ತುಮಕೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತ ವದಂತಿ ನಡುವೆ ಐಕ್ಯತೆಯ ಪ್ರದರ್ಶನವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತುಮಕೂರಿನಲ್ಲಿ ನಡೆದ ‘ಸಾಧನಾ ಸಮರ್ಪಣಾ ಸಮಾವೇಶ’ದಲ್ಲಿ ಒಂದೇ ವೇದಿಕೆ ಹಂಚಿಕೊಂಡರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆಯನ್ನು ಆಚರಿಸಲು ಈ ಸಮಾವೇಶ ಆಯೋಜಿಸಲಾಗಿತ್ತು.
ಅಗತ್ಯ ವಸ್ತುಗಳ, ವಿಶೇಷವಾಗಿ ಇಂಧನದ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣರಾಗಿದ್ದಾರೆ ಎಂದು ಆರೋಪಿಸಿದ ಇಬ್ಬರು ನಾಯಕರು, ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ರಕ್ಷಾಕವಚದಂತೆ ಕೆಲಸ ಮಾಡಿರುವುದರಿಂದ 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾವುದೇ ಕಾಂಗ್ರೆಸ್ ರಾಜ್ಯ ಸರ್ಕಾರ ಸತತ ಎರಡನೇ ಬಾರಿ ಜನರಿಂದ ಮರು ಆಯ್ಕೆಯಾಗಿಲ್ಲ ಎಂಬ ಪ್ರಧಾನಿ ಮೋದಿಯವರ ಇತ್ತೀಚಿನ ಹೇಳಿಕೆಗೆ ಪ್ರತಿಯಾಗಿ ಕರ್ನಾಟಕದ ಈ ನಾಯಕರ ಹೇಳಿಕೆಗಳು ಬಂದಿವೆ.
ರಾಜ್ಯ ಸರ್ಕಾರ ಇಂದು ಮೇ 20 ಬುಧವಾರಕ್ಕೆ ಮೂರು ವರ್ಷ ಪೂರೈಸಲಿದೆ. ಆದರೆ ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ, ಬಳಿಕ ಅದು ಹಿಂಪಡೆಯಲ್ಪಟ್ಟ ಕಾರಣ ಸಮಾವೇಶವನ್ನು ಒಂದು ದಿನ ಮುಂಚಿತವಾಗಿ ನಿನ್ನೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, 2014ರಲ್ಲಿ ಮೋದಿ ಪ್ರಧಾನಿಯಾದಾಗ ಡೀಸೆಲ್ ಮತ್ತು ಪೆಟ್ರೋಲ್ ದರ ಕ್ರಮವಾಗಿ 48 ರೂಪಾಯಿ ಮತ್ತು 70 ರೂಪಾಯಿ ಇತ್ತು. ಅಡುಗೆ ಅನಿಲ ಸಿಲಿಂಡರ್ ಬೆಲೆ 414 ರೂಪಾಯಿ ಆಗಿತ್ತು ಎಂದು ಹೇಳಿದರು.
ಬೆಲೆ ಏರಿಕೆಗೆ ಮೋದಿ ಒಬ್ಬರೇ ಹೊಣೆ. ಮೋದಿ ಆಡಳಿತದಿಂದ ಅದಾನಿ ಮತ್ತು ಅಂಬಾನಿ ಅವರಂತಹ ಉದ್ಯಮಿಗಳು ಮಾತ್ರ ಲಾಭ ಪಡೆದಿದ್ದಾರೆ. ಮಧ್ಯಮ ವರ್ಗ ಮತ್ತು ಬಡವರಿಗೆ ಯಾವುದೇ ಪ್ರಯೋಜನವಾಗಿಲ್ಲ. ‘ಮೋದಿ, ಮೋದಿ’ ಎಂದು ಘೋಷಣೆ ಕೂಗಿ ಮತಹಾಕಿದವರು ಈಗ ನಿರಾಶರಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಹೇಳಿದ ಅವರು, ಜಿಎಸ್‌ಟಿ ಸಂಗ್ರಹಣೆಯಲ್ಲೂ ರಾಜ್ಯದ ಕೊಡುಗೆ ಅಪಾರವಾಗಿದೆ ಎಂದರು.
