ನಾವು ಮೊದಲೇ ಎಚ್ಚರಿಕೆ ಕೊಟ್ಟಿದ್ದೆವು: ಇದು ಆಡಳಿತವಲ್ಲ, ಸಂಘಟಿತ ಲೂಟಿ; ಸಿಲಿಂಡರ್ ದರ ಏರಿಕೆ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಕೇವಲ 4 ತಿಂಗಳ ಅವಧಿಯಲ್ಲಿ ಮೋದಿ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು 6 ಬಾರಿ ಏರಿಕೆ ಮಾಡಿದ್ದು, ಒಟ್ಟು ₹1,518 ಹೊರೆಯನ್ನು ಬಳಕೆದಾರರ ಮೇಲೆ ಹೊರಿಸಿದೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ನಾವು ಮೊದಲೇ ಎಚ್ಚರಿಕೆ ಕೊಟ್ಟಂತೆ ವಿಧಾನಸಭಾ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ನರೇಂದ್ರ ಮೋದಿ ಸರ್ಕಾರವು ಬೆಲೆಯೇರಿಕೆ ಮಾಡತೊಡಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಮೇ 1ರಿಂದ ಜಾರಿಗೆ ಬರುವಂತೆ ಏಕಾಏಕಿ ₹993 ಹೆಚ್ಚಳ ಮಾಡಿದೆ ಎಂದು ಸಿಎಂಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಒಟ್ಟಾರೆ 19 ಕೆಜಿಯ 1 ಸಿಲಿಂಡರ್‌ಗೆ ನಿನ್ನೆಯವರೆಗೆ ₹2,078.50ರಷ್ಟಿದ್ದ ದರ ಇದೀಗ ₹3,071.5ಗೆ ತಲುಪಿದೆ. ಚುನಾವಣೆ ಅವಧಿಯಲ್ಲಿ ಮೋದಿ ಸರ್ಕಾರವು ಉದ್ದೇಶಪೂರ್ವಕವಾಗಿ ವಾಣಿಜ್ಯ ಬಳಕೆಯ ಗ್ಯಾಸ್‌ ಬೆಲೆ ಏರಿಕೆಯನ್ನು ತಡೆದಿತ್ತು ಎಂಬುದಕ್ಕೆ ದಿಢೀರನೆ ಇಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಸಾಕ್ಷಿಯಾಗಿದೆ.

ಕೇವಲ 4 ತಿಂಗಳ ಅವಧಿಯಲ್ಲಿ ಮೋದಿ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು 6 ಬಾರಿ ಏರಿಕೆ ಮಾಡಿದ್ದು, ಒಟ್ಟು ₹1,518 ಹೊರೆಯನ್ನು ಬಳಕೆದಾರರ ಮೇಲೆ ಹೊರಿಸಿದೆ. ಇದೊಂದು ರೀತಿಯಲ್ಲಿ ಅಧಿಕೃತ ಲೂಟಿಯೇ ಹೊರತು ಆಡಳಿತದ ಕ್ರಮವಲ್ಲ ಎಂದು ಕಿಡಿ ಕಾರಿದ್ದಾರೆ.

ಆಗಾಗ ಜಾಗತಿಕ ಪರಿಸ್ಥಿತಿಗಳು ಬದಲಾಗುತ್ತಿರುತ್ತವೆ, ಇಂತಹ ಸಂದರ್ಭದಲ್ಲಿ ಭಾರತದ ನಾಗರಿಕರನ್ನು ಕಾಪಾಡುವುದು ಪ್ರಧಾನಿಯಾಗಿ ಮೋದಿಯವರ ಕರ್ತವ್ಯವಾಗಿದೆ. ಆದರೆ ಜನಸಾಮಾನ್ಯರನ್ನು ರಕ್ಷಿಸುವ ಬದಲು ಅವರ ಮೇಲೆಯೇ ಬೆಲೆ ಏರಿಕೆಯ ಹೊರೆ ಹೊರಿಸುವುದು ಅರ್ಥಹೀನವಾಗಿದೆ. ನಮ್ಮ ದೇಶದ ಆರ್ಥಿಕತೆಗೆ ವಿದೇಶಾಂಗ ನೀತಿಯು ಶ್ರೀರಕ್ಷೆಯಂತಿರಬೇಕು. ಆದರೆ ಮೋದಿ ಸರ್ಕಾರದ ಟೊಳ್ಳು ವಿದೇಶಾಂಗ ನೀತಿಯಿಂದಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ.

