bamul president DK suresh (file photo)
ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ (ಸಂಗ್ರಹ ಚಿತ್ರ)online desk

ಒಂದು ರೂಪಾಯಿಗೆ ಒಂದು ಲೀಟರ್ ಹಾಲು!: ಬಮುಲ್ ಅಧ್ಯಕ್ಷ DK Suresh ಹೇಳಿದ್ದೇನು?

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸುರೇಶ್ ಅವರು ಶನಿವಾರ ಮಾತನಾಡಿದರು.
Published on

ಬೆಂಗಳೂರು: "ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಲು ಮುಂದಾಗಿರುವ ಫ್ಲಿಪ್ ಕಾರ್ಟ್ ಸಂಸ್ಥೆಯ ನಡೆಯ ಬಗ್ಗೆ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಸಂಸ್ಥೆಯ ವಿರುದ್ಧ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ, ನವದೆಹಲಿ ಇವರಿಗೆ ಸೆಕ್ಷನ್ 19/1 ಎ ಅಡಿ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಲಾಗುತ್ತಿದೆ. ಜೊತೆಗೆ ಈ ವಿಚಾರವನ್ನು ಪ್ರಧಾನಿ ಮೋದಿಯವರಿಗೆ ಇ ಮೇಲ್ ಮುಖಾಂತರ ಕಳಿಸುತ್ತಿದ್ದೇನೆ‌" ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ತಿಳಿಸಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸುರೇಶ್ ಅವರು ಶನಿವಾರ ಮಾತನಾಡಿದರು.

"ಹಣ ಮಾಡುವ ಭರದಲ್ಲಿ ಫ್ಲಿಪ್ ಕಾರ್ಟ್ ಎನ್ನುವ ಸಂಸ್ಥೆ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡಲು ಮುಂದಾಗಿದೆ. ರೈತ ಸಮುದಾಯವನ್ನ ಧ್ವಂಸ ಮಾಡುವಂತಹ ಕೃತ್ಯಕ್ಕೆ ಕೈ ಹಾಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಇಡೀ ದೇಶದಾದ್ಯಂತ ದಂಗೆ ಮಾಡಬೇಕಾದ ಪರಿಸ್ಥಿತಿ ಉಂಟಾಗಲಿದೆ" ಎಂದರು.

"ಮಾರುಕಟ್ಟೆಯನ್ನು ಆವರಿಸಿಕೊಳ್ಳಬೇಕು ಎಂದು ಮಾಡುತ್ತಿರುವ ಸ್ಪರ್ಧೆಯಿಂದ ರೈತರಿಗೆ ಹೊಡೆತ ಬೀಳುತ್ತದೆ. ಇದಕ್ಕಾಗಿಯೇ ಸುಮಾರು 2 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಸಾರ್ವಜನಿಕರ ಶೇರಿನ ಹಣ ಬಳಸಿ ಹೀಗೆ ದುರ್ಬಳಕೆ ಮಾಡಿಕೊಳ್ಳುತ್ತಾ ಇರುವುದು ಸೂಕ್ತವಲ್ಲ"ಎಂದರು.

"ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಹಾಲು ಒಕ್ಕೂಟ ಸಂಸ್ಥೆಗಳನ್ನು ನಾಶ ಮಾಡುವ ಪ್ರಕ್ರಿಯೆ ಇದಾಗಿದೆ. ಎಂಎನ್ ಸಿಗಳು ರೈತರ ಹಿತವನ್ನ ಹಾಳು ಮಾಡುವ ಕೆಲಸ ಮಾಡುತ್ತಿವೆ. ಕಡಿಮೆ ದರಕ್ಕೆ ಎಷ್ಟು ದಿನ ಹಾಲನ್ನು ನೀಡುತ್ತಾರೆ ಎಂದು ಜಾಹಿರಾತಿನಲ್ಲಿ ತಿಳಿಸಬೇಕು. ರೈತ ಸಂಕುಲವನ್ನ ಹಾಳು ಮಾಡುತ್ತಿರುವ ಈ ಕೆಲಸದಿಂದ ಫ್ಲಿಪ್ ಕಾರ್ಟ್ ಸಂಸ್ಥೆ ಹಿಂದೆ ಸರಿಯಬೇಕು" ಎಂದು ಆಗ್ರಹಿಸಿದರು.

14.5 ಲಕ್ಷ ಲೀ ಹಾಲು ಮಾರಾಟ

"ಈಗಾಗಲೇ 14.5 ಲಕ್ಷ ಲೀಟರ್ ಹಾಲು ಮಾರಾಟ ಆಗಿದೆ. ಈಗಾಗಲೇ ಎಲ್ಲಾ ಕಡೆ ಜಾಹಿರಾತು ನೀಡಿದೆ. ಸಾರ್ವಜನಿಕರ ಹಣವನ್ನ ಹೂಡಿಕೆ ಮಾಡಿ ಗ್ರಾಹಕರನ್ನ ಆಕರ್ಷಣೆ ಮಾಡಲಾಗುತ್ತಿದೆ. ಆ ಕಂಪನಿಯವರು ಎಷ್ಟು ದಿನ ಈ ರೀತಿ ಹಾಲು ಕೊಡುತ್ತಾರೆ ಎಂಬುದನ್ನು ಬಹಿರಂಗಗೊಳಿಸಬೇಕು" ಎಂದರು.

