಲವು ಆಘಾತಕಾರಿ ಸಂಗತಿಗಳು ಬಹಿರಂಗವಾಗಿವೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಮೇ ತಿಂಗಳ ಅಂತ್ಯದಲ್ಲಿ ಮಂಡ್ಯದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ವಸತಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಂಕಷ್ಟಗಳನ್ನು ಕಂಡು ಸ್ವಯಂ ಪ್ರೇರಿತವಾಗಿ (ಸುವೋ ಮೋಟೋ) ನಾಲ್ಕು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡಿದ್ದಾರೆ.

ಪರಿಶೀಲನೆ ವೇಳೆ ವಸತಿ ನಿಲಯಗಳಲ್ಲಿ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅಗತ್ಯ ಪುಸ್ತಕಗಳ ಕೊರತೆ ಕಂಡುಬಂದಿದೆ. ಆಹಾರ ಪೂರೈಕೆ ನಿಗದಿತ ಪೌಷ್ಟಿಕ ಆಹಾರ ಪಟ್ಟಿಯಂತೆ ನಡೆಯುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಕಳಪೆಯಾಗಿದ್ದು, ಶೌಚಾಲಯಗಳು ದುರ್ವಾಸನೆಯಿಂದ ಕೂಡಿವೆ. ಅನೇಕ ಶೌಚಾಲಯಗಳ ಬಾಗಿಲುಗಳು ಮುರಿದುಹೋಗಿದ್ದು, ಕಿಟಕಿಗಳಿಗೆ ಜಾಲರಿಗಳಿಲ್ಲ.

Upa Lokayukta Justice B Veerappa interacts with students at Social Welfare Department hostel in Mandya during his surprise visit
ಲೋಕಾಯುಕ್ತ ದಾಳಿ: ಮಂಗಳೂರು ಸಹಾಯಕ ಡ್ರಗ್ ಕಂಟ್ರೋಲರ್ ಬಳಿ 3.37 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಇನ್ನೂ ಆತಂಕಕಾರಿ ಸಂಗತಿಯೆಂದರೆ, ನಾಲ್ಕು ವಸತಿ ನಿಲಯಗಳ ಪೈಕಿ ಎರಡು ಕಟ್ಟಡಗಳು ಮಾನವ ವಾಸಕ್ಕೆ ಯೋಗ್ಯವಲ್ಲ ಎಂಬುದು ಪರಿಶೀಲನೆ ವೇಳೆ ಗೊತ್ತಾಗಿದೆ. ಕಳೆದ ಎರಡು ತಿಂಗಳಿಂದ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಿಲ್ಲ ಎಂಬುದೂ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ವಾರ್ಡನ್‌, ಸಹಾಯಕ ನಿರ್ದೇಶಕ, ಉಪ ನಿರ್ದೇಶಕ, ತಾಲೂಕು ಆರೋಗ್ಯಾಧಿಕಾರಿ, ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರ ವಿರುದ್ಧ ಉಪ ಲೋಕಾಯುಕ್ತರು ಕ್ರಮ ಕೈಗೊಂಡಿದ್ದು, ತಕ್ಷಣವೇ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದ್ದಾರೆ. ವಾಸಕ್ಕೆ ಯೋಗ್ಯವಲ್ಲದ ಎರಡು ವಸತಿ ನಿಲಯಗಳನ್ನು ಉತ್ತಮ ಸೌಲಭ್ಯಗಳಿರುವ ಕಟ್ಟಡಗಳಿಗೆ ಸ್ಥಳಾಂತರಿಸುವಂತೆಯೂ ಆದೇಶಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಪೂರ್ವ ಮೆಟ್ರಿಕ್ ಬಾಲಕಿಯರ ವಸತಿ ನಿಲಯದಲ್ಲಿ 100 ವಿದ್ಯಾರ್ಥಿನಿಯರ ಸಾಮರ್ಥ್ಯವಿದ್ದರೂ 144 ವಿದ್ಯಾರ್ಥಿನಿಯರನ್ನು ವಸತಿ ಮಾಡಲಾಗಿದೆ. 144 ವಿದ್ಯಾರ್ಥಿನಿಯರಿಗೆ ಕೇವಲ ಒಂದು ಸಾವಿರ ಲೀಟರ್ ಸಾಮರ್ಥ್ಯದ ಸೌರ ಬಿಸಿನೀರು ಘಟಕ ಮಾತ್ರ ಲಭ್ಯವಿದೆ. ಅಲ್ಲದೆ, ವಸತಿ ನಿಲಯದ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ಮತ್ತು ಬೀದಿ ದೀಪಗಳ ಕೊರತೆ ಇರುವ ಬಗ್ಗೆ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ.

