ಕಳಪೆ ರಸ್ತೆ ಕಾಮಗಾರಿ: ಸಹಾಯಕ ಎಂಜಿನಿಯರ್ ಅಮಾನತು, ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಎಚ್ಚರಿಕೆ..!

ಶನಿವಾರ ಸಂಪಂಗಿರಾಮನಗರ ಪ್ರದೇಶದಲ್ಲಿ ನಡೆದ ರಸ್ತೆ ಡಾಂಬರೀಕರಣ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಚಿವರು, ಬೆಂಗಳೂರು ಕೇಂದ್ರ ನಗರ ನಿಗಮ (BCCC) ಆಯುಕ್ತರಿಗೆ ತಕ್ಷಣ ಪರಿಶೀಲನೆ ನಡೆಸುವಂತೆ ಸೂಚಿಸಿದರು.
Krishna byregowda
ಸಚಿವ ಕೃಷ್ಣ ಬೈರೇಗೌಡ
Updated on

ಬೆಂಗಳೂರು: ನಗರದ ರಸ್ತೆಗಳಲ್ಲಿ ಗುಂಡಿ ಮುಚ್ಚುವಿಕೆ ಹಾಗೂ ಡಾಂಬರೀಕರಣ ಕಾಮಗಾರಿಗಳ ಕಳಪೆ ಗುಣಮಟ್ಟದ ಬಗ್ಗೆ ಇತ್ತೀಚೆಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಇದೀಗ ಮತ್ತೊಂದು ಕಠಿಣ ಕ್ರಮ ಕೈಗೊಂಡಿದ್ದಾರೆ.

ಕಳಪೆ ರಸ್ತೆ ಕಾಮಗಾರಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಸಹಾಯಕ ಎಂಜಿನಿಯರ್‌ರನ್ನು ಅಮಾನತುಗೊಳಿಸಿದ್ದಾರೆ.

ಶನಿವಾರ ಸಂಪಂಗಿರಾಮನಗರ ಪ್ರದೇಶದಲ್ಲಿ ನಡೆದ ರಸ್ತೆ ಡಾಂಬರೀಕರಣ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಚಿವರು, ಬೆಂಗಳೂರು ಕೇಂದ್ರ ನಗರ ನಿಗಮ (BCCC) ಆಯುಕ್ತರಿಗೆ ತಕ್ಷಣ ಪರಿಶೀಲನೆ ನಡೆಸುವಂತೆ ಸೂಚಿಸಿದರು.

ಪರಿಶೀಲನೆಯ ವೇಳೆ ಕಾಮಗಾರಿ ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯ ಮೇಲ್ವಿಚಾರಣೆ ಹೊಣೆ ಹೊತ್ತಿದ್ದ ಸಹಾಯಕ ಎಂಜಿನಿಯರ್ ಪೂಜಾರಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.

Krishna byregowda
ಬೆಂಗಳೂರು: ಜನ ಎಲ್ಲೆಂದರಲ್ಲಿ ಕಸ ಎಸೆದರೆ ದುಪ್ಪಟ್ಟು ದಂಡ! ಕಸ ಸುರಿದವರಿಂದಲೇ ತೆರವು..

ಈ ಕುರಿತು ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, “ಇಂತಹ ಕ್ರಮವನ್ನು ಆಗಾಗ್ಗೆ ಕೈಗೊಳ್ಳುವ ಪರಿಸ್ಥಿತಿ ಬರಬಾರದು ಎಂದು ನಾನು ಆಶಿಸುತ್ತೇನೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸದಿದ್ದರೆ, ಇಂತಹ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು” ಎಂದು ಎಚ್ಚರಿಕೆ ನೀಡಿದರು.

ಅಮಾನತು ಆದೇಶದ ಪ್ರಕಾರ, ರಸ್ತೆ ಡಾಂಬರೀಕರಣ ಕಾಮಗಾರಿಯ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದ ಸಹಾಯಕ ಎಂಜಿನಿಯರ್ ಪೂಜಾರಪ್ಪ ಅವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದು ಕಂಡುಬಂದಿದೆ.

ಡಾಂಬರ್ ಮಿಶ್ರಣದ ಸರಿಯಾದ ಪ್ರಮಾಣ ಹಾಗೂ ರಸ್ತೆಯ ದಪ್ಪವನ್ನು ಖಚಿತಪಡಿಸದೇ ನಿರ್ಲಕ್ಷ್ಯ ವಹಿಸಿರುವುದರಿಂದ ನಿಗಮಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ನಗರದ ರಸ್ತೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿರುವ ಹಿನ್ನೆಲೆ, ಇಂತಹ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂಬ ಸಂದೇಶವನ್ನು ಸರ್ಕಾರ ಈ ಕ್ರಮದ ಮೂಲಕ ರವಾನಿಸಿದೆ.

ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com