

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದ ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ಇದೀಗ ಭಾರೀ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರೈತರ ಅಹವಾಲುಗಳನ್ನು ಆಲಿಸುತ್ತಿಲ್ಲ ಎಂದು ಆರೋಪಿಸಿ ನಿಖಿಲ್ ಕುಮಾರಸ್ವಾಮಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಹಸ್ತಕ್ಷೇಪಕ್ಕೆ ಆಗ್ರಹಿಸಿದ್ದಾರೆ.
ಬಡ, ದಲಿತ ಹಾಗೂ ಸಣ್ಣ ರೈತರ ಜಮೀನುಗಳನ್ನು ಬಲವಂತವಾಗಿ ಕಸಿದುಕೊಳ್ಳಲಾಗುತ್ತಿದೆ ಎಂದು ತಮ್ಮ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಗ್ರೇಟ್ ನಿಕೋಬಾರ್ ಅಭಿವೃದ್ಧಿ ಯೋಜನೆ ವಿರುದ್ದ ‘ಗ್ರೀನ್ ಓವರ್ ಗ್ರೀಡ್’ (ಹಸಿರಿನ ಮೇಲೆ ದುರಾಸೆ) ಎಂದು ದನಿ ಎತ್ತಿರುವ ರಾಹುಲ್ ಅವರು, ಅರಣ್ಯ ಮತ್ತು ಪರಿಸರ ರಕ್ಷಣೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಅವರದ್ದೇ ಪಕ್ಷದ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಉಪನಗರಕ್ಕೆ ಸ್ವಾಧೀನಪಡಿಸಿಕೊಳ್ಳುತ್ತಿದೆ. ಆ ಬಗ್ಗೆಯೂ ತಮ್ಮ ಸರ್ಕಾರದ ಕಿವಿ ಹಿಂಡಿ ಯೋಜನೆ ಕೈ ಬಿಡುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ರಾಹುಲ್ ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಹಾಗೂ ಪರಿಸರದ ಬಗ್ಗೆ ಕಾಳಜಿ ಇದ್ದರೆ, ಬಿಡದಿ ಉಪನಗರ ಯೋಜನೆ ಕೈ ಬಿಡುವಂತೆ ತಮ್ಮ ಖಾಸಾ ವ್ಯಕ್ತಿಯಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಿವಿಮಾತು ಹೇಳಬೇಕು. ಸಾಧ್ಯವಾದರೆ ಒಮ್ಮೆ ಬಿಡದಿಗೆ ಭೇಟಿ ನೀಡಿ, ಇಲ್ಲಿರುವುದು ಬರಡು ಭೂಮಿಯೊ ಅಥವಾ ಫಲವತ್ತಾದ ಭೂಮಿಯೊ ಎಂದು ಪರಿಶೀಲಿಸಬೇಕು’ ಎಂದಿದ್ದಾರೆ.
‘ತಮ್ಮ ಕ್ಷೇತ್ರದ ಜನರಿಗೆ ಯಾರೂ ತಮ್ಮ ಜಮೀನು ಮಾರಾಟ ಮಾಡಬೇಡಿ, ನಿಮ್ಮ ಭೂಮಿಗೆ ಚಿನ್ನದ ಬೆಲೆ ತಂದು ಕೊಡುವೆ ಎನ್ನುವ ಮೂಲಕ ಡಿ.ಕೆ. ಶಿವಕುಮಾರ್ ಅವರು, ರಾಮನಗರ ಮತ್ತು ಹಾರೋಹಳ್ಳಿ ತಾಲ್ಲೂಕು ಜನರ ವಿಷಯದಲ್ಲಿ ಯಾಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಇಲ್ಲಿರುವವರು ರೈತರಲ್ಲವೆ? ಅವರ ಕ್ಷೇತ್ರದವರು ಮಾತ್ರ ರೈತರೇ?’ ಎಂದು ಪ್ರಶ್ನಿಸಿದ್ದಾರೆ.
Advertisement