

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ 39 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ವೆಬ್ ಡೆವಲಪರ್ ಮತ್ತು ಮ್ಯಾಕ್ಸ್ ಇನ್ಫೋಟೆಕ್ ಸಂಸ್ಥಾಪಕ ಮುಖೇಶ್ ಕೃಷ್ಣ ಶೆಟ್ಟಿ ಎಂದು ಗುರುತಿಸಲಾಗಿದೆ. ಮಾರ್ಚ್ 5 ರಂದು ಕುಂದಾಪುರದಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಶೆಟ್ಟಿ ಅವರ ಕಾರು ಯಲ್ಲಾಪುರ ತಾಲ್ಲೂಕಿನ ಮಳಲಗಾವ್ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೆಟ್ಟಿ ಅವರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದರೂ, ಕಾರಿನಲ್ಲಿದ್ದ ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ಶೆಟ್ಟಿ ಅವರ ಕಾಲುಗಳು ಮತ್ತು ಕೈಗಳಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ವರದಿಯಾಗಿದೆ.
ಅಪಘಾತದ ಸಮಯದಲ್ಲಿ ಶೆಟ್ಟಿ ಸೀಟ್ ಬೆಲ್ಟ್ ಧರಿಸಿದ್ದರು, ಹೀಗಾಗಿ ಏರ್ ಬ್ಯಾಗ್ ಓಪನ್ ಆಗಿದೆ. ಆದರೆ, ನಂತರ ಏರ್‌ಬ್ಯಾಗ್ ಹರಿದಿರುವುದು ಕಂಡುಬಂದಿದ್ದು, ಡಿಕ್ಕಿಯ ಸಮಯದಲ್ಲಿ ಏರ್ ಬ್ಯಾಗ್ ಸಿಡಿದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಶೆಟ್ಟಿ ಅವರು ಪತ್ನಿ, ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.
Advertisement