

ಬೆಳಗಾವಿ: ರಾಸಾಯನಿಕಗಳು ಮತ್ತು ಕಪ್ಪು ಬಣ್ಣದ ಕಾಗದ ಬಳಸಿ ನಿಜವಾದ ನೋಟು ಮುದ್ರಿಸಬಹುದು ಎಂದು ಜನರನ್ನು ವಂಚಿಸುತ್ತಿದ್ದ ಆರೋಪದ ಮೇರೆಗೆ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ಎಂಟು ಜನರನ್ನು ಬೆಳಗಾವಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಗೋಕಾಕ ನಗರದ ಹನುಮಾನ ದೇವಸ್ಥಾನದ ಬಳಿ ಇರುವ ಮನೆಯೊಂದರ ಮೇಲೆ ಗೋಕಾಕ ನಗರ ಠಾಣೆ ಪೊಲೀಸರು ಮಂಗಳವಾರ ದಾಳಿ ನಡೆಸಿ ಗ್ಯಾಂಗ್ ನ್ನು ಪತ್ತೆ ಹಚ್ಚಿದ್ದಾರೆ. ಇನ್ನೂ ಒಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಬೆಳಗಾವಿ ಜಿಲ್ಲೆಯ ಗೋಕಾಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 'ಹಣ ದ್ವಿಗುಣ (money doubling)ಅಪರಾಧಿಗಳನ್ನು ಬಂಧಿಸಲಾಗಿದೆ. ಈ ಅಪರಾಧದಲ್ಲಿ ಆಸ್ತಿ ವಂಚನೆಯೂ ಸೇರಿದೆ. ಗೋಕಾಕಿನ ಮೂವರು ಆರೋಪಿಗಳು ಮಹಾರಾಷ್ಟ್ರದ ಜಯಶ್ರೀ ಬಾಬು ಎಂಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು. ಈತ ಜನರನ್ನು ವಂಚಿಸಲು ವಂಚಕರನ್ನು ಬಳಸುತ್ತಿದ್ದ. ಈ ಬಾರಿ ಅವರು ಬ್ಲಾಕ್ ನೋಟ್ ಹಗರಣ ಬಳಸಿ ತಗುಲಿ ಹಾಕಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಬಂಧಿತರು ಮೂಲ ಕರೆನ್ಸಿ ನೋಟುಗಳನ್ನು ತೆಗೆದುಕೊಂಡು ಅವುಗಳಿಗೆ ಕಪ್ಪು ಬಣ್ಣದ ರಾಸಾಯನಿಕ ಹಾಕುತ್ತಿದ್ದರು. ಅವುಗಳನ್ನು ಡ್ರೈ ಮಾಡಿ ಸರಳ ಕಪ್ಪು ಕಾಗದದಂತೆ ಕಾಣುವಂತೆ ಮಾಡುತ್ತಿದ್ದರು. ಅವುಗಳನ್ನು ಅಮಾಯಕರಿಗೆ ತೋರಿಸಿ, ನೀವು ಅದನ್ನು ಬಿಸಿ ಮಾಡಿ ನಿರ್ದಿಷ್ಟ ರಾಸಾಯನಿಕ ದ್ರಾವಣದಲ್ಲಿ ಹಾಕಿದರೆ ಅದು ಮೂಲ ಕರೆನ್ಸಿಗೆ ಬದಲಾಗುತ್ತದೆ ಎಂದು ಹೇಳುತ್ತಿದ್ದರು. ವಾಸ್ತವದಲ್ಲಿ ಅವುಗಳು ನೈಜ ನೋಟುಗಳೇ. ಕಪ್ಪು ನೋಟುಗಳು ನೈಜ ನೋಟುಗಳಾಗುತ್ತವೆ ಎಂದು ವಂಚಕರನ್ನು ನಂಬಿಸಿ ಬಂಡಲ್ ಗಟ್ಟಲೇ ಕಪ್ಪು ಪೇಪರ್ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
ಉದಾಹರಣೆಗೆ ಸಂತ್ರಸ್ತರಿಂದ ₹ 50,000 ಸ್ವೀಕರಿಸುತ್ತಿದ್ದ ಆರೋಪಿಗಳು ₹ 2 ಲಕ್ಷ ಮೌಲ್ಯದ 'ಮ್ಯಾಜಿಕ್'ಕಾಗದದ ಭರವಸೆ ನೀಡುತ್ತಿದ್ದರು. ಇವುಗಳು 'ಮ್ಯಾಜಿಕ್ ನೋಟುಗಳು ಅಂತಾ ಹೇಳುತ್ತಿದ್ದರು.ಈ ಹಗರಣದಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಪೇದೆಗಳು ಭಾಗಿಯಾಗಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಎಂಟು ಕ್ರಿಮಿನಲ್‌ಗಳು ಭಾಗಿಯಾಗಿದ್ದು, ಏಳು ಮಂದಿಯನ್ನು ಬಂಧಿಸಲಾಗಿದ್ದು, ಓರ್ವ ಸ್ಥಳೀಯ ಕ್ರಿಮಿನಲ್ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಬಿಸಿಮಾಡುವ ಯಂತ್ರ, ದ್ರಾವಣ ಮತ್ತು ಕಪ್ಪು ಕಾಗದಗಳನ್ನು ವಶಪಡಿಸಿಕೊಂಡಿದ್ದೇವೆ. ತನಿಖೆ ಮುಂದುವರೆದಿದೆ ಎಂದು ಎಸ್‌ಪಿ ಹೇಳಿದರು.
Advertisement