

ಬೆಂಗಳೂರು: ರಾಜ್ಯದಲ್ಲಿ LPG ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ಮರಗಳನ್ನು ಕಡಿದು ಕಟ್ಟಿಗೆ ಬಳಸುವ ಪ್ರವೃತ್ತಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಕ್ರಮ ಮರ ಕಡಿತ ತಡೆಯಲು ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಅಡುಗೆ ಅನಿಲ (LPG) ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಸೌದೆಯ ಬಳಕೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕಾಡಿನ ಮರಗಳಿಗೆ ಕೊಡಲಿ ಏಟು ಬೀಳುವ ಭೀತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಹೈ-ಅಲರ್ಟ್ ಘೋಷಿಸಿದೆ.
ಈ ಕುರಿತು ಮಾತನಾಡಿರುವ ಸಚಿವ ಈಶ್ವರ್ ಖಂಡ್ರೆಯವರು, ಗ್ಯಾಸ್ ಸಿಗುತ್ತಿಲ್ಲವೆಂದು ಮರಗಳನ್ನು ಅಕ್ರಮವಾಗಿ ಕಡಿದರೆ ಸಂಬಂಧಿತ ಪ್ರದೇಶದ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷದಿಂದ LPG ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆ, ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಬಗ್ಗೆ ಆತಂಕ ಹೆಚ್ಚಾಗಿದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ಅಡುಗೆಗಾಗಿ ಮರದ ಕಡ್ಡಿಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳು, ಅರಣ್ಯ ಅಂಚುಗಳು ಹಾಗೂ ಸರ್ಕಾರದ ಭೂಮಿಗಳಲ್ಲಿ ಮರಗಳನ್ನು ಅಕ್ರಮವಾಗಿ ಕಡಿತ ತಡೆಯಲು ಕಟ್ಟುನಿಟ್ಟಿನ ನಿಗಾವಹಿಸಿ. ಎಲ್ಲ ಅರಣ್ಯ ವಲಯಗಳಲ್ಲಿ ಗಸ್ತು ಹೆಚ್ಚಿಸಿ. ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಕಣ್ಗಾವಲಿಡಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಯಾವುದೇ ಅರಣ್ಯ ಪ್ರದೇಶದಲ್ಲಿ ಅಥವಾ ಸರ್ಕಾರಿ ಭೂಮಿಯಲ್ಲಿ ಮರಗಳನ್ನು ಅಕ್ರಮವಾಗಿ ಕಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಂತಹ ಘಟನೆಗಳು ನಡೆದರೆ ಸಂಬಂಧಿತ ಅರಣ್ಯ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement