

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಜಿಎಸ್‌ಟಿ ದರಗಳ ತಾರ್ಕಿಕೀಕರಣದಿಂದ ರಾಜ್ಯದ ಪಾಲಿಗೆ ಧಕ್ಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಿಂದಿನ ವರ್ಷ ಕರ್ನಾಟಕದಲ್ಲಿ 1.32 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಆದರೆ ಜಿಎಸ್‌ಟಿ ದರಗಳ ತಾರ್ಕಿಕೀಕರಣದಿಂದ ಕೇಂದ್ರದಿಂದ ರಾಜ್ಯಕ್ಕೆ ದೊರೆಯುವ ಪಾಲು ಕಡಿಮೆಯಾಯಿತು. 16ನೇ ಹಣಕಾಸು ಆಯೋಗವು ಕೇಂದ್ರದಿಂದ ರಾಜ್ಯಗಳಿಗೆ ನೀಡುವ ನಿಧಿಗಳ ಪಾಲನ್ನು ಹೆಚ್ಚಿಸಲು ಶಿಫಾರಸು ಮಾಡಿರುವುದರಿಂದ ಕೆಲವು ಮಟ್ಟಿಗೆ ಪರಿಹಾರ ದೊರಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2026-27ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಅವರು, ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹದಲ್ಲಿ ಕರ್ನಾಟಕ ರಾಜ್ಯವು ಮಹಾರಾಷ್ಟ್ರ ನಂತರ ಎರಡನೇ ಸ್ಥಾನದಲ್ಲಿದೆ. ಸರ್ಕಾರದ ನೌಕರರ ಪರಿಣಾಮಕಾರಿ ಕಾರ್ಯನಿರ್ವಹಣೆ, ಬಲವಾದ ಆರ್ಥಿಕ ವೃದ್ಧಿ ಹಾಗೂ ಕಲ್ಯಾಣ ಗ್ಯಾರಂಟಿ ಯೋಜನೆಗಳಿಂದ ಬಳಕೆ ಹೆಚ್ಚಾದ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ ಎಂದರು.
2024–25 ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 1.6 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ಇದು ಸುಮಾರು 15% ಬೆಳವಣಿಗೆ ದಾಖಲಿಸಿದೆ. 2020-21ರಲ್ಲಿ ರಾಜ್ಯದ ತೆರಿಗೆ ಆದಾಯ ಕುಸಿತ ಕಂಡಿತ್ತು. ಆದರೆ 2021-22ರಿಂದ ಅದು ವೇಗವಾಗಿ ಏರಿಕೆ ಕಾಣತೊಡಗಿತು. 2022-23ರಲ್ಲಿ ತೆರಿಗೆ ಸಂಗ್ರಹಣದಲ್ಲಿ ದೊಡ್ಡ ಜಿಗಿತ ಕಂಡುಬಂದಿತು.
2023-24ರಲ್ಲಿ ಬೆಳವಣಿಗೆ ಬಹುತೇಕ ಸ್ಥಗಿತಗೊಂಡಂತಾಗಿದ್ದರೂ, 2024-25 ಮತ್ತು 2025-26ರಲ್ಲಿ ಮತ್ತೆ ವೇಗ ಪಡೆದಿದೆ. 2025-26ರಲ್ಲಿ ತೆರಿಗೆ ಆದಾಯವು 2 ಲಕ್ಷ ಕೋಟಿ ರೂ.ಗೂ ಅಧಿಕವಾಗುವ ನಿರೀಕ್ಷೆ ವ್ಯಕ್ತವಾಗಿದೆ ಎಂದರು.
ಕೇಂದ್ರ ಸರ್ಕಾರವು ಜಿಎಸ್‌ಟಿ ತರ್ಕಬದ್ಧಗೊಳಿಸಿದ್ದರಿಂದ (GST Rationalization) ಮತ್ತು ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ ಆಗಿದೆ. ಆದಾಗ್ಯೂ ರಾಜ್ಯ ಸರ್ಕಾರ ಮೂರು ವರ್ಷಗಳಿಂದ ವಿತ್ತೀಯ ಶಿಸ್ತು ಕಾಯ್ದುಕೊಂಡು ಜವಾಬ್ದಾರಿತನ ಮೆರೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದಾಖಲೆಯ 4.48 ಲಕ್ಷ ಕೋಟಿ ರೂ ಮೊತ್ತದ ಮುಂಗಡಪತ್ರವನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಿದ ಸಿದ್ದರಾಮಯ್ಯ, ಜಿಎಸ್‌ಟಿ ಹಂಚಿಕೆಯಲ್ಲಿ ರಾಜ್ಯಗಳಿಗೆ ಆಗಿರುವ ಅನ್ಯಾಯವನ್ನು ವಿವರಿಸಿದ್ದಾರೆ.
ಕರ್ನಾಟಕವು ಸಂಪನ್ಮೂಲ ಕ್ರೋಢೀಕರಣ ಸಾಮರ್ಥ್ಯದೊಂದಿಗೆ ಮುಂದೆ ಸಾಗುತ್ತಿದೆ. ಆದಾಗ್ಯೂ ಕೇಂದ್ರ ಸರ್ಕಾರ ಜಾರಿಗೆ ತಂದ ತೆರಿಗೆ ನೀತಿ ಬದಲಾವಣೆಯಿಂದ ರಾಜ್ಯದ ರಾಜಸ್ವ ಸಂಗ್ರಹಣೆಗೆ ಸವಾಲುಗಳು ಎದುರಾಗಿವೆ. ಈ ಸವಾಲುಗಳ ನಡುವೆಯೂ ನಮ್ಮ ಸರ್ಕಾರ ಕೈಗೊಂಡ ಸಂಪನ್ಮೂಲ ಕ್ರೋಢೀಕರಣ ಕ್ರಮದಿಂದಾಗಿ ರಾಜಸ್ವ ಸಂಗ್ರಹಣೆಯಲ್ಲಿ ಸ್ಥಿರತೆ ಸಾಧಿಸಲಾಗಿದೆ. 2024-25ರ ರಾಜಸ್ವ ಸಂಗ್ರಹಣೆಗೆ ಹೋಲಿಸಿದರೆ 2025-26ರಲ್ಲಿ ರಾಜಸ್ವ ಸಂಗ್ರಹಣೆ ಶೇ. 8.2ರಷ್ಟು ಬೆಳವಣಿಗೆ ಸಾಧಿಸಿದೆ ಎಂದರು.
Advertisement