ಬಿಡದಿ ಟೌನ್ ಶಿಪ್ ವಿವಾದ: ರಾಜಕೀಯ ಮಾಡುವ ಬದಲು ರಚನಾತ್ಮಕ ಸಲಹೆ ನೀಡಿ; HDKಗೆ ಪರಮೇಶ್ವರ್ ಕಿವಿಮಾತು

ಕೆಲವು ರೈತರು ನಮ್ಮದು ಒಣ ಭೂಮಿ ಇದೆ, ಇದರಿಂದ ನಮಗೆ ಅನುಕೂಲ ಇಲ್ಲ, ಈ ಭೂಮಿಯನ್ನು ನಾವು ಕೊಡಲು ಸಿದ್ಧರಿದ್ದೇವೆ. ನಮಗೆ ಹೆಚ್ಚು ಹಣ ಕೊಡಿ ಎಂದು ಕೇಳುತ್ತಾರೆ. ನಾವು ಅಂಥವರಿಗೆ ಅವರ ಬೇಡಿಕೆ ನೋಡಿ ಸಮಾಧಾನಕರ ಪರಿಹಾರದ ಹಣ ನೀಡಿದರೆ ಅವರು ಬೇರೆ ಕಡೆ ಜಮೀನು ತೆಗೆದುಕೊಳ್ಳುತ್ತಾರೆ.
Dr G Parameshwar
ಡಾ ಜಿ ಪರಮೇಶ್ವರ್
Updated on

ಬೆಂಗಳೂರು: ಪ್ರಸ್ತಾವಿತ ಬಿಡದಿ ಪಟ್ಟಣ ಯೋಜನೆಯನ್ನು "ರಾಜಕೀಯಗೊಳಿಸುವ" ಬದಲು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ರಚನಾತ್ಮಕ ಸಲಹೆಗಳನ್ನು ನೀಡಬೇಕು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಜಿ ಸಚಿವ ಹೆಚ್.‌ಕೆ.ಪಾಟೀಲ್‌ ಅವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ ನಂತರ ಅವರು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಬಿಡದಿ ಟೌನ್‌ ಶಿಪ್‌ ಯೋಜನೆಯ ಮೂಲಕ ರಾಜ್ಯ ಸರ್ಕಾರವು ಆ ಭಾಗದ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ರೈತರ ಅಹವಾಲು ಆಲಿಸಿ, ಸಮಾಧಾನ ಪಡಿಸುವ ಜೊತೆಗೆ ಸಂಧಾನದ ಮೂಲಕ ಯೋಜನೆ ಜಾರಿ ಮಾಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದರು

ಕೆಲವು ರೈತರು ನಮ್ಮದು ಒಣ ಭೂಮಿ ಇದೆ, ಇದರಿಂದ ನಮಗೆ ಅನುಕೂಲ ಇಲ್ಲ, ಈ ಭೂಮಿಯನ್ನು ನಾವು ಕೊಡಲು ಸಿದ್ಧರಿದ್ದೇವೆ. ನಮಗೆ ಹೆಚ್ಚು ಹಣ ಕೊಡಿ ಎಂದು ಕೇಳುತ್ತಾರೆ. ನಾವು ಅಂಥವರಿಗೆ ಅವರ ಬೇಡಿಕೆ ನೋಡಿ ಸಮಾಧಾನಕರ ಪರಿಹಾರದ ಹಣ ನೀಡಿದರೆ ಅವರು ಬೇರೆ ಕಡೆ ಜಮೀನು ತೆಗೆದುಕೊಳ್ಳುತ್ತಾರೆ. ಅವರು ಕೃಷಿಯಲ್ಲಿ ಮುಂದುವರೆಯುತ್ತಾರೆ. ನಾವು ಈ ದೃಷ್ಟಿಕೋನದಲ್ಲಿ ಮುಂದುವರೆಯುತ್ತಿದ್ದೇವೆ ಎಂದು ತಿಳಿಸಿದರು.

ಬಿಡದಿ ಟೌನ್‌ ಶಿಪ್‌ ವಿಚಾರದಲ್ಲಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ, 26ರಂದು ಬೆಳಿಗ್ಗೆ 11 ಗಂಟೆಗೆ ನಮ್ಮ ಸಚಿವರು ಮತ್ತು ಅಧಿಕಾರಿಗಳೆಲ್ಲ ವಿಧಾನಸೌಧದಲ್ಲಿ ಇರುತ್ತೇವೆ, ನಿಮಗೆ ಯಾರೆಲ್ಲ ಅಧಿಕಾರಿಗಳೆಲ್ಲರ ಸಹಕಾರ ಬೇಕು. ಅವರ ಜೊತೆ ಬನ್ನಿ, ಸಾಧಕ - ಬಾಧಕ ಚರ್ಚೆ ಮಾಡೋಣ ಎಂದು ಕರೆದಿದ್ದಾರೆ.

