ಹೆಚ್.ಡಿ ದೇವೇಗೌಡರಿಗೆ 94ನೇ ಜನ್ಮದಿನದ ಸಂಭ್ರಮ: ವ್ಹೀಲ್‌ಚೇರ್‌ನಲ್ಲೇ ಕುಳಿತು ಸಾರ್ವಜನಿಕರ ಹಿತಕ್ಕಾಗಿ ಹೋರಾಟದ ಸಂಕಲ್ಪ!

ಹಿರಿಯ ರಾಜಕಾರಣಿಯಾಗಿರುವ ದೇವೇಗೌಡರಿಗೆ ಆಯುರಾರೋಗ್ಯ ಮತ್ತು ಮತ್ತಷ್ಟು ಕಾಲ ನಾಡಿನ ಜನರ ಸೇವೆ ಮಾಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಕೋರಿದ್ದಾರೆ.
H  D Deve Gowda in Vijayapura programme
ಜನತಾ ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ
Updated on

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ಸಂಸ್ಥಾಪಕ ಹೆಚ್. ಡಿ. ದೇವೇಗೌಡರಿಗೆ 94 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪತ್ನಿ ಚೆನ್ನಮ್ಮ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಕುಟುಂಬದ ಸದಸ್ಯರು, ಜೆಡಿಎಸ್ ಪಕ್ಷದ ಮುಖಂಡರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು

ಹೆಚ್. ಡಿ. ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ದೇವೇಗೌಡರ ದೀರ್ಘಾವಧಿಯ ರಾಷ್ಟ್ರ ಸೇವೆ, ನೀತಿ ನಿರ್ಣಯಗಳ ಬಗೆಗಿನ ಆಳವಾದ ತಿಳಿವಳಿಕೆ ಹಾಗೂ ಜನಪರ ಕಾಳಜಿಯನ್ನು ಶ್ಲಾಘಿಸಿ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಹಿರಿಯ ರಾಜಕಾರಣಿಯಾಗಿರುವ ದೇವೇಗೌಡರಿಗೆ ಆಯುರಾರೋಗ್ಯ ಮತ್ತು ಮತ್ತಷ್ಟು ಕಾಲ ನಾಡಿನ ಜನರ ಸೇವೆ ಮಾಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಕೋರಿದ್ದಾರೆ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್. ಡಿ. ದೇವೇಗೌಡ, ವಯೋಸಹಜ ಆರೋಗ್ಯ ಸಮಸ್ಯೆಗಳಿದ್ದರೂ, ವ್ಹೀಲ್‌ಚೇರ್‌ನಲ್ಲೇ ಕುಳಿತು ಸಾರ್ವಜನಿಕರ ಹಿತಕ್ಕಾಗಿ ಹೋರಾಡುವುದನ್ನು ಮುಂದುವರಿಸುವುದಾಗಿ ಅವರು ತಮ್ಮ ಜನ್ಮದಿನದಂದು ದೃಢ ಸಂಕಲ್ಪ ವ್ಯಕ್ತಪಡಿಸಿದ್ದಾರೆ. ಸಾಧ್ಯವಾದಷ್ಟು ದಿನ ತಮ್ಮ ವ್ಹೀಲ್‌ಚೇರ್‌ನಲ್ಲೇ ಕುಳಿತು ಜನರ ಹಿತಾಸಕ್ತಿಗಾಗಿ ಹೋರಾಡಲು ಬಯಸುತ್ತೇನೆ ಎಂದು ಹೇಳಿದರು.

ಸಾಧ್ಯವಾದಷ್ಟು ದಿನಗಳವರೆಗೆ ಜನರ ಹಿತಾಸಕ್ತಿಗಾಗಿ ಹೋರಾಡುವ ದೃಢ ಸಂಕಲ್ಪ ನನಗಿದೆ. 93 ವರ್ಷ ಪೂರೈಸಿದ್ದೇನೆ ಎಂದು ಹೇಳಿಕೊಂಡು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ನನ್ನ 68 ವರ್ಷಗಳ ರಾಜಕೀಯ ಜೀವನದುದ್ದಕ್ಕೂ ಹೋರಾಡುತ್ತಿದ್ದೇನೆ. ಜನರು ಅದನ್ನು ಎಷ್ಟು ಗುರುತಿಸುತ್ತಾರೆಂದು ನನಗೆ ಚಿಂತೆಯಿಲ್ಲ, ಆದರೆ ಜನರ ಹಿತಾಸಕ್ತಿಗಾಗಿ ಹೋರಾಡುವುದು ನನ್ನ ಮುಂದಿರುವ ವಿಷಯ, ನಾನು ನನ್ನ ಕೆಲಸವನ್ನು ಮಾಡುತ್ತೇನೆ ಎಂದರು.

ಸ್ವೀಡನ್‌ನಿಂದ ಪ್ರಧಾನಿ ಮೋದಿ ಅವರಿಂದ ಹುಟ್ಟುಹಬ್ಬದ ಸಂದೇಶ ಬಂದಿದ್ದು, ಗೃಹ ಸಚಿವ ಅಮಿತ್ ಶಾ ಮತ್ತು ಹಿರಿಯ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ದೂರವಾಣಿ ಮೂಲಕ ಶುಭಾಶಯ ಕೋರಿದ್ದಾರೆ. ಅದೇ ರೀತಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಹುಟ್ಟುಹಬ್ಬದ ಶುಭ ಕೋರಿದ್ದಾರೆ ಎಂದು ದೇವೇಗೌಡರು ತಿಳಿಸಿದರು.

H  D Deve Gowda in Vijayapura programme
94ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ: ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಬರೀ 1 ರೂಪಾಯಿಗೆ ಭೋಜನ ವ್ಯವಸ್ಥೆ..!

2028 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆ ಕೇಳಿದಾಗ, ಪ್ರಾದೇಶಿಕ ಪಕ್ಷವಾಗಿ ಜೆಡಿ(ಎಸ್) ಎನ್‌ಡಿಎಯಲ್ಲಿ ಸಣ್ಣ ಮೈತ್ರಿ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ 2028 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಈಗ ಕೇರಳ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನದೇ ಆದ ಸರ್ಕಾರಗಳನ್ನು ಹೊಂದಿದೆ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ನೋಡೋಣ, ನಾನು ಈಗ ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಪ್ರಾಮಾಣಿಕತೆಯಿಂದ ಪಕ್ಷವನ್ನು ಬಲಪಡಿಸುವತ್ತ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com