

ಮಂಗಳೂರು: ಕರಾವಳಿ ಕರ್ನಾಟಕದ ಪರಂಪರೆಯ ಕೆಸರು ಗದ್ದೆಯಲ್ಲಿ ಕೋಣಗಳ ಓಟವಾದ ಕಂಬಳ ಈಗ ಗ್ರಾಮೀಣ ಪ್ರದೇಶಗಳ ವಿದ್ಯಾವಂತ ಯುವಕರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. ಇದು ಅವರಿಗೆ ಖ್ಯಾತಿ ಮಾತ್ರವಲ್ಲ, ಅಗತ್ಯವಾದ ಆರ್ಥಿಕ ಬೆಂಬಲ ಹಾಗೂ ಸ್ವಾಭಿಮಾನದಿಂದ ಬದುಕುವ ಅವಕಾಶವನ್ನೂ ನೀಡುತ್ತಿದೆ.
ದಕ್ಷಿಣ ಕನ್ನಡದ ಪದವೀಧರ ಯುವಕರಾದ ಕೃತಿಕ್, ರಾಯೀ ಗರ್ಷನ್ ಗೌಡ ಮತ್ತು ಕಾರ್ತೇಶ್ ಈ ಕ್ರೀಡೆಯಲ್ಲಿ ಗಾಢವಾಗಿ ತೊಡಗಿಸಿಕೊಂಡಿದ್ದಾರೆ. ಸುಮಾರು ಆರು ತಿಂಗಳ ಕಾಲ ನಡೆಯುವ ಕಂಬಳ ಕ್ರೀಡೆ ಸಮಯದಲ್ಲಿ ಉತ್ತಮ ಆದಾಯ ದೊರಕುವ ಸಾಧ್ಯತೆ ಇರುವುದರಿಂದ ಅವರು ಇದನ್ನು ವೃತ್ತಿಯಾಗಿ ಆರಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಕುಕ್ಕೇಪದವು ಗ್ರಾಮದ 23 ವರ್ಷದ ಕೃತಿಕ್, ಯೆನೆಪೊಯಾ ಕಾಲೇಜಿನ ಬಿಬಿಎ ಪದವೀಧರ. ಅವರು ಈಗ ಸಂಪೂರ್ಣವಾಗಿ ಕಂಬಳದತ್ತ ಗಮನ ಹರಿಸಿದ್ದು, ಸದ್ಯ ಯಾವುದೇ ಉದ್ಯೋಗ ಹುಡುಕುವ ಯೋಚನೆ ಇಲ್ಲ. ತಮ್ಮದೇ ವ್ಯವಹಾರವನ್ನೂ ಆರಂಭಿಸಿದ್ದಾರೆ. ಇದುವರೆಗೆ ಸುಮಾರು 75 ಪದಕಗಳನ್ನು ಗೆದ್ದಿದ್ದು, ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಚಾಂಪಿಯನ್ ಆಗಿದ್ದಾರೆ.
ಕಂಬಳ ನನಗೆ ಖ್ಯಾತಿಯ ಜೊತೆಗೆ ಆರ್ಥಿಕ ಸ್ಥಿರತೆಯನ್ನೂ ನೀಡಿದೆ. ಇನ್ನೇನು ಬೇಕು, ಬೇರೆ ಉದ್ಯೋಗ ಹುಡುಕಿಕೊಂಡು ನಾನೇಕೆ ಹೋಗಲಿ ಎಂದು ಅವರು ಹೇಳುತ್ತಾರೆ.
ಇನ್ನೊಬ್ಬ ಯುವಕ ರಾಯೀ ಗರ್ಷನ್ ಗೌಡ, ಬಂಟ್ವಾಳ ಮೂಲದವರು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಪಿಇಡ್ (Bachelor of Physical Education) ಎರಡನೇ ವರ್ಷದ ವಿದ್ಯಾರ್ಥಿ. ಕಂಬಳ ಸ್ಪರ್ಧೆಗಳಿಂದ ಗಳಿಸುವ ಆದಾಯದಿಂದಲೇ ತನ್ನ ಕಾಲೇಜು ಶುಲ್ಕವನ್ನು ಭರಿಸುತ್ತಿದ್ದೇನೆ ಎಂದು ಹೇಳುತ್ತಾರೆ.
ಎಸ್‌ಎಸ್‌ಎಲ್‌ಸಿ ನಂತರ ಓದಿಗಾಗಿ ಹಣ ಜಮೆ ಮಾಡಲು ಅಡಿಕೆ ಸಿಪ್ಪೆ ತೆಗೆಯುವಂತಹ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆ. ನಂತರ ಕಂಬಳ ಅಕಾಡೆಮಿಗೆ ಸೇರಿ ಓಟಗಳಲ್ಲಿ ಭಾಗವಹಿಸಲು ಆರಂಭಿಸಿದೆ. ಅದರಿಂದಲೇ ಶಿಕ್ಷಣ ಮತ್ತು ಇತರ ಖರ್ಚುಗಳನ್ನು ನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳುತ್ತಾರೆ.
ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಕಾರ್ತೇಶ್, ವಾಮದಪದವಿನ ಸರ್ಕಾರಿ ಕಾಲೇಜಿನಲ್ಲಿ ಎಂ.ಕಾಂ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 40ಕ್ಕೂ ಹೆಚ್ಚು ಕಂಬಳ ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿದ್ದಾರೆ. “ಕಂಬಳ ನನಗೆ ಹೆಸರು ಮತ್ತು ಖ್ಯಾತಿ ತಂದಿದೆ, ಜೊತೆಗೆ ದೊಡ್ಡ ಅಭಿಮಾನಿ ಬಳಗವನ್ನೂ ನೀಡಿದೆ. ನಾನು ಓಟದಲ್ಲಿ ಪದಕ ಗೆದ್ದಾಗ ನನ್ನ ಕಾಲೇಜು ಕೂಡ ಸಂಭ್ರಮಿಸುತ್ತದೆ. ಅದು ನನಗೆ ತುಂಬಾ ಹೆಮ್ಮೆಯನ್ನು ನೀಡುತ್ತದೆ,” ಎನ್ನುತ್ತಾರೆ.
Advertisement