ರಾಜ್ಯದ ಆದಾಯ ದೇಶದ ತಲಾ ಆದಾಯಕ್ಕಿಂತ ಹೆಚ್ಚಾಗುವಂತೆ ನಾವು ಅಭಿವೃದ್ಧಿ ಸಾಧಿಸಿದ್ದೇವೆ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದರಿಂದ 2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಅವರು ಘೋಷಿಸಿದರು.
ಇದೇ ವೇಳೆ ಡಿಕೆ ಶಿವಕುಮಾರ್ ಕೂಡ ಕಾಂಗ್ರೆಸ್ 2028ರಲ್ಲೂ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿದರು. ಜೆಡಿಎಸ್ ಮತ್ತು ಬಿಜೆಪಿ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜನರೂ ಇದನ್ನು ನೆನಪಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಸರ್ಕಾರ ಜನರ ಬದುಕಿನಲ್ಲಿ ಬದಲಾವಣೆ ತಂದಿದೆ. ನಿಮ್ಮ ಆಶೀರ್ವಾದ ಸದಾ ನಮ್ಮೊಂದಿಗಿರುತ್ತದೆ. ಪರಿಶ್ರಮ ಇರುವಲ್ಲಿ ಇತಿಹಾಸ ನಿರ್ಮಾಣವಾಗುತ್ತದೆ. ನಂಬಿಕೆ ಇರುವಲ್ಲಿ ಅದ್ಭುತಗಳು ಸಂಭವಿಸುತ್ತವೆ. ಸತ್ಯ ಇರುವಲ್ಲಿ ಗೆಲುವು ಇರುತ್ತದೆ ಎಂದು ಹೇಳಿದರು.
ಆಕ್ಸ್ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ ಕರ್ನಾಟಕದ ಐದು ಗ್ಯಾರಂಟಿಗಳು ಬಡವರ ಜೀವನದಲ್ಲಿ ಸಾಮಾಜಿಕ ಬದಲಾವಣೆ ತಂದಿವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಎಲ್ಲಾ ರಾಜ್ಯಗಳೂ ನಮ್ಮ ಮಾದರಿಯನ್ನು ಅನುಸರಿಸುತ್ತಿವೆ. ನಮ್ಮ ಬಿಜೆಪಿ ಸ್ನೇಹಿತರು ಮತ್ತು ಪ್ರಧಾನಮಂತ್ರಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದರು. ಇಂದು ಪ್ರತಿಯೊಂದು ರಾಜ್ಯದಲ್ಲೂ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಯಾವುದೇ ಪಕ್ಷವೂ ಇದರಿಂದ ಹೊರತಾಗಿಲ್ಲ. ಗ್ಯಾರಂಟಿಗಳು ದೇಶದ ಮಾದರಿಯಾಗಿವೆ. ಅವರು ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಬೆಂಗಳೂರು ನಿವಾಸಿಗಳು ತಮ್ಮ ಆಸ್ತಿಗಳ ಬಿ ಖಾತೆಯನ್ನು ಎ ಖಾತೆಗೆ ಪರಿವರ್ತಿಸಲು ಮಾರ್ಗಸೂಚಿ ಮೌಲ್ಯದ ಕೇವಲ 2% ಪಾವತಿಸುವ ಯೋಜನೆಯನ್ನು ಬಳಸಬಾರದು, ತಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಉಚಿತವಾಗಿ ಮಾಡಿಕೊಡುತ್ತೇವೆ ಎಂದು ಹೇಳಿದ್ದ ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ 1,52,492 ಕುಟುಂಬಗಳಿಗೆ ಹಕ್ಕುಪತ್ರಗಳು ಮತ್ತು ಇತರೆ ಭೂ ಸಂಬಂಧಿತ ಸೌಲಭ್ಯಗಳನ್ನು ವಿತರಿಸಲಾಯಿತು. ಇದಲ್ಲದೆ, ಕರ್ನಾಟಕದ ಅಭಿವೃದ್ಧಿ ಮಾದರಿಯನ್ನು ಪರಿಚಯಿಸುವ ‘ನವ ಕರ್ನಾಟಕ’ ಪ್ರದರ್ಶನವೂ ಆಯೋಜಿಸಲಾಗಿತ್ತು. ಸರ್ಕಾರದ ವಿವಿಧ ಇಲಾಖೆಗಳ ಸಾಧನೆಗಳನ್ನು ಒಳಗೊಂಡ ಅದೇ ಹೆಸರಿನ ಕಾಫಿ ಟೇಬಲ್ ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು.
Advertisement