ಮಹರ್ಷಿ ವಾಲ್ಮೀಕಿ ಎಸ್‌ಟಿ ಸರ್ಕಾರಿ ಬಾಲಕಿಯರ ಸ್ನಾತಕೋತ್ತರ ವಸತಿ ನಿಲಯದ ಪರಿಸ್ಥಿತಿ ಇನ್ನೂ ಹದಗೆಟ್ಟಿದ್ದು, ಮೂರು ಅಂತಸ್ತಿನ ಬಾಡಿಗೆ ಕಟ್ಟಡದಲ್ಲಿ 97 ವಿದ್ಯಾರ್ಥಿನಿಯರನ್ನು ಇರಿಸಲಾಗಿದೆ. ಗಾಳಿ ಮತ್ತು ಬೆಳಕಿನ ಸಮರ್ಪಕ ವ್ಯವಸ್ಥೆಯೇ ಇಲ್ಲದ ಕಾರಣ ಕಟ್ಟಡವು ವಾಸಕ್ಕೆ ಯೋಗ್ಯವಲ್ಲ ಎಂದು ಉಪ ಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಬಾಲಕಿಯರ ವಸತಿ ನಿಲಯದಲ್ಲೂ ಇದೇ ರೀತಿಯ ಸಮಸ್ಯೆಗಳು ಕಂಡುಬಂದಿವೆ.

ವಿದ್ಯಾರ್ಥಿನಿಯರ ಪ್ರಕಾರ, ಪ್ರತಿ ಆರು ತಿಂಗಳಿಗೊಮ್ಮೆ ಅತಿಸಾರ (ಡಯೇರಿಯಾ) ಸಮಸ್ಯೆ ಎದುರಾಗುತ್ತಿದೆ. ಹಾಲಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೆರೆಸಿ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಅಲ್ಲದೆ, ‘ಕವಿತಾ’ ಎಂಬ ಮಹಿಳೆ ಪ್ರತಿದಿನ ವಸತಿ ನಿಲಯಕ್ಕೆ ಬಂದು ಹಾಜರಾತಿ ದಾಖಲೆಗಳನ್ನು ನಕಲಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ವಿದ್ಯಾರ್ಥಿನಿಯರು ಉಪ ಲೋಕಾಯುಕ್ತರ ಮುಂದೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿಯರೊಂದಿಗೆ ಮಾತುಕತೆ ನಡೆಸಿದ ನ್ಯಾಯಮೂರ್ತಿ ವೀರಪ್ಪ, ಉತ್ತಮ ಶಿಕ್ಷಣ ಪಡೆದು ಪ್ರಾಮಾಣಿಕ ನಾಗರಿಕರಾಗಿ ಬೆಳೆವಂತೆ ಸಲಹೆ ನೀಡಿದರು. ಜೊತೆಗೆ ಪೌಷ್ಟಿಕ ಆಹಾರ ಒದಗಿಸುವುದು, ತಿಂಗಳಿಗೊಮ್ಮೆ ಮಹಿಳಾ ವೈದ್ಯರ ಆರೋಗ್ಯ ತಪಾಸಣೆ ವ್ಯವಸ್ಥೆ ಕಲ್ಪಿಸುವುದು ಹಾಗೂ ಕಳೆದ ಎರಡು ವರ್ಷಗಳ ಪ್ರವೇಶಾತಿ ಮತ್ತು ಫಲಿತಾಂಶಗಳ ಮಾಹಿತಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com