HSR ಲೇಔಟ್‌ನಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ಆರೋಪ: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ದೂರು ದಾಖಲು

ಪಾದಚಾರಿ ಮಾರ್ಗದ ಒಂದು ಭಾಗದಲ್ಲಿ ಸ್ಟೀಲ್ ಫ್ರೇಮ್ ರಚನೆಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಲ್ಲದೆ, ಸಾರ್ವಜನಿಕ ಜಾಗದ ಒಂದು ಭಾಗವನ್ನು ಖಾಸಗೀಕರಣಗೊಳಿಸಿದಂತಾಗಿದೆ.
The encroachment of footpath at Sector 6, HSR Layout, in Bengaluru.
ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಮನೆ.
Updated on

ಬೆಂಗಳೂರು: ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಅವರ ಪತಿ, ಮಾಜಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ವಿರುದ್ಧ ಪಾದಚಾರಿ ಮಾರ್ಗ ಮತ್ತು ಸಾರ್ವಜನಿಕ ಜಾಗ ಅತಿಕ್ರಮಣದ ಆರೋಪ ಕೇಳಿಬಂದಿದೆ.

ಈ ಸಂಬಂಧ ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಟಿ. ನರಸಿಂಹಮೂರ್ತಿ ಅವರು ಮಂಗಳವಾರ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ (BMTF)ಗೆ ಕ್ರಿಮಿನಲ್ ದೂರು ಸಲ್ಲಿಸಿದ್ದಾರೆ.

ಎಚ್‌ಎಸ್‌ಆರ್ ಲೇಔಟ್‌ನ ಸೆಕ್ಟರ್-6ರ ಎಂಸಿಎಚ್‌ಎಸ್ ಲೇಔಟ್‌ನ 1ನೇ ಬಿ ಮೇನ್ ರಸ್ತೆಯಲ್ಲಿರುವ 14ಸಿ ಸಂಖ್ಯೆಯ ಆಸ್ತಿಯ ಜಂಟಿ ಖಾತೆದಾರರಾಗಿರುವ ಶಾಲಿನಿ ರಜನೀಶ್ ಮತ್ತು ರಜನೀಶ್ ಗೋಯಲ್ ಅವರು ತಮ್ಮ ಆಸ್ತಿಯ ಮಂಜೂರಾದ ಭೂಮಿಯನ್ನು ಮೀರಿ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನ ಪ್ರಕಾರ, ಪಾದಚಾರಿ ಮಾರ್ಗದ ಒಂದು ಭಾಗದಲ್ಲಿ ಸ್ಟೀಲ್ ಫ್ರೇಮ್ ರಚನೆಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಲ್ಲದೆ, ಸಾರ್ವಜನಿಕ ಜಾಗದ ಒಂದು ಭಾಗವನ್ನು ಖಾಸಗೀಕರಣಗೊಳಿಸಿದಂತಾಗಿದೆ ಎಂದು ಆರೋಪಿಸಿದ್ದಾರೆ.

ಇದಲ್ಲದೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಸತಿ ಉದ್ದೇಶಕ್ಕಾಗಿ ಹಂಚಿಕೆ ಮಾಡಿದ್ದ ಆಸ್ತಿಯನ್ನು ನಿಯಮ ಉಲ್ಲಂಘಿಸಿ, ಬಾಡಿಗೆಗೆ ನೀಡಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಗ್ರೇಟರ್ ಬೆಂಗಳೂರು ಗವರ್ನನ್ಸ್ ಕಾಯ್ದೆ-2024ರ ಅಡಿಯಲ್ಲಿ ಸಾರ್ವಜನಿಕ ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ಅನಧಿಕೃತ ನಿರ್ಮಾಣ, ನಗರ ಪಾಲಿಕೆ ಆಸ್ತಿಯ ಅತಿಕ್ರಮಣ ಹಾಗೂ ಅನಧಿಕೃತ ಬಳಕೆಯ ಆರೋಪಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಅಡಿಯಲ್ಲಿ ಅತಿಕ್ರಮಣ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಸಂಬಂಧಿತ ವಿಧಿಗಳನ್ನು ಅನ್ವಯಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