Dr G Parameshwar
ಬಿಡದಿ ಟೌನ್​​ಶಿಪ್ ಕದನ: HDK ಸವಾಲು ಸ್ವೀಕರಿಸಿದ CM; ಬೈರಮಂಗಲ ಬೇಡ, ವಿಧಾನಸೌಧಕ್ಕೆ ಬನ್ನಿ- ಡಿಕೆಶಿ ಪಂಥಾಹ್ವಾನ!

ಆ ಪತ್ರವನ್ನು ನಾನು ನೋಡಿದ್ದೀನಿ. ಅದಕ್ಕೆ ಅವರು ಪ್ರತಿಯಾಗಿ ಉತ್ತರ ಕೊಟ್ಟಿದ್ದಾರೆ. ನೀವು ಬಿಡದಿಗೆ ಬನ್ನಿ, ಅಲ್ಲಿನ ರೈತರನ್ನು, ಸಂಬಂಧಪಟ್ಟವನ್ನುಕರೀತೀವಿ, ಅಲ್ಲೇ ಚರ್ಚೆ ಮಾಡೋಣ ಎಂದು ಕರೆದಿದ್ದಾರೆ. ಆದರೆ 26ಕ್ಕೆ ಬೇಡ, ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ. 27ಕ್ಕೆ ಬನ್ನಿಎಂದು ಕುಮಾರಸ್ವಾಮಿ ಅವರು ಕರೆದಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿ ಏನು ತೀರ್ಮಾನ ತಗೋತಾರೆ ಎಂಬುದನ್ನು ನೋಡಬೇಕು ಎಂದರು.

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ ಈಗಾಗಲೇ ಸಂಪುಟದಲ್ಲಿ ಚರ್ಚೆ ಆಗಿದೆ. ಬಿಡಿಎ, ಹುಡ್ಕೊದಿಂದ ಯಾವ ರೀತಿ ಅನುದಾನ ಒದಗಿಸಬೇಕು ಎಂಬ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಲಾಗಿದೆ. ಈ ಯೋಜನೆ ಈಗ ರಾಜಿಕೀಯ ತಿರುವು ಪಡೆಯುತ್ತಿರುವುದರಿಂದ ಇದನ್ನು ರಾಜಕೀಯದಿಂದ ದೂರ ಇಟ್ಟು ಯಾವ ರೀತಿ ಯೋಜನೆ ಜಾರಿ ಮಾಡಬೇಕು ಎನ್ನುವ ಬಗ್ಗೆ ಸರ್ಕಾರ, ಮುಖ್ಯಮಂತ್ರಿ ಎಲ್ಲರೂ ಸೇರಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ಕಾಂಗ್ರೆಸ್‌ ನಾಯಕರ ಹಳೆಯ ಹೇಳಿಕೆಗಳನ್ನು ತೋರಿಸಿ, ರಾಜಕೀಯ ಮಾಡಲು ಹೊರಟಿದ್ದಾರೆ. ಅದನ್ನು ಬಿಟ್ಟು ಬಂದು ಅವರು ಸಲಹೆ ನೀಡಲಿ. ಆಗ ನಾವು ಸಹ ಅವರ ಅನುಮಾನಗಳಿಗೆ, ಆರೋಪಗಳಿಗೆ ಸೂಕ್ತ ಉತ್ತರ ನೀಡುತ್ತೇವೆ. ಈ ತೀರ್ಮಾನ ಕೈಗೊಳ್ಳಲು ಕಾರಣವೇನು ಎಂಬುದನ್ನು ಸರ್ಕಾರ ಕೊಡಲು ಸಿದ್ಧವಿದೆ. ಆದರೆ ಕುಮಾರಸ್ವಾಮಿ ಅವರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರೆ ರಾಜಕೀಯ ಕಾರಣಕ್ಕಾಗಿ ಮಾಡುತ್ತೀರಿ ಎಂಬುದನ್ನು ತೋರಿಸುತ್ತದೆ ಎಂದು ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com