

ಮೈಸೂರು: ಸಾವರ್ಕರ್ ಕ್ಷಮಾಪಣೆ ಕೇಳಿ ಜೈಲಿಂದ ಹೊರಬಂದವರು. ಇವರ ಹಿಂಬಾಲಕರು ದೇಶ ಉಳಿಸ್ತಾರ? ನೀವು ಜಾಗೃತರಾಗದೆ ಹೋದರೆ ನಿಮ್ಮ ರಾಜಕೀಯ ಬದುಕಿನ ಮಾರಣಹೋಮ ನಿಶ್ಚಿತಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದರು.
ಮೈಸೂರಿನಲ್ಲಿ ನಡೆದ ಎಸ್‌ಐಆರ್ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಸಂಘ ಪರಿವಾರದವರು ಸ್ವಾತಂತ್ರ್ಯ ಪೂರ್ವದಲ್ಲಿ ಯಾರ ಸಂಪರ್ಕದಲ್ಲಿದ್ದರು ಗೊತ್ತಾ? ಹೆಡ್ಗೆವಾರ್, ಗೋಲ್ವಾಲ್ಕರ್ ಇವರೆಲ್ಲ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರ? ಸಾವರ್ಕರ್ ಅನ್ನು ವೈಭವೀಕರಿಸುತ್ತಾರೆ, ಅವರು ಕ್ಷಮಾಪಣೆ ಕೇಳಿ ಜೈಲಿಂದ ಹೊರಬಂದವರು. ಇವರ ಹಿಂಬಾಲಕರು ದೇಶ ಉಳಿಸ್ತಾರ? ಎಂದು ಕಿಡಿಕಾರಿದರು.
ನನ್ನ ರಾಜಕೀಯ ಮುಗಿಯುತ್ತಾ ಬಂದಿದೆ, ಆದರೆ ನೀವು ಇನ್ನೂ ರಾಜಕೀಯ ಮಾಡಬೇಕಾದವರು. ಹಾಗಾಗಿ ನೀವು ಮುಂದಿನ ಒಂದು ತಿಂಗಳು ಎಚ್ಚರಿಕೆ ವಹಿಸಲೇಬೇಕು ಎಂದು ಹೇಳಿದರು.
ಎಸ್‌ಐಆರ್ ನಡೆಯುತ್ತಿರುವುದು ಇದು ಮೊದಲ ಬಾರಿಯಲ್ಲ, 1950ರಲ್ಲಿ ಚುನಾವಣಾ ಆಯೋಗ ರಚನೆಯಾಗಿ, 1952 ರಲ್ಲಿ ಪ್ರಥಮ ಚುನಾವಣೆ ನಡೆಯಿತು. ಆಗಿಂದ್ದಾಗ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಾ ಬಂದಿದೆ, ಆದರೆ ಅರ್ಹ ಮತದಾರರನ್ನು ಕೈಬಿಡುವ ಅಧಿಕಾರ ಆಯೋಗಕ್ಕೆ ಇಲ್ಲ. ಆಯೋಗ ಸಂವಿಧಾನಬದ್ಧವಾಗಿಯೇ ಕೆಲಸ ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಅಂದರೆ 2014ರ ನಂತರ "ಮತ ದ್ರೋಹ" ಮಾಡಲಾಗುತ್ತಿದೆ, ಜನರ ಬಹುಮತದ ಮೂಲಕ ಗೆದ್ದವರು ಮಾತ್ರ ಅಧಿಕಾರ ನಡೆಸಲು ಯೋಗ್ಯರು ಎಂದರು.
ಇಡೀ ದೇಶದ 141 ಕೋಟಿ ಜನಸಂಖ್ಯೆಯಲ್ಲಿ 96 ಕೋಟಿ ಮತದಾರರಿದ್ದಾರೆ. ನಮ್ಮಲ್ಲಿ ಬಹಳಷ್ಟು ಜನ 1,000 ದಿಂದ 5,000 ಮತಗಳ ಅಂತರದಿಂದ ಗೆದ್ದವರು ಇದ್ದಾರೆ. ಇಂತಹ ಕಡೆ ನಾಲ್ಕೈದು ಸಾವಿರ ಮತಗಳನ್ನು ಕಿತ್ತು ಹಾಕಿದರೆ ನಮ್ಮವರ ಗೆಲುವು ಕಷ್ಟ. ಇದಕ್ಕಾಗಿ ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಬಡವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್ ಮಾಡುತ್ತಾರೆ. ಈ ಜನರೇ ಬಿಜೆಪಿ ಪಕ್ಷದ ಟಾರ್ಗೆಟ್ ಎಂದು ತಿಳಿಸಿದರು
ಬಿಜೆಪಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಗಳು. ಅವರಿಗೆ ಸರ್ವಾಧಿಕಾರದಲ್ಲಿ ಮಾತ್ರ ನಂಬಿಕೆ. ಅವರದ್ದು ಒನ್ ನೇಷನ್, ಒನ್ ಎಲೆಕ್ಷನ್ ನೀತಿ. ಹಿಂದುತ್ವದ ಮಾತಾಡುವವರು ಜಾತಿ, ವರ್ಣಾಶ್ರಮದ ಹೆಸರಲ್ಲಿ ಜನರನ್ನು ಶೋಷಣೆ ಮಾಡಿಲ್ಲವೇ? ಶೂದ್ರ ಸಮುದಾಯ ಬಿಜೆಪಿ ಜೊತೆ ಹೋಗಲೇಬಾರದು. ಸಾಮಾಜಿಕ ನ್ಯಾಯ ಬರಬಾರದು, ಬಂದರೆ ಶೋಷಣೆಗೆ ಅವಕಾಶ ಇಲ್ಲ ಎಂಬುದನ್ನು ಅವರು ಅರಿತಿದ್ದಾರೆ. ಬಿಜೆಪಿ ಪಕ್ಷದವರು ಸುಳ್ಳನ್ನು ಸೃಷ್ಟಿಸಿ, ಮಾರಾಟ ಮಾಡಿ, ಅದನ್ನೇ ಸತ್ಯ ಮಾಡುತ್ತಾರೆ ಎಂದರು.
ಜುಲೈ ತಿಂಗಳು ಬಹಳ ಮಹತ್ವದ ತಿಂಗಳು. ನೀವು ಬಿಎಲ್‌ಒ ಗಳ ಜೊತೆ ಸಮನ್ವಯ ಮಾಡಿಕೊಂಡು ಅವರ ಜೊತೆ ಮನೆ ಮನೆಗೆ ತೆರಳಬೇಕು. ಜೊತೆಗೆ ಕನಿಷ್ಠ ಪಕ್ಷ ಇಬ್ಬರು ಸ್ಥಳೀಯ ಮತದಾರರನ್ನು ಪ್ರತಿ ಬೂತ್‌ಗೆ ಆಯ್ಕೆ ಮಾಡಬೇಕು. ಯಾರಿಗೆಲ್ಲಾ ಶಾಸಕರಾಗುವ, ಸಂಸದರಾಗುವ ಆಸೆ ಇದೆ, ಅವರು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ದೇಶವನ್ನು ಉಳಿಸಲು ಈ ಪ್ರಯತ್ನ ಮಾಡಬೇಕು. ಬಿಜೆಪಿಯ, ಮೋದಿಯವರ ಕುತಂತ್ರವನ್ನು ಬಯಲು ಮಾಡಲು ಕೆಲಸ ಮಾಡಬೇಕು. ದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ ಎಂದು ಎಚ್ಚರಿಸಿದರು.