CM Siddaramaiah
ಗಾಯದ ಮೇಲೆ ಬರೆ: ವಾಣಿಜ್ಯ LPG ಸಿಲಿಂಡರ್ ದರ 993 ರೂ ಏರಿಕೆ; ಹೊಸ ದರ ಇಂದಿನಿಂದ ಜಾರಿ..!

ವಾಣಿಜ್ಯ ಗ್ಯಾಸ್‌ ದರ ಏರಿಕೆಯಿಂದ ಕೇವಲ ವ್ಯಾಪಾರಸ್ಥರು ಮಾತ್ರ ಸಂಕಷ್ಟಕ್ಕೆ ಒಳಗಾಗುವುದಿಲ್ಲ, ದೇಶದ ಪ್ರತಿಯೊಂದು ಮನೆಯ ಮೇಲೂ ದರ ಏರಿಕೆಯ ಪರಿಣಾಮ ಬೀರುತ್ತದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಣ್ಣಪುಟ್ಟ ಕ್ಯಾಂಟೀನ್‌ಗಳು ಹಾಗೂ ಕೆಟರಿಂಗ್‌ ಸೇವೆಗಳಿಗೆ ತಮ್ಮ ಆಹಾರ ಪದಾರ್ಥಗಳ ಮೇಲೆ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಇದರಿಂದ ಗ್ರಾಹಕರು ದೈನಂದಿನ ಊಟ-ಉಪಹಾರಗಳಿಗೆ ಹೆಚ್ಚು ಹಣಕೊಡುವ ಪರಿಸ್ಥಿತಿ ಬರುತ್ತದೆ. ನಗರದ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳ ಮಾಲೀಕರು ಹೆಚ್ಚು ಸಂಕಷ್ಟ ಅನುಭವಿಸಬೇಕಾಗುತ್ತದೆ. ಒಂದು ಲೋಟ ಟೀ ಯಿಂದ ಒಂದು ಸರಳ ಊಟದವರೆಗೆ, ಎಲ್ಲವೂ ದುಬಾರಿಯಾಗುತ್ತದೆ.

ಕಾರ್ಮಿಕರ ದಿನದ ಕೊಡುಗೆ ಎಂಬಂತೆ ಮೋದಿಯವರು ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಏರಿಸುವ ಮೂಲಕ ಶ್ರಮಿಕ ವರ್ಗಕ್ಕೆ ಬರೆ ಎಳೆದಿದ್ದಾರೆ. ಒಂದೆಡೆ ದರಗಳು ದುಬಾರಿಯಾದರೆ, ಮತ್ತೊಂದೆಡೆ ಆದಾಯ ಕ್ಷೀಣಿಸುತ್ತಿದೆ. ದೈನಂದಿನ ಜೀವನ ಮತ್ತಷ್ಟು ದುಸ್ತರವಾಗುತ್ತಿದೆ. ಕಾರ್ಮಿಕರು ಕೇಂದ್ರ ಸರ್ಕಾರದ ಬಳಿ ಘನತೆಯ ಹಾಗೂ ನೆಮ್ಮದಿಯ ಬದುಕನ್ನು ಕಲ್ಪಿಸುವಂತೆ ಕೇಳಿದರೆ ಬೆಲೆಯೇರಿಕೆ ಮತ್ತು ಸಮರ್ಥನೆಯ ಉತ್ತರವನ್ನು ಕೊಡುತ್ತಿದೆ.

ಇದು ಕೇವಲ ಆರಂಭವಷ್ಟೇ, ಇಂತಹ ಮತ್ತಷ್ಟು ಬೆಲೆ ಏರಿಕೆಯ ಹೊಡೆತಗಳು ಅಪ್ಪಳಿಸಲಿವೆ, ಅದರ ಹೊರೆಯನ್ನು ನಾಗರಿಕರೇ ಹೊತ್ತುಕೊಳ್ಳುವಂತಾಗಲಿದೆ. ಇದು ಮೋದಿ ಮಾದರಿಯ ಆಡಳಿತವಾಗಿದೆ. ಚುನಾವಣೆಯಲ್ಲಿ ಜನರ ದಾರಿ ತಪ್ಪಿಸುವುದು, ಬಳಿಕ ಅವರ ಮೇಲೆ ಹೊರೆ ಹೊರಿಸುವುದು ಮೋದಿಯವರ ಸೂತ್ರವಾಗಿದೆ ಎಂದು ಸಿದ್ದರಾಮಯ್ಯಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com