The encroachment of footpath at Sector 6, HSR Layout, in Bengaluru.
ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ: ತನಿಖೆ ಕೋರಿ CS ಶಾಲಿನಿ ರಜನೀಶ್ ಪತ್ರ

ಆಸ್ತಿಯ ಗಡಿ ವಿವರಗಳನ್ನು ಒಳಗೊಂಡಿರುವ ಇ-ಖಾತೆ (ಫಾರ್ಮ್-ಎ), ಆಸ್ತಿಯ ಬಳಕೆಯನ್ನು "ಸ್ವಂತ ಮತ್ತು ಬಾಡಿಗೆ" ಎಂದು ದಾಖಲಿಸಿರುವ ದಾಖಲೆಗಳು ಹಾಗೂ ಪಾದಚಾರಿ ಮಾರ್ಗದ ಮೇಲೆ ನಿರ್ಮಿಸಿರುವುದಾಗಿ ಆರೋಪಿಸಲಾದ ಸ್ಟೀಲ್ ಫ್ರೇಮ್ ಛಾಯಾಚಿತ್ರಗಳನ್ನು ನರಸಿಂಹಮೂರ್ತಿ ದೂರಿನೊಂದಿಗೆ ಸಲ್ಲಿಸಿದ್ದಾರೆ.

“ಇದು ಸಾಮಾನ್ಯ ನಾಗರಿಕರು ಮಾಡಿದ ಅತಿಕ್ರಮಣವಲ್ಲ. ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪವಾಗಿದೆ.

ಕಾನೂನು ಪಾಲನೆ ಹಾಗೂ ಸಾರ್ವಜನಿಕ ಆಸ್ತಿಯ ರಕ್ಷಣೆಯಲ್ಲಿ ಮಾದರಿಯಾಗಬೇಕಾದವರೇ ಇಂತಹ ಆರೋಪ ಎದುರಿಸುತ್ತಿರುವುದು ಗಂಭೀರ ವಿಷಯ,” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಫ್‌ಐಆರ್ ದಾಖಲಿಸಿ ತನಿಖೆಗೆ ಒತ್ತಾಯ

ಈ ಸಂಬಂಧ ತಕ್ಷಣ ಎಫ್‌ಐಆರ್ ದಾಖಲಿಸಿ ಸ್ಥಳ ಪರಿಶೀಲನೆ, ಸರ್ವೇ ಹಾಗೂ ಸಮಗ್ರ ತನಿಖೆ ನಡೆಸುವಂತೆ ಬಿಎಂಟಿಎಫ್‌ಗೆ ಮನವಿ ಮಾಡಿದ್ದಾರೆ.

ಪಾದಚಾರಿ ಮಾರ್ಗದ ಮೇಲಿರುವುದಾಗಿ ಆರೋಪಿಸಲಾದ ಅನಧಿಕೃತ ರಚನೆಗಳನ್ನು ತೆರವುಗೊಳಿಸಿ ಸಾರ್ವಜನಿಕ ಬಳಕೆಗೆ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದಲ್ಲದೆ, ಬಿಡಿಎ ಹಂಚಿಕೆ ನಿಯಮಗಳ ಉಲ್ಲಂಘನೆ ಹಾಗೂ ಸೇವಾ ನಡವಳಿಕೆ ನಿಯಮಗಳ ಉಲ್ಲಂಘನೆ ಕುರಿತಂತೆ ಸಂಬಂಧಿತ ಅಧಿಕಾರಿಗಳಿಗೆ ಪ್ರಕರಣವನ್ನು ರವಾನಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಲಾಗಿದೆ.

ಆದಾಗ್ಯೂ, ಈ ಆರೋಪಗಳಿಗೆ ಸಂಬಂಧಿಸಿದಂತೆ ಶಾಲಿನಿ ರಜನೀಶ್ ಅಥವಾ ರಜನೀಶ್ ಗೋಯಲ್ ಅವರಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com