ತಮಿಳುನಾಡು ಸರ್ಕಾರದ ನಿರ್ಣಯ ಪರಿಶೀಲಿಸಿ ಪ್ರತಿಕ್ರಿಯೆ ನೀಡುತ್ತೇನೆ: ಮೇಕೆದಾಟು ವಿರೋಧಕ್ಕೆ CM ಡಿ.ಕೆ ಶಿವಕುಮಾರ್; Video

ಮೊದಲು ಆ ನಿರ್ಣಯವನ್ನು ನಾನು ಪರಿಶೀಲಿಸಬೇಕು. ಕೇವಲ ನಿಮ್ಮ ಹೇಳಿಕೆಯನ್ನು ಆಧರಿಸಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅವರ ನಿಲುವು ಏನೆಂಬುದನ್ನು ನೋಡಿದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
D K Shivakumar
ಡಿ ಕೆ ಶಿವಕುಮಾರ್
Updated on

ಬೆಂಗಳೂರು: ತಮಿಳುನಾಡು ವಿಧಾನಸಭೆಯು ಕರ್ನಾಟಕ ಸರ್ಕಾರದ ಮೇಕೆದಾಟು ಅಣೆಕಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ಏಕಮತದಿಂದ ಅಂಗೀಕರಿಸಿರುವ ನಿರ್ಣಯವನ್ನು ಪರಿಶೀಲಿಸಿದ ಬಳಿಕವೇ ಈ ಬಗ್ಗೆ ವಿವರವಾದ ಪ್ರತಿಕ್ರಿಯೆ ನೀಡುವುದಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ನಿನ್ನೆ ಮಾತನಾಡಿದ ಅವರು, ಮೊದಲು ಆ ನಿರ್ಣಯವನ್ನು ನಾನು ಪರಿಶೀಲಿಸಬೇಕು. ಕೇವಲ ನಿಮ್ಮ ಹೇಳಿಕೆಯನ್ನು ಆಧರಿಸಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅವರ ನಿಲುವು ಏನೆಂಬುದನ್ನು ನೋಡಿದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ, ತಮಿಳು ನಾಡು ವಿಧಾನಸಭೆಯು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಮಂಡಿಸಿದ ಮೇಕೆದಾಟು ಅಣೆಕಟ್ಟು ಯೋಜನೆ ವಿರೋಧಿ ನಿರ್ಣಯವನ್ನು ಏಕಮತದಿಂದ ಅಂಗೀಕರಿಸಿದೆ. ಈ ನಿರ್ಣಯಕ್ಕೆ ಕಾಂಗ್ರೆಸ್ ಹಾಗೂ ವಿಸಿಕೆ ಸೇರಿದಂತೆ ಎಲ್ಲ ಪಕ್ಷಗಳ ಬೆಂಬಲ ದೊರೆತಿದ್ದು, ಯೋಜನೆಗೆ ವಿರೋಧವಾಗಿ ರಾಜ್ಯ ವಿಧಾನಸಭೆಯ ಒಗ್ಗಟ್ಟಿನ ನಿಲುವು ವ್ಯಕ್ತವಾಗಿದೆ.

ಈ ನಿರ್ಣಯದಲ್ಲಿ, ಮೇಕೆದಾಟು ಯೋಜನೆಯು ಕಾವೇರಿ ಜಲ ವಿವಾದ ನ್ಯಾಯಾಧೀಕರಣ ನೀಡಿದ ಅಂತಿಮ ತೀರ್ಪು ಹಾಗೂ ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಸಂಬಂಧಿತ ನದಿ ತೀರದ ರಾಜ್ಯಗಳ ಒಪ್ಪಿಗೆ ಪಡೆಯದೆ ಹಾಗೂ ಕೇಂದ್ರ ಸರ್ಕಾರದ ಅನುಮೋದನೆ ಇಲ್ಲದೆ ಯೋಜನೆಯನ್ನು ಮುಂದುವರಿಸುವುದು ಸ್ವೀಕಾರಾರ್ಹವಲ್ಲ ಎಂದು ತಿಳಿಸಲಾಗಿದೆ.

ನಿರ್ಣಯದಲ್ಲಿ, ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರ ನಡೆಸುತ್ತಿರುವ ಏಕಪಕ್ಷೀಯ ಪ್ರಯತ್ನಕ್ಕೆ ಈ ಸದನ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಇದು ಯಾವುದೇ ರೀತಿಯಲ್ಲೂ ಅಂಗೀಕಾರಾರ್ಹವಲ್ಲ ಎಂದು ಹೇಳಲಾಗಿದೆ.

ಇದಲ್ಲದೆ, ಮೇಕೆದಾಟು ಯೋಜನೆಗೆ ತಾಂತ್ರಿಕ ಮತ್ತು ಪರಿಸರ ಅನುಮತಿ ಸೇರಿದಂತೆ ಯಾವುದೇ ರೀತಿಯ ಅನುಮೋದನೆ ನೀಡಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.

D K Shivakumar
ಕರ್ನಾಟಕದ ಮೇಕೆದಾಟು ಯೋಜನೆಗೆ ವಿರೋಧ: ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕಾರ; Video

ಕರ್ನಾಟಕ ಸರ್ಕಾರ ಪ್ರಸ್ತಾಪಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ರೀತಿಯ ಅನುಮೋದನೆ ಅಥವಾ ತಾಂತ್ರಿಕ ಹಾಗೂ ಪರಿಸರ ಸಂಬಂಧಿತ ಅನುಮತಿಗಳನ್ನು ನೀಡಬಾರದು ಎಂದು ಈ ಸದನ ಆಗ್ರಹಿಸುತ್ತದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಪ್ರದೇಶದಲ್ಲಿ ನೀರಿನ ಕೊರತೆಯನ್ನು ಉಲ್ಲೇಖಿಸಿರುವ ನಿರ್ಣಯವು, ಕಾವೇರಿ ಜಲ ವಿವಾದ ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್ ಈಗಾಗಲೇ ಕಾವೇರಿ ನದಿ ಕಣಿವೆ ನೀರಿನ ಕೊರತೆಯಿರುವ (deficit basin) ಪ್ರದೇಶ ಎಂದು ಅಭಿಪ್ರಾಯಪಟ್ಟಿವೆ ಎಂದು ತಿಳಿಸಿದೆ. ಲಭ್ಯವಿರುವ ಸಂಪೂರ್ಣ ನೀರನ್ನು ಈಗಾಗಲೇ ನದಿ ತೀರದ ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಕಾವೇರಿ ಕಣಿವೆಯಲ್ಲಿ ಹೊಸ ಯೋಜನೆಗಳನ್ನು ಕೈಗೊಳ್ಳುವುದು ಅಥವಾ ಹೆಚ್ಚುವರಿ ನೀರನ್ನು ಬಳಸುವುದು ಸಾಧ್ಯವಿಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com