ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಗುಂಡಿಗಳು, ದೋಷಗಳನ್ನು ಪತ್ತೆಹಚ್ಚಲು ಎಐ-ಡ್ರೋನ್‌ಗಳ ಬಳಕೆ: NHAI

ಸಾಂಪ್ರದಾಯಿಕ ನಿರ್ವಹಣಾ ವಿಧಾನಗಳಿಂದ ಹೊರಬಂದು, ಡೇಟಾ ಆಧಾರಿತ ಮೇಲ್ವಿಚಾರಣೆಯ ಮೂಲಕ ಹೆದ್ದಾರಿಗಳ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಸಮಯಕ್ಕೆ ಸರಿಯಾಗಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದು ಇದರ ಉದ್ದೇಶವಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಕೃತಕ ಬುದ್ಧಿಮತ್ತೆ (AI), ಡ್ರೋನ್‌ಗಳು ಮತ್ತು ಸುಧಾರಿತ ವಿಶ್ಲೇಷಣಾ ತಂತ್ರಜ್ಞಾನಗಳನ್ನು ಬಳಸುವ ಪೂರ್ವಾನುಮಾನ ಆಸ್ತಿ ನಿರ್ವಹಣಾ ಚೌಕಟ್ಟನ್ನು (Predictive Asset Management Framework) ಅಳವಡಿಸಿಕೊಳ್ಳುತ್ತಿದೆ. ಇದರ ಮೂಲಕ ರಸ್ತೆ ಗುಂಡಿಗಳು ಹಾಗೂ ಇತರ ದೋಷಗಳನ್ನು ಗುರುತಿಸಲು ಸಾಧ್ಯವಾಗಲಿದೆ.

ಸಾಂಪ್ರದಾಯಿಕ ನಿರ್ವಹಣಾ ವಿಧಾನಗಳಿಂದ ಹೊರಬಂದು, ಡೇಟಾ ಆಧಾರಿತ ಮೇಲ್ವಿಚಾರಣೆಯ ಮೂಲಕ ಹೆದ್ದಾರಿಗಳ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಸಮಯಕ್ಕೆ ಸರಿಯಾಗಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದು ಇದರ ಉದ್ದೇಶವಾಗಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಮೇಲ್ಮೈಗಳ ಸ್ಥಿತಿಯನ್ನು ಪರಿಶೀಲಿಸಲು ನೆಟ್‌ವರ್ಕ್ ಸರ್ವೇ ವಾಹನಗಳನ್ನು (NSV) ನಿಯೋಜಿಸಿದೆ. ಇವು ರಸ್ತೆಯಲ್ಲಿ ಹೊಂಡ, ಗುಂಡಿಗಳ ಪರಿಸ್ಥಿತಿ, ಹಳ್ಳಗಳ ನಿರ್ಮಾಣ (rutting), ಬಿರುಕುಗಳು ಮತ್ತು ರಚನಾತ್ಮಕ ಹಾನಿಗಳನ್ನು ಮೌಲ್ಯಮಾಪನ ಮಾಡುತ್ತವೆ.

ಅದೇ ರೀತಿ, ಡ್ರೋನ್ ಅನಾಲಿಟಿಕ್ಸ್ ಮಾನಿಟರಿಂಗ್ ಸಿಸ್ಟಮ್‌ಗಳು (DAMS) ಹೆದ್ದಾರಿ ಆಸ್ತಿಗಳ ಡಿಜಿಟಲ್ ದಾಖಲೆಗಳನ್ನು ಸೃಷ್ಟಿಸಲು, ವಿವಿಧ ರಚನೆಗಳ ಮೇಲ್ವಿಚಾರಣೆ ಮಾಡಲು ಹಾಗೂ ಅತಿಕ್ರಮಣಗಳನ್ನು ಪತ್ತೆಹಚ್ಚಲು ಬಳಸಲಾಗುತ್ತಿದೆ.

ಫಾಲಿಂಗ್ ವೇಟ್ ಡಿಫ್ಲೆಕ್ಟೋಮೀಟರ್ (FWD) ಪರೀಕ್ಷೆಗಳ ಮೂಲಕ ರಸ್ತೆ ಮೇಲ್ಮೈಯ ಬಲವನ್ನು ಪರಿಶೀಲಿಸಿ, ದುರ್ಬಲಗೊಳ್ಳುತ್ತಿರುವ ರಸ್ತೆ ಭಾಗಗಳನ್ನು ಗುರುತಿಸಲಾಗುತ್ತಿದೆ.

ಇದರ ಜೊತೆಗೆ, ಕಾರ್ಯನಿರ್ವಹಣೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ AI ಆಧಾರಿತ ಡ್ಯಾಶ್‌ಕ್ಯಾಮ್ ಅನಾಲಿಟಿಕ್ಸ್ ಸೇವೆಗಳನ್ನು (DAS) ಜಾರಿಗೊಳಿಸಲಾಗುತ್ತಿದೆ. ಈ ತಂತ್ರಜ್ಞಾನವು ರಸ್ತೆ ಗುಂಡಿಗಳು, ಹಾನಿಗೊಳಗಾದ ಕ್ರ್ಯಾಶ್ ಬ್ಯಾರಿಯರ್‌ಗಳು, ದೋಷಪೂರಿತ ಬೆಳಕು ವ್ಯವಸ್ಥೆಗಳು ಮತ್ತು ನೀರು ಹರಿಯುವ ವ್ಯವಸ್ಥೆಯ ಸಮಸ್ಯೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುತ್ತದೆ.

ಈ ತಂತ್ರಜ್ಞಾನಗಳಿಂದ ಸಂಗ್ರಹವಾಗುವ ಎಲ್ಲಾ ಮಾಹಿತಿಯನ್ನು ಕೇಂದ್ರೀಕೃತ ಆಸ್ತಿ ಬುದ್ಧಿಮತ್ತೆ ವೇದಿಕೆಗೆ (Centralised Asset Intelligence Platform) ಸಂಯೋಜಿಸಲಾಗುತ್ತದೆ. ಇದರಿಂದ ಹೆದ್ದಾರಿಗಳ ಸ್ಥಿತಿಯ ಕುರಿತು ಏಕೀಕೃತ ಮತ್ತು ನಿರಂತರವಾಗಿ ನವೀಕರಿಸಲ್ಪಡುವ ಮಾಹಿತಿಯನ್ನು ಪಡೆಯಬಹುದು ಎಂದು NHAI ತಿಳಿಸಿದೆ.

ಐತಿಹಾಸಿಕ ದಾಖಲೆಗಳು ಹಾಗೂ ನೈಜ-ಸಮಯದ ಮೇಲ್ವಿಚಾರಣೆಯನ್ನು ಸಂಯೋಜಿಸುವ ಮೂಲಕ ರಸ್ತೆ ಹಾನಿಯನ್ನು ಮೊದಲೇ ಊಹಿಸಲು, ಅಪಾಯದಲ್ಲಿರುವ ರಸ್ತೆ ಭಾಗಗಳಿಗೆ ಆದ್ಯತೆ ನೀಡಲು ಹಾಗೂ ತಡೆಗಟ್ಟುವ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಯಸಿದೆ.

ಈ ಯೋಜನೆಯಿಂದ ಹೆದ್ದಾರಿಗಳ ಆಯುಷ್ಯ ಹೆಚ್ಚುವುದು, ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವುದು ಹಾಗೂ ರಸ್ತೆ ಬಳಕೆದಾರರ ಪ್ರಯಾಣ ಅನುಭವವನ್ನು ಉತ್ತಮಗೊಳಿಸುವುದು ಸಾಧ್ಯವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com