

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ವಿಡಿಯೋಗಳನ್ನು ವೈರಲ್ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(SIT) ಬುಧವಾರ ಬಿಜೆಪಿ ಮುಖಂಡ ದೇವರಾಜೇಗೌಡ ಸೇರಿದಂತೆ 39 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ಪೆನ್‌ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಇಂದು ಹಾಸನ ಜಿಲ್ಲೆಯ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ 13,712 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದೆ.
ಆರೋಪಪಟ್ಟಿಯಲ್ಲಿ 52 ಜನರ ಹೆಸರುಗಳಿದ್ದರೂ 39 ಜನರ ವಿರುದ್ಧ ಮಾತ್ರ ಚಾರ್ಜ್ ಶೀಟ್ ದಾಖಲಿಸಲಾಗಿದೆ. ಅಶ್ಲೀಲ ವಿಡಿಯೋ ಹಂಚಲು ಆರೋಪಿಗಳು 70 ಪೆನ್‌ಡ್ರೈವ್ ಖರೀದಿಸಿದ್ದರು ಮತ್ತು ಹಾಸನದಲ್ಲೇ 70 ಪೆನ್‌ಡ್ರೈವ್ ಖರೀದಿ ಮಾಡಿರುವುದು ತನಿಖೆಯಿಂದ ಬಯಲಾಗಿದೆ ಎಂದು ಎಸ್ಐಟಿ ಹೇಳಿದೆ.
ಬಿಜೆಪಿ ಮುಖಂಡ ಹಾಗೂ ವಕೀಲ ಜಿ ದೇವರಾಜೇಗೌಡ, ನವೀನ್ ಕುಮಾರ್ NR, ಪ್ರಜ್ವಲ್ ರೇವಣ್ಣ ಅವರ ಚಾಲಕ ಕಾರ್ತಿಕ್ N, ಚೇತನ್ BC, ಚೇತನ್ YS, ಲಿಖಿತ್ ಗೌಡ / ಲಿಖಿತ್ HP ಸೇರಿದಂತೆ 39 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
2024 ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂದಿನ ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಚುನಾವಣಾ ಏಜೆಂಟ್, ವಕೀಲ ಪೂರ್ಣ ಚಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ರಾಜ್ಯ ಸರ್ಕಾರವು ಈ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಸೂಚಿಸಿತ್ತು. 23 ತಿಂಗಳ ತನಿಖೆಯ ಬಳಿಕ ಎಸ್‌ಐಟಿಯು ಇಂದು ಹಾಸನದ ಸಿವಿಲ್ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್ ಸಲ್ಲಿಕೆ ಮಾಡಿದೆ.
Advertisement