

ಬೆಂಗಳೂರು: ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲದಿದ್ದರು, ಇದ್ದಕ್ಕಿದ್ದಂತೆ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ, ವಿಚಾರಣೆಗೆ ಹಾಜರಾಗಿ ಎಂದು ಪೊಲೀಸ್ ನೋಟಿಸ್ ಬಂದರೆ ಹೇಗಿರುತ್ತೆ..?
ಇಂತಹ ಆಘಾತಕಾರಿ ಸನ್ನಿವೇಶವೊಂದು ಹೊಸಕೋಟೆ ತಾಲ್ಲೂಕಿನ ಲಕ್ಕೊಂಡನಹಳ್ಳಿ ನಿವಾಸಿ ಎಲ್.ಎಸ್. ಪುನೀತ್ ಅವರಿಗೆ ಎದುರಾಗಿದೆ. ಈ ಘಟನೆ ಕೇವಲ ಒಂದು ಸಾಮಾನ್ಯ ಪ್ರಕರಣವಲ್ಲ, ಪ್ರತೀಯೊಬ್ಬರಿಗೂ ಎಚ್ಚರಿಕೆಯ ಗಂಟೆಯೂ ಹೌದು.
ಪುನೀತ್ ಅವರ 2009ರ ವೋಟರ್ ಐಡಿಯನ್ನು ಬಳಸಿಕೊಂಡು 2024ರ ಹತ್ಯೆ ಪ್ರಕರಣದ ಆರೋಪಿಗಳು ಸಿಮ್ ಕಾರ್ಡ್ ಪಡೆದು, ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳು ಪುನೀತ್ ಅವರ ಐಡಿಯಲ್ಲಿ ತಮ್ಮ ಫೋಟೋ ಬಳಸಿ ಕೃತ್ಯಕ್ಕೆ ಸಿಮ್ ಕಾರ್ಡ್ ಪಡೆದಿದ್ದು, ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣವೊಂದರ ತನಿಖೆ ವೇಳೆ ಹೊಸಕೋಟೆ ತಾಲೂಕಿನ ಎಲ್.ಎಸ್. ಪುನೀತ್ (36) ಅವರಿಗೆ ಪೊಲೀಸರು ನೋಟಿಸ್ ನೀಡಿದಾಗ, ಗುರುತಿನ ಚೀಟಿ (Voter ID) ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ.
2024ರ ಸೆಪ್ಟೆಂಬರ್ 18ರಂದು ವರ್ತೂರಿನ ಸುಲಿಕುಂಟೆ ಕಾಲೋನಿಯ ರೇವಂತ್ ಕುಮಾರ್ (23) ಎಂಬುವವರನ್ನು ಒಂಬತ್ತು ಜನರ ತಂಡ ಅಪಹರಿಸಿ, ತಮಿಳುನಾಡಿನ ಬಾಗಲೂರು ಪೊಲೀಸ್ ವ್ಯಾಪ್ತಿಯಲ್ಲಿ ಕೊಲೆ ಮಾಡಿತ್ತು. ಈ ಪ್ರಕರಣದ ತನಿಖೆಯನ್ನು ನಂತರ ಬೆಂಗಳೂರಿನ ವರ್ತೂರು ಪೊಲೀಸರಿಗೆ ವರ್ಗಾಯಿಸಲಾಯಿತು.
ಕೊಲೆ ಆರೋಪಿಗಳು ಬಳಸಿದ್ದ ಮೊಬೈಲ್ ಸಿಮ್ ಕಾರ್ಡ್‌ಗಳ ವಿವರಗಳನ್ನು ಪರಿಶೀಲಿಸಿದಾಗ, ಒಂದು ಸಿಮ್ ಕಾರ್ಡ್ ಪುನೀತ್ ಅವರ ವಿಳಾಸದಲ್ಲಿ ನೋಂದಣಿಯಾಗಿರುವುದು ಕಂಡುಬಂದಿದೆ. ಇದರ ಆಧಾರದ ಮೇಲೆ ಪೊಲೀಸರು ಪುನೀತ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಮೇ 2, 2026 ರಂದು ವಿಚಾರಣೆಗೆ ಹಾಜರಾದ ಪುನೀತ್ ಅವರಿಗೆ ಪೊಲೀಸರು ದಾಖಲೆಗಳನ್ನು ತೋರಿಸಿದಾಗ ಆಘಾತಕ್ಕೊಳಗಾಗಿದ್ದಾರೆ.
ಮುತ್ತನಲ್ಲೂರು ಕ್ರಾಸ್‌ನಲ್ಲಿರುವ ಅಂಗಡಿಯೊಂದರಲ್ಲಿ ಸಿಮ್ ಕಾರ್ಡ್ ಪಡೆಯಲು ಪುನೀತ್ ಅವರ 2009ರ ಮತದಾರರ ಗುರುತಿನ ಚೀಟಿಯನ್ನು ಬಳಸಲಾಗಿತ್ತು. ಆದರೆ, ಆ ಕಾರ್ಡ್‌ನಲ್ಲಿದ್ದ ವಿಳಾಸ ಪುನೀತ್ ಅವರದ್ದಾಗಿದ್ದರೂ, ಫೋಟೋ ಮಾತ್ರ ಆರೋಪಿಯದ್ದಾಗಿತ್ತು.
ತಮ್ಮ ದಾಖಲೆಗಳನ್ನು ಬಳಸಿಕೊಂಡು ಕ್ರಿಮಿನಲ್ ಕೃತ್ಯ ಎಸಗಿರುವುದರ ವಿರುದ್ಧ ಪುನೀತ್ ಈಗ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ವ್ಯಕ್ತಿತ್ವದ ವಂಚನೆ (Cheating by personation) ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement