

ಹುಬ್ಬಳ್ಳಿ: 6 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ವಾಣಿಜ್ಯ ತೆರಿಗೆ ಉಪಆಯುಕ್ತ ಭರತ್ ಕುಮಾರ್ ಹೆಗ್ಡೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಂಕೋಲಾ ಮೂಲದ ಉದ್ಯಮಿ ವಿಶ್ವಜಿತ್ ನಾಯಕ್ ಅವರಿಂದ ಹಣ ಪಡೆಯುತ್ತಿದ್ದಾಗ 48 ವರ್ಷದ ಹೆಗ್ಡೆ ಸಿಕ್ಕಿಬಿದ್ದಿದ್ದಾರೆ ಎಂದು ಬೆಂಗಳೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಶಿವ ಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
ವಿಶ್ವಜಿತ್ ನಾಯಕ್ 2019ರಲ್ಲಿ ಎಂಟು ಟಿಪ್ಪರ್ ಟ್ರಕ್‌ಗಳನ್ನು ಖರೀದಿಸಿದ್ದರು. ಅಲ್ಲದೆ ಸುಮಾರು 60 ಲಕ್ಷ ರೂ.ಗಳ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ಅರ್ಹರಾಗಿದ್ದರು. ಅದರಲ್ಲಿ ಅವರು 34 ಲಕ್ಷ ರೂ.ಗಳನ್ನು ಕ್ಲೇಮ್ ಮಾಡಿದ್ದರು. ವಾಣಿಜ್ಯ ತೆರಿಗೆ ಇಲಾಖೆಯು ಅಕ್ರಮವಾಗಿ ಐಟಿಸಿ ಹಕ್ಕು ಸಾಧಿಸಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಅಲ್ಲದೆ ನಾಯಕ್ ಅವರನ್ನು ನಾಲ್ಕು ಬಾರಿ ವಿಚಾರಣೆಗೂ ಕರೆಸಿತ್ತು.
ಅಂತಿಮವಾಗಿ ಪ್ರಕರಣವನ್ನು ಮುಕ್ತಾಯಗೊಳಿಸಲು 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 6 ಲಕ್ಷ ರೂಪಾಯಿಗೆ ಒಪ್ಪಿಕೊಂಡರು. ಇನ್ನು ಸರ್ಕಾರಿ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿಚಾರವನ್ನು ವಿಶ್ವಜಿತ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಬೆಂಗಳೂರು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಸರ್ಕಾರಿ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಗತಿಯಲ್ಲಿದೆ ಎಂದರು.
Advertisement