ಬೆಲೆ ಕುಸಿತದಿಂದ ಕಂಗೆಟ್ಟಿರುವ ರಾಜ್ಯದ ಮಾವು ಬೆಳೆಗಾರ: ನೆರವಿಗೆ ಧಾವಿಸುವಂತೆ ಶಿವರಾಜ್ ಸಿಂಗ್ ಚೌಹಾಣ್ ಗೆ HDK ಪತ್ರ

ಕರ್ನಾಟಕವು ಅತಿಹೆಚ್ಚು ಮಾವು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಸುಮಾರು 1.45 ಲಕ್ಷ ಹೆಕ್ಟೇರ್‌ಗಳಲ್ಲಿ ಮಾವು ಕೃಷಿ ಮಾಡಲಾಗುತ್ತಿದ್ದು, ಪ್ರಸಕ್ತ ಋತುವಿನಲ್ಲಿ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆಯಲಾಗಿದೆ.
H D Kumraswamy
ಹೆಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಬೆಲೆ ಕುಸಿತದಿಂದ ಕಂಗೆಟ್ಟಿರುವ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಕೃಷಿ ಸಚಿವರಿಗೆ ಪತ್ರವನ್ನು ಬರೆದು, ರೈತರ ಸಂಕಷ್ಟದ ಬಗ್ಗೆ ಚರ್ಚೆ ನಡೆಸಿದ ಸಚಿವ ಕುಮಾರಸ್ವಾಮಿ ಅವರು, 2026-27ರ ಋತುವಿನಲ್ಲಿ ರೈತರು ಎದುರಿಸುತ್ತಿರುವ ಬೆಲೆ ಕುಸಿತ ಸಂಕಷ್ಟವನ್ನು ತಗ್ಗಿಸಲು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (ಎಂಐಎಸ್) ಮೂಲಕ ನೆರವಾಗಬೇಕು ಹಾಗೂ ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಅಡಿಯಲ್ಲಿ ಬೆಂಬಲ ಬೆಲೆ ನೀಡಬೇಕು ಎಂದು ವಿನಂತಿಸಿದ್ದಾರೆ.

ಮಾರುಕಟ್ಟೆ ಬೆಲೆ ಕುಸಿತ ಮತ್ತು ಹೆಚ್ಚುತ್ತಿರುವ ಕೃಷಿ ವೆಚ್ಚಗಳಿಂದಾಗಿ ಮಾವು ಬೆಳೆಗಾರರು ಎದುರಿಸುತ್ತಿರುವ ಸವಾಲುಗಳನ್ನು ತಮ್ಮ ಪತ್ರದಲ್ಲಿ ಕೃಷಿ ಸಚಿವರ ಗಮನಕ್ಕೆ ತಂದಿರುವ ಸಚಿವ ಕುಮಾರಸ್ವಾಮಿ ಅವರು, ರೈತರು ಮತ್ತು ತೋಟಗಾರಿಕೆ ವಲಯದ ಹಿತಾಸಕ್ತಿಯ ದೃಷ್ಟಿಯಿಂದ ಈ ವಿಷಯವನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ ಕೋರಿದ್ದಾರೆ.

ಕರ್ನಾಟಕವು ಅತಿಹೆಚ್ಚು ಮಾವು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಸುಮಾರು 1.45 ಲಕ್ಷ ಹೆಕ್ಟೇರ್‌ಗಳಲ್ಲಿ ಮಾವು ಕೃಷಿ ಮಾಡಲಾಗುತ್ತಿದ್ದು, ಪ್ರಸಕ್ತ ಋತುವಿನಲ್ಲಿ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆಯಲಾಗಿದೆ. ಆದರೆ, ಬೆಲೆ ಕುಸಿತ ಹಾಗೂ ಪ್ರತಿಕೂಲಕರ ಹವಾಮಾನದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಹೆಚ್​ಡಿಕೆ ಕೃಷಿ ಸಚಿವರ ಗಮನ ಸೆಳೆದಿದ್ದಾರೆ.

H D Kumraswamy
'ಬಿಡದಿ ಟೌನ್ ಶಿಪ್ ಕುಮಾರಸ್ವಾಮಿ ಕೂಸು; ಪ್ರತಿಭಟಿಸುತ್ತಿರುವ ಬಹುತೇಕರು ಹಸಿರು ಶಾಲು ಹೊದ್ದಿರುವ JDS ಕಾರ್ಯಕರ್ತರು'

ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ತುಮಕೂರು ಮತ್ತು ಹಾವೇರಿಯಂತಹ ಜಿಲ್ಲೆಗಳಲ್ಲಿ ಸಾವಿರಾರು ರೈತ ಕುಟುಂಬಗಳು ಮಾವು ಕೃಷಿಯನ್ನು ಅವಲಂಬಿಸಿದೆ. ಇದು ಅತ್ಯಂತ ಪ್ರಮುಖ ವಾಣಿಜ್ಯ ತೋಟಗಾರಿಕಾ ಬೆಳೆಯಾಗಿದೆ.

ಮಾರುಕಟ್ಟೆಯ ಏರಿಳಿತಗಳು ಮತ್ತು ಅತಿಯಾದ ಪೂರೈಕೆ ಪರಿಸ್ಥಿತಿಗಳಿಂದಾಗಿ ಅನೇಕ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಲಾಭದಾಯಕ ಮಟ್ಟಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ತಮ್ಮ ಪತ್ರದಲ್ಲಿ ಕೇಂದ್ರ ಸಚಿವರು ಉಲ್ಲೇಖಿಸಿದ್ದಾರೆ.

ಕೋಲಾರದಂತಹ ತೋಟಗಾರಿಕೆ ಅವಲಂಬಿತ ಜಿಲ್ಲೆಗಳಲ್ಲಿ ಇಂತಹ ನೆರವು ಅತಿಹೆಚ್ಚು ಪ್ರಯೋಜನಕಾರಿ ಆಗುತ್ತದೆ. ಅಲ್ಲಿ ಮಾವು ಕೃಷಿ ಗ್ರಾಮೀಣ ಆರ್ಥಿಕತೆಯ ಪ್ರಮುಖ ಅಂಶವಾಗಿದೆ ಎಂದಿರುವ ಕೇಂದ್ರ ಸಚಿವರು, ಕರ್ನಾಟಕ ಸರ್ಕಾರದ ಸಮನ್ವಯದೊಂದಿಗೆ ಈ ಪ್ರಸ್ತಾವನೆಯನ್ನು ಪರಿಶೀಲಿಸಬೇಕು. ಪಿಡಿಪಿಎಸ್ ಚೌಕಟ್ಟಿನ ಅಡಿಯಲ್ಲಿ ಮಾವು ಬೆಳೆಗಾರರಿಗೆ ಸೂಕ್ತ ಬೆಂಬಲವನ್ನು ನೀಡುವ ಬಗ್ಗೆ ಪರಿಗಣಿಸಲು ಮತ್ತು ಅಗತ್ಯ ಆಡಳಿತಾತ್ಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಪ್ರಾರಂಭಿಸಲು ಕೃಷಿ ಸಚಿವಾಲಯ ಮುಂದಾಗಬೇಕು ಎಂದು ಸಚಿವರು ಕೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com