ನಂದಿನಿ ಹಾಲಿನ ಮಾರಾಟ ಪ್ರಮಾಣ ಕಡಿಮೆಯಾಗಿದೆಯೇ ಎಂದು ಕೇಳಿದಾಗ, "ಮಾರುಕಟ್ಟೆಯಲ್ಲಿ ನಂದಿನಿ ಹಾಲು ಮಾತ್ರ ಇಲ್ಲ‌. ಅನೇಕ ಕಂಪೆನಿಗಳಿವೆ. ಬಮುಲ್ ಒಕ್ಕೂಟಕ್ಕೆ 40- 50 ಸಾವಿರ ಲೀ ಹಾಲು ಮಾರಾಟ ಕಡಿಮೆಯಾಗಿದೆ. ಎಷ್ಟು ದಿನದಿಂದ ಇದು ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬೇಕು" ಎಂದರು.

ಇದರ ಹಿಂದೆ ಬೇರೆ ಯಾವುದಾದರೂ ಸಂಸ್ಥೆಗಳು ಇವೆಯೇ ಎಂದು ಕೇಳಿದಾಗ, "ಇದರ ಬಗ್ಗೆ ಇನ್ನೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದರ ಬಗ್ಗೆ ಒಂದೆರಡು ಜಾಹೀರಾತು ನೋಡಿದೆ. ಇದರ ಬಗ್ಗೆ ಅಧಿಕಾರಿಗಳ ಬಳಿಯೂ ಚರ್ಚೆ ನಡೆಸುವೆ. ವ್ಯಾಪಾರದ ಹೆಸರಿ‌ನಲ್ಲಿ ರೈತ ಸಂಕುಲಕ್ಕೆ ಬೆಂಕಿ ಇಡುವುದು ತರವಲ್ಲ. ದೇಶದ ಒಳಗೆ ಇರುವವರೇ ಹೀಗೆ ಮಾಡುವುದು ಎಷ್ಟು ಸರಿ" ಎಂದರು.

bamul president DK suresh (file photo)
ಯುಗಾದಿ ಹಬ್ಬಕ್ಕೆ ಬಮೂಲ್ ನಿಂದ ಭರ್ಜರಿ ಗಿಫ್ಟ್: ಪ್ರತಿ ಲೀಟರ್ ಗೆ 1 ರೂ ನಂತೆ ಹಾಲು ಉತ್ಪಾದಕರಿಗೆ ಬೋನಸ್; ಡಿ.ಕೆ ಸುರೇಶ್

"ರೈತರಿಗೆ ನಾವು 38, 39, 40 ರೂಪಾಯಿ ಹಣವನ್ನು ಪಾವತಿ ಮಾಡುತ್ತಿದ್ದೇವೆ. ಇವರು ಒಂದು ರೂಪಾಯಿಗೆ ಕೊಡುವುದಕ್ಕೆ ಹೇಗೆ ಸಾಧ್ಯವಾಗುತ್ತದೆ. ಯಾರಿಂದ ಖರೀದಿ ಮಾಡುತ್ತಿದ್ದಾರೆ. ಎಲ್ಲಿಂದ ಹಾಲು ಬರುತ್ತಿದೆ ಎಂದು ತಿಳಿದುಕೊಳ್ಳಬೇಕಿದೆ"ಎಂದರು.

"ಮಾಧ್ಯಮಗಳು ಈ ವಿಚಾರವಾಗಿ ರಾಷ್ಟ್ರದ ಗಮನ ಸೆಳೆಯಬೇಕು. ರೈತರ ಪರವಾಗಿ ನಿಲ್ಲಬೇಕು. ರೈತರು ಹೋರಾಟಕ್ಕೆ ಇಳಿಬೇಕು ಎಂದು ಕರೆ ನೀಡುತ್ತಿದ್ದೇನೆ. ಸರ್ಕಾರ ಎಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ" ಎಂದರು‌.

ಇಂತಹ ಸಂಸ್ಥೆಗಳಿಗೆ ಹಾಲು ಮಾರಬೇಡಿ ಎಂದು ರೈತರಿಗೆ ತಿಳಿಸಬೇಕು ಎಂದಾಗ, "ರೈತರು ಯಾರಿಗೆ ಹಾಲು ಮಾರಾಟ ಮಾಡುತ್ತಾರೆ ಎಂಬುದು ತಿಳಿಯುವುದಿಲ್ಲ‌. ಬಲ್ಕ್ ಮಿಲ್ಕ್ ಉತ್ಪಾದಕರ ಬಳಿ ಸೇರಿದಂತೆ ಎಲ್ಲಿ ಅವರು ಹಾಲು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಯುವುದಿಲ್ಲ. ಅಥವಾ ಹಾಲಿನ‌ ಪೌಡರ್ ಬೆರೆಸುತ್ತಿದ್ದಾರಾ ಎಂದು ತಿಳಿಯಲು ಸ್ಯಾಂಪಲ್ ಅನ್ನ ತರಿಸುತ್ತಿದ್ದೇನೆ. ಅದನ್ನು ಲ್ಯಾಬ್ ನಲ್ಲಿ ಪರಿಶೀಲನೆ ಮಾಡಲು ತಿಳಿಸಿದ್ದೇನೆ. ಸಹಕಾರಿ ಸಂಘಗಳು ಒಮ್ಮೆ ಮುಗ್ಗರಿಸಿದರೆ ಇದರ ನೇರ ಪರಿಣಾಮ ರೈತರ ಮೇಲೆ ಬೀಳುತ್ತದೆ" ಎಂದರು‌.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com