

ಕರ್ನೂಲು ಜಿಲ್ಲೆಯ ಕೋಸಿಗಿ ಆರ್‌ಡಿಎಸ್ ಅಣೆಕಟ್ಟಿಗೆ ಸ್ನಾನ ಮಾಡಲು ಹೋಗಿದ್ದ ಕರ್ನಾಟಕ ಮೂಲದ ನಾಲ್ವರು ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ 15 ಸದಸ್ಯರ ತಂಡ ಮದುವೆ ಕಾರ್ಯಕ್ರಮ ನಿಮಿತ್ತ ಆಂಧ್ರಪ್ರದೇಶಕ್ಕೆ ಹೋಗಿತ್ತು. ಕಾರ್ಯಕ್ರಮ ಮುಗಿದ ನಂತರ ಅವರೆಲ್ಲರೂ ಈಜಾಡಲು ಕೋಸಗಿಯ ರಾಜಲಬಂಡ ಅಣೆಕಟ್ಟಿನ ಕೊನೆ ಭಾಗದಲ್ಲಿರುವ ಸಾತುನೂರು ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಇಳಿದಿದ್ದಾರೆ. ಅಲ್ಲಿ ಅವರ ಪೈಕಿ ನಾಲ್ವರು ಆಳವಾದ ನೀರಿಗೆ ಇಳಿದು ಈಜಲು ಸಾಧ್ಯವಾಗದೇ ಮುಳುಗಿ ಸಾವನ್ನಪ್ಪಿದರು. ಮೃತರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಾದ ಉಮಾವತಿ(35), ರತ್ನ(24), ಮಹೇಶ್(28) ಮತ್ತು ಶಿವಾನಂದ(24) ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.
Advertisement