

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತೀಯ ಜನತಾ ಪಾರ್ಟಿ ನಡುವಿನ ಸಂಬಂಧವನ್ನು ಅತ್ಯಂತ ತೀಕ್ಷ್ಣವಾದ ಪದಗಳಲ್ಲಿ ವಿಶ್ಲೇಷಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೃಹಸಚಿವ ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಹಾಕಿ ವಿಪಕ್ಷ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ ಎಂದು ಲೇವಡಿ ಮಾಡಿರುವ ಗೃಹ ಸಚಿವ, ಬಿಜೆಪಿಯು ಕೇವಲ ಆರ್‌ಎಸ್‌ಎಸ್‌ನ ರಾಜಕೀಯ ಸಾಧನವಾಗಿ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
RSS ಅನ್ನು ಯಾರೇ ಪ್ರಶ್ನಿಸಿದರೂ, ಬಿಜೆಪಿ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ಯಾವ ಕೊಡುಗೆಯನ್ನೂ ನೀಡದ ಸಂಘಟನೆ ಇಂದು ದೇಶಕ್ಕೆ ದೇಶಭಕ್ತಿಯ ಪಾಠ ಹೇಳುವುದೇಕೆ ಎಂದು ಸಂಘಟನೆಯನ್ನು ಪ್ರಶ್ನಿಸಿದರೆ ಬಿಜೆಪಿ ಬುಸುಗುಡುತ್ತದೆ.
ನಾಗಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಲು 52 ವರ್ಷ ಏಕೆ ಬೇಕಾಯಿತು ಎಂದು RSSನ ಪ್ರಶ್ನಿಸಿದರೆ - ಬಿಜೆಪಿ ಬುಸುಗುಡುತ್ತದೆ.ದೇಶದ ಸರ್ವೋಚ್ಚ ಕಾನೂನಾದ ಸಂವಿಧಾನಕ್ಕೆ ಆರ್‌ಎಸ್‌ಎಸ್ ಎಷ್ಟು ನಿಷ್ಠೆ ತೋರುತ್ತದೆ ಎಂಬ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಆರ್‌ಎಸ್‌ಎಸ್ ನಾಯಕರು ನಿಜವಾಗಿಯೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಭಾರತದ ಸಂವಿಧಾನಕ್ಕೆನಿಷ್ಠೆ ತೋರುತ್ತಾರೋ ಅಥವಾ ತಾವು ಬರೆಯಬೇಕಿತ್ತು ಎಂದು ಸದಾ ಬಯಸುವ ಆಂತರಿಕ ನಿಯಮಾವಳಿಗಳಿಗೆ ಪ್ರಾಮುಖ್ಯತೆ ನೀಡುತ್ತಾರೋಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ರಾಷ್ಟ್ರಧ್ವಜದ ವಿಚಾರವನ್ನು ಮುನ್ನೆಲೆಗೆ ತಂದಿರುವ ಖರ್ಗೆ, ನಾಗಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಸಂಘಟನೆಗೆ ಬರೋಬ್ಬರಿ 52 ವರ್ಷಗಳ ಸುದೀರ್ಘ ಸಮಯ ಏಕೆ ಬೇಕಾಯಿತು ಎಂದು ಪ್ರಶ್ನಿಸಿದಾಗಲೂ ಬಿಜೆಪಿ ನಾಯಕರು ಕಂಗಾಲಾಗುತ್ತಾರೆ ಎಂದು ಹೇಳಿದ್ದಾರೆ.
ಜೊತೆಗೆ, ಒಂದು ಸಂಘಟನೆಯಾಗಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು ಮತ್ತು ಕಡ್ಡಾಯವಾಗಿ ತೆರಿಗೆ ಪಾವತಿಸಲು ಆರ್‌ಎಸ್‌ಎಸ್ ಏಕೆ ನಿರಾಕರಿಸುತ್ತದೆ ಎಂದು ಕೇಳಿದರೆ ಬಿಜೆಪಿಗೆ ಸಿಟ್ಟು ಬರುತ್ತದೆ ಎಂದು ಟೀಕಿಸಿದ್ದಾರೆ.
ಆರ್‌ಎಸ್‌ಎಸ್ ಇತರರಿಗೆ ಬೋಧಿಸುವ ತತ್ವಗಳನ್ನು ಮೊದಲು ತಾನೇ ಪಾಲಿಸಲಿ ಎಂದು ಕೇಳಿಕೊಂಡರೆ ಬಿಜೆಪಿ ನಾಯಕರು ಸಹಿಸಿಕೊಳ್ಳುವುದಿಲ್ಲ ಎಂದಿರುವ ಖರ್ಗೆ, ಬಿಜೆಪಿ ಎಂದಿಗೂ ಆರ್‌ಎಸ್‌ಎಸ್‌ನ ಸಮಾನ ಮನಸ್ಕ ಜೊತೆಗಾರನಾಗಿ ಉಳಿದಿಲ್ಲ. ಬದಲಿಗೆ ಅದು ಸದಾ ಸಂಘದ ಕೈಗೊಂಬೆಯಾಗಿ ಹಾಗೂ ಒಂದು ರಾಜಕೀಯ ಸಾಧನವಾಗಿ ಬಳಸಲ್ಪಡುತ್ತಿದೆ. ಬಿಜೆಪಿಯ ಪ್ರತಿಯೊಂದು ಆಕ್ರೋಶದ ವರ್ತನೆಯೂ ಅದರ ಬಾಲ ಯಾರ ಕೈಯಲ್ಲಿದೆ ಎಂಬುದನ್ನು ಜಗತ್ತಿಗೆ ಸ್ಪಷ್ಟವಾಗಿ ಖಚಿತಪಡಿಸುತ್ತದೆ ಎಂದು ಕಿಡಿಕಾರಿದ್ದಾರೆ.