

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 17ನೇ ಬಜೆಟ್ ಅನ್ನು ಮಂಡಿಸಿದ್ದು, ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಭರಪೂರ ಅನುದಾನ ನೀಡಿದ್ದಾರೆ.
ಇಂದು ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ನಾಗರಿಕರ ಸುರಕ್ಷತೆಗಾಗಿ ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸ್ ಠಾಣೆಗಳು ಸೇರಿವೆ.
ಹೊಸ ಠಾಣೆಗಳಿಗೆ ಸುಸಜ್ಜಿತ ಕಟ್ಟಡ ಮತ್ತು ಆಧುನಿಕ ಉಪಕರಣಗಳನ್ನು ಒದಗಿಸಲು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟಿದ್ದು, ಹೊಸ ಠಾಣೆಗಳ ಕಾರ್ಯಾಚರಣೆಗಾಗಿ ಅಗತ್ಯವಿರುವ ಪೊಲೀಸ್ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.
ದೊಡ್ಡಬಳ್ಳಾಪುರ, ಹಿರಿಯೂರು ಮತ್ತು ಗುಂಡ್ಲುಪೇಟೆಯಂತಹ ಬೆಳೆಯುತ್ತಿರುವ ನಗರಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರಿ ಠಾಣೆಗಳಿಗೆ ಒತ್ತು ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಪೊಲೀಸ್ ಠಾಣೆ, ಸಜಿಪನಡು ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆಯ ಯರಗಟ್ಟಿ ಪೊಲೀಸ್ ಠಾಣೆ, ಯಾದಗಿರಿ ಜಿಲ್ಲೆಯ ಕಕ್ಕೇರಾ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆಯ ಆನಗೋಡು ಪೊಲೀಸ್ ಠಾಣೆ, ಹಾವೇರಿ ಜಿಲ್ಲೆಯ ತಿಳುವಳ್ಳಿ ಪೊಲೀಸ್ ಠಾಣೆ, ಮೈಸೂರು ಜಿಲ್ಲೆಯ ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಗ್ರಾಮಾಂತರ ಠಾಣೆ, ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ವಲಯದಲ್ಲಿ ಪೊಲೀಸ್ ಠಾಣೆ ಆರಂಭಿಸಲಾಗುತ್ತಿದೆ.
ಇನ್ನು ಇದರ ಜತೆಗೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ ಒಟ್ಟು 8,000 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಈ ವರ್ಷ ಭರ್ತಿ ಮಾಡಲಾಗುವುದು. ನೇಮಕಾತಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ‘ಖಾಯಂ ಪೊಲೀಸ್ ಮತ್ತು ಪೊಲೀಸ್ ಪೂರಕ ಸೇವೆಗಳ ನೇಮಕಾತಿ ಮಂಡಳಿ’ಯನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
